ಪ.ಜಾತಿ ಮತ್ತು ಪಂಗಡ ದೌರ್ಜನ್ಯ ಸಂತ್ರಸ್ತರಿಗೆ ಶೀಘ್ರ ಪರಿಹಾರ ಮಂಜೂರು: ಜಿಲ್ಲಾಧಿಕಾರಿ ಕೆ.ಎನ್ ರಮೇಶ್

0
118

ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಯಡಿಯಲ್ಲಿ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಧನ ನೀಡಲು ಬಾಕಿಯಿರುವ ಸಂತ್ರಸ್ತರಿಗೆ ಶೀಘ್ರವಾಗಿ ಪರಿಹಾರ ಧನ ದೊರಕಿಸಲು ಮತ್ತು ಪರಿಹಾರ ಧನ ಪಡೆಯಲು ಪ್ರಮಾಣಪತ್ರ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿಯಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲ್ಲೂಕಿನಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ ತಾಲ್ಲೂಕು ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆ ನಡೆಸಿ ಜಿಲ್ಲಾ ಮಟ್ಟದ ಸಮಿತಿಗೆ ವರದಿ ನೀಡಬೇಕು. ಪ್ರತೀ ತಿಂಗಳು ಕುಂದು ಕೊರತೆ ಸಭೆ ನಡೆಸಿ, ಅಹವಾಲು ಸ್ವೀಕರಿಸಿ ಅನುಪಾಲನಾ ವರದಿ ಸಲ್ಲಿಸಬೇಕು, ತಪ್ಪಿದಲ್ಲಿ ತಹಶೀಲ್ದಾರ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತ ವ್ಯಕ್ತಿ ಲಭ್ಯವಿಲ್ಲ ಎಂಬ ಮಾಹಿತಿಯಿದ್ದರೆ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರನ್ನು ಸಂಪರ್ಕಿಸಿ ಅರ್ಜಿ ಹಾಕಿಸಿ ತಹಶೀಲ್ದಾರರಿಂದ ಅಗತ್ಯ ಪ್ರಮಾಣಪತ್ರ ಪಡೆದುಕೊಂಡು 15 ದಿವಸಗಳ ಒಳಗೆ ಇತ್ಯರ್ಥಡಿಸಬೇಕು. ಏನಾದರೂ ಸಮಸ್ಯೆಗಳಾದಲ್ಲಿ ಒಂದು ವಾರದೊಳಗೆ ಗಮನಕ್ಕೆ ತಂದರೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಎಚ್ ಮಾತನಾಡಿ, ಚಾರ್ಜ್‌ಶೀಟ್ ಆದ ನಂತರ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಆರೋಪಿಗಳ ಕಡೆಯಿಂದ ಸಂತ್ರಸ್ತರಿಗೆ, ಸಾಕ್ಷಿದಾರರಿಗೆ ಏನಾದರೂ ತೊಂದರೆಯಾದರೆ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿ, ತಿಂಗಳ ಪ್ರತೀ ನಾಲ್ಕನೇ ಭಾನುವಾರ ಪ್ರತೀ ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಎಸ್‌ಎಸಿ & ಎಸ್‌ಟಿ ಕುಂದುಕೊರತೆ ಸಭೆ ನಡೆಸಲಾಗುವುದು ಮತ್ತು ಮೂರನೇ ಭಾನುವಾರ ನೊಂದವರ ದಿನ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಮನ್ಸ್ ಪ್ರತಿಯನ್ನು ಮತ್ತು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿರುವ ಹಾಜರಾತಿ ಪ್ರತಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಒದಗಿಸಿದಲ್ಲಿ ಸಂತ್ರಸ್ತರಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಈ ಬಗ್ಗೆ ಸಂತ್ರಸ್ತರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಪ್ರಯಾಣ ಭತ್ಯೆಗೆ ಬಂದಿರುವ ಅರ್ಜಿಗಳು, ಎಷ್ಟು ಸಂತ್ರಸ್ತರಿಗೆ ಪ್ರಯಾಣ ಭತ್ಯೆ ನೀಡಲಾಗಿದೆ, ಎಷ್ಟು ಬಾಕಿಯಿವೆ ಮುಂತಾದವುಗಳ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಚೈತ್ರಾ ಮಾತನಾಡಿ, 2021 ಮತ್ತು 2022ನೇ ವರ್ಷದಲ್ಲಿ ಇದುವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಯಡಿಯಲ್ಲಿ ಒಟ್ಟು 55 ಪ್ರಕರಣಗಳು ದಾಖಲಾಗಿದ್ದು, ಒಟ್ಟು ರೂ. 61.50 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಪ್ರಮಾಣಪತ್ರಗಳನ್ನು ಸಲ್ಲಿಸದೇ ಇರುವುದು, ಸಂತ್ರಸ್ತ ವ್ಯಕ್ತಿ ಲಭ್ಯವಿಲ್ಲದಿರುವುದು ಮುಂತಾದ ಕಾರಣಗಳಿಂದ 14 ಪ್ರಕರಣಗಳು ಪರಿಹಾರ ಧನ ಮಂಜೂರು ಮಾಡಲು ಬಾಕಿಯುಳಿದಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here