ಪ್ರೋ|| ಜೀವಂಧರ ಕುಮಾರ ಹೋತಪೇಟಿಯವರಿಗೆ “ಸಿದ್ಧಾಂತ ಕೀರ್ತಿ” ಪ್ರಶಸ್ತಿ

0
205

ರಿಪ್ಪನ್‌ಪೇಟೆ (ಹೊಂಬುಜ) : ಜೈನ ಮಠದ ವತಿಯಿಂದ ನೀಡುವ 2022ನೇ ಸಾಲಿನ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ನಿವೃತ್ತ ಉಪನ್ಯಾಸಕರಾದ ಹುಬ್ಬಳ್ಳಿಯ ಶ್ರೀ ಜೀವಂಧರ ಕುಮಾರ ಹೋತಪೇಟಿ ಇವರಿಗೆ ನೀಡಲಾಗುವುದೆಂದು ಪರಮಪೂಜ್ಯ ಶ್ರೀಗಳು ಘೋಷಿಸಿರುತ್ತಾರೆ.

ಈ ಪ್ರಶಸ್ತಿಯನ್ನು ವಾರ್ಷಿಕ ಮಹಾರಥಯಾತ್ರಾ ಮಹೋತ್ಸವದ ಮುನ್ನಾ ದಿನವಾದ 24-03-2022ನೇ ಗುರುವಾರ ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು. ಇವರು ಜೈನಾಗಮಗಳ ಅನುವಾದ, ಗ್ರಂಥರಚನೆ, ಗ್ರಂಥ ಸಂಪಾದನೆ, ಉಪನ್ಯಾಸ ಇನ್ನಿತರ ಕಾರ್ಯಗಳಲ್ಲಿ ವಿಶೇಷ ಅನುಭವ ಹೊಂದಿರುತ್ತಾರೆ.

ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. (ಇತಿಹಾಸ) ಪದವೀಧರರಾಗಿ ಶ್ರವಣಬೆಳಗೋಳದ ‘ಶ್ರೀ ಗೋಮ್ಮಟೇಶ್ವರ ಮಹಾವಿದ್ಯಾಲಯ’ ದಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಇವರು ದೇವ-ಗುರು-ಶಾಸ್ತ್ರಗಳಲ್ಲಿವಿಶೇಷ ನಿಷ್ಠೆ ಹೊಂದಿದ್ದಾರೆ.

ಜೈನಧರ್ಮ – ಸಂಸ್ಕೃತಿ – ಪರಂಪರೆ – ಚರಿತ್ರೆಗಳ ಅಧ್ಯಯನ – ಆಧ್ಯಾಪನ – ಬರವಣಿಗೆ ಮುಂದುವರಿಸಿಕೊಂಡು ಬಂದಿದ್ದಾರೆ. ಆಕಾಶವಾಣಿ ಮೂಲಕ ತಮ್ಮ ವಿಚಾರಗಳನ್ನು ಪ್ರಸಾರಗೊಳಿಸಿದ್ದಾರೆ.

ಇವರ ಇತಿಹಾಸಿಕ ಕಾದಂಬರಿ ‘ಚಾವುಂಡರಾಯ ವೈಭವ’ ಕ್ಕೆ ‘ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪುರಸ್ಕಾರ’ ಲಭಿಸಿದ್ದು ಅದು ಹಿಂದಿ ಭಾಷೆಗೆ ಅನುವಾದಗೊಂಡಿದೆ. ‘ರತ್ನಾಕರಂಡ ಶ್ರಾವಕಾಚಾರ’ ದ ಸಂಕ್ಷಿಪ್ತ ಆವೃತ್ತಿಯನ್ನು, ಜೈನಧರ್ಮ : ನೂರು ಸತ್ಯಗಳು, ರಯಣಸಾರ, ಅಹಿಂಸೆ, ಮಹಾಪುರಾಣದ ವೈರಾಗ್ಯೋದಯದ ಚಿತ್ರಣಗಳು (ಪ್ರಥಮ ಬಹುಮಾನ) ಇವರ ಪ್ರಮುಖ ರಚನೆಗಳಾಗಿವೆ.

ಶ್ರೀಯುತರು ‘ಧವಲತ್ರಯ ಅನುವಾದ ಯೋಜನೆ’ ಯಲ್ಲಿ ಕಷಾಯಪಾಹುಡದ 3ನೇಯ ಭಾಗ, ಧವಲಾದ 14 ಸಂಪುಟ ಮತ್ತು ಮಹಾಬಂಧದ 7ನೇ ಸಂಪುಟಗಳ ಅನುವಾದ ಕಾರ್ಯದಲ್ಲಿ ತೊಡಗಿರುತ್ತಾರೆ. ಹೊಂಬುಜದ ಸಿದ್ಧಾಂತಕೀರ್ತಿ ಪ್ರಕಾಶನ ಗ್ರಂಥಮಾಲೆಯ ಸಂಪಾಧಕ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿರುತ್ತಾರೆ. ಪ್ರಾಕೃತ ವಿದ್ಯಾಪೀಠದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಹೊಂಬುಜ ಜೈನ ಮಠದಿಂದ ನೀಡುವ ಸಿದ್ದಾಂತಕೀರ್ತಿ ಪ್ರಶಸ್ತಿಯು ರೂ. 51,000 ಗಳ ನಗದು ಮತ್ತು ಅಂಗವಸ್ತ್ರ ಸಹಿತ ನೀಡಿ ಗೌರವಿಸಲಾವುದು. ಇದುವರೆಗೂ ಅನೇಕ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ಸುಮಾರು 5 ದಶಕಗಳಿಂದ ಶ್ರೀಮಠದಿಂದ ನೀಡಲಾಗುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here