ಬಗರ್‌ಹುಕುಂ ರೈತರಿಗೆ ಭೂಗಳ್ಳರು ಎಂಬ ಅರ್ಥದಲ್ಲಿ ನೋಟಿಸ್ ನೀಡುತ್ತಿರುವ ಸಂಖ್ಯೆ ಹೆಚ್ಚಿದ್ದು ಅದು ರೈತ ಕುಲಕ್ಕೆ ಮಾಡುತ್ತಿರುವ ಅವಮಾನ ; ಮಧು ಬಂಗಾರಪ್ಪ

0
274

ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಬಗರ್‌ಹುಕುಂ ರೈತರಿಗೆ ಭೂಗಳ್ಳರು ಎಂಬ ಅರ್ಥದಲ್ಲಿ ನೋಟಿಸ್ ನೀಡುತ್ತಿರುವ ಸಂಖ್ಯೆ ಹೆಚ್ಚಿದ್ದು ಅದು ರೈತ ಕುಲಕ್ಕೆ ಮಾಡುತ್ತಿರುವ ಅವಮಾನ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಆಯೋಜಿಸಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಬಿಜೆಪಿ ಸರಕಾರ ಬಗರ್‌ಹುಕುಂ ರೈತರಿಗೆ 192/ಎ ಕಾಯ್ದೆಯಲ್ಲಿ ಅಪರಾಧ ಶಿಕ್ಷೆ, ದಂಡ ಎಂಬ ಅಧ್ಯಯ ಸೇರ್ಪಡೆಗೊಳಿಸಿ ಬಗರ್‌ಹುಕುಂ ರೈತರನ್ನು ಭೂಗಳ್ಳರು ಎಂದು ಬಿಂಬಿಸುತ್ತಿದೆ. ನೋಟಿಸ್ ಪಡೆದ ರೈತರು ತಮ್ಮ ವಕೀಲರ ಮೂಲಕ ಧರ‍್ಯವಾಗಿ ಪ್ರಕರಣ ಎದುರಿಸಿ ಎಂದರಲ್ಲದೆ ಈ ಕುರಿತು ಜಿಲ್ಲೆಯಾಧ್ಯಾಂತ ಪಕ್ಷಾತೀತವಾಗಿ ಹೋರಾಟ ಹಮ್ಮಿಕೊಂಡು ತಕ್ಕ ಉತ್ತರ ನೀಡುವ ಯೋಜನೆ ಹಾಕಿಕೊಂಡಿದ್ದು ಅದಕ್ಕೆ ಎಲ್ಲ ರೈತರು ಬೆಂಬಲಿಸುವಂತೆ ಮನವಿ ಮಾಡಿದರು.

ಅರಣ್ಯ ಹಕ್ಕುಕಾಯ್ದೆ ಅಡಿ ಜಿಲ್ಲೆಯಲ್ಲಿ 97075ಸಾವಿರ ಅರ್ಜಿ ಸಲ್ಲಿಸಿದ್ದರೂ ಕೇವಲ 2444ಅರ್ಜಿ ಮಾತ್ರ ಇತ್ಯರ್ಥಗೊಂಡಿವೆ, 48254 ಅರ್ಜಿ ವಜಾಗೊಂಡು, 46377 ಇತ್ಯರ್ಥಗೊಳ್ಳದೆ ತಟಸ್ಥವಾಗಿವೆ. ತಾಲೂಕಿನಲ್ಲಿ ಬಗರ್‌ಹುಕುಂ ಸಮಿತಿ ಅಧ್ಯಕ್ಷರಾದ ಬಿಎಸ್‌ವೈ ಬದಲಿಗೆ ಸಂಸದ ಬಿ.ವೈ.ರಾಘವೇಂದ್ರ 3ವರ್ಷ ಸಭೆ ಕರೆಯದೆ ಕಳೆದ ತಿಂಗಳು ಪ್ರಥಮ ಸಭೆ ನಡೆಸಿ ಒಂದೂ ಅರ್ಜಿ ಇತ್ಯರ್ಥಗೊಳಿಸಿಲ್ಲ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಫಾರಂ 50, 53 ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿ ಎಲ್ಲ ವರ್ಗದ ಜನರಿಗೂ ಭೂಮಿ ಹಕ್ಕು ನೀಡಿದ್ದರು. ತಾಲೂಕಿನ ಸಮಗ್ರ ನೀರಾವರಿಗೆ ಬಳಿಗಾರ್ ಜತೆಯಲ್ಲಿ ಪಾದಯಾತ್ರೆ ನಡೆಸಿದಾಗ ಬಿಜೆಪಿ ಹೊಟ್ಟೆಕಿಚ್ಚಿನಿಂದ ಅದನ್ನು ತಡೆಗಟ್ಟುವ ಪ್ರಯತ್ನ ನಡೆಸಿತು ಅದನ್ನು ಮೀರಿ ಕಾಂಗ್ರೆಸ್, ಬಿಜೆಪಿ ಕೆಲ ಮುಖಂಡರು ಪಕ್ಷಾತೀತವಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದನ್ನು ಸ್ಮರಿಸಿದರು.

ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ನಾಗರಾಜಗೌಡ ಮಾತನಾಡಿ, ನಾನು ಬಿಜೆಪಿಯಲ್ಲಿ ಇದ್ದಾಗ ಸಂಸದ ಬಿ.ವೈ.ರಾಘವೇಂದ್ರ ಕುಮ್ಮಕ್ಕಿನಿಂದ ಬಳಿಗಾರ್, ಮಧು ಬಂಗಾರಪ್ಪ ಪಾದಯಾತ್ರೆ ತಡೆಯುವ ಪ್ರಯತ್ನ ನಡೆಸಿದ್ದೆ ಒಳ್ಳೆಯ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಇಂದು ಕ್ಷಮೆ ಕೋರುತ್ತೇನೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಬಡವರು, ರೈತರಿಗೆ ಉತ್ತಮ ಯೋಜನೆ ನೀಡಿದ ಎಸ್.ಬಂಗಾರಪ್ಪ ಋಣ ಬಹಳವಿದೆ ಅದನ್ನು ನಾವೆಲ್ಲ ಸ್ಮರಿಸಬೇಕು. ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಪಕ್ಷಕ್ಕೆ ಅವರ ತಂದೆಯವರೆ ಸೇರಿದಷ್ಟು ಶಕ್ತಿ ತುಂಬಿದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಹುಲ್ಮಾರ್ ಮಹೇಶ್, ಉಳ್ಳಿ ದರ್ಶನ್, ಶಿವು ಹುಲ್ಮಾರ್ ಮಾತನಾಡಿ, ಈಗಾಗಲೆ ಕರ‍್ಯಕರ್ತರು ನಿರಂತರ ಸಂಪರ್ಕದಲ್ಲಿದ್ದು ನಿರೀಕ್ಷೆಗೂ ಮೀರಿ ಸದಸ್ಯತ್ವ ನೋಂದಣಿ ಮಾಡುವ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮಾತನಾಡಿ, ಬಿಜೆಪಿ ಈ ಮೊದಲು ವಿವಾದಾತ್ಮಕ ಹೇಳಿಕೆಗೆ ಮಂಗಳೂರು ಆಯ್ಕೆ ಮಾಡಿಕೊಂಡಿತ್ತು ಈಗ ಶಿವಮೊಗ್ಗ ಕೇಂದ್ರಬಿಂದುವಾಗಿ ಮಾಡಿದೆ. ವಿವಾದ ಮುಂದಿಟ್ಟುಕೊಂಡು ಬಿಜೆಪಿ ಅಧಿಕಾರ ನಡೆಸುತ್ತಿರಬಹುದು ಆದರೆ ಕಾಂಗ್ರೆಸ್ ಪ್ರತಿ ಮನೆ ಮನದಲ್ಲಿ ಇದೆ ಯುವಜನತೆ ಕಾಂಗ್ರೆಸ್, ಬಿಜೆಪಿ ಯೋಜನೆ ಹೋಲಿಸಿದರೆ ಯಾರು ಬಡವರು, ರೈತರಪರ ಎನ್ನುವುದು ತಿಳಿಯುತ್ತದೆ ಎಂದರು.

ಭದ್ರಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರಮೇಶ್, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೌಲಿ ಗಂಗಾಧರಪ್ಪ, ಮುಖಂಡರಾದ ಎಸ್.ಪಿ.ದಿನೇಶ್, ಶಿವುನಾಯ್ಕ, ಮಾರವಳ್ಳಿ ಉಮೇಶ್, ಭಂಡಾರಿ ಮಾಲತೇಶ್ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here