23.2 C
Shimoga
Sunday, November 27, 2022

ಬದುಕಿಗೆ ಭಗವಂತನ ಕೊಡುಗೆ ಅಪಾರ ; ಶ್ರೀ ರಂಭಾಪುರಿ ಜಗದ್ಗುರುಗಳು


ಶಿವಮೊಗ್ಗ : ದೇವರು ಅವ್ಯಕ್ತ ನಿರಾಕಾರ. ಬದುಕಿ ಬಾಳುವ ಮನುಷ್ಯನಿಗೆ ದೇವರು ಕೊಟ್ಟ ಕೊಡುಗೆ ಅಮೂಲ್ಯ ಮತ್ತು ಅಪಾರವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಸಮೀಪದ ಗಾಜನೂರು ಗ್ರಾಮದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ದೇವರು ಇಲ್ಲದೇ ಇರುವ ಯಾವ ಸ್ಥಾನವೂ ಇಲ್ಲ. ಕಣ್ಣಿಗೆ ದೇವರು ಕಾಣದೇ ಇದ್ದರೂ ಆತನ ಅಸ್ತಿತ್ವವನ್ನು ಸದಾ ಕಾಣುತ್ತೇವೆ. ನಾವು ನಿಂತ ನೆಲ, ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವಂಥ ಗಾಳಿ ದೇವರ ಅಮೂಲ್ಯ ಕೊಡುಗೆ. ಏನೆಲ್ಲ ಸಂಪನ್ಮೂಲ ಕೊಟ್ಟ ಭಗವಂತನನ್ನು ದಿನದಲ್ಲಿ ಎರಡು ನಿಮಿಷ ಸ್ಮರಿಸಿ ಪೂಜಿಸಿದರೆ ಜನ್ಮ ಸಾರ್ಥಕಗೊಳ್ಳುತ್ತದೆ. ವೀರಶೈವ ಧರ್ಮದಲ್ಲಿ ದೇವರನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುತ್ತಾರೆ. ಇಷ್ಟಲಿಂಗಾರ್ಚನೆಯಿಂದ ಎಲ್ಲ ಅನಿಷ್ಟಗಳು ದೂರವಾಗಿ ಇಷ್ಟಾರ್ಥಗಳು ದೊರಕುತ್ತವೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದ ಜಗದ್ಗುರುಗಳು ಗಂಗಾಧರಯ್ಯ ಸುಮಾ ದಂಪತಿಗಳು ನಿರಂತರ ಕಾಯಕದ ಮೂಲಕ ಜನರಲ್ಲಿ ಭಕ್ತಿಯನ್ನು ತುಂಬಿದ್ದಾರೆ. ಅವರ ಮಕ್ಕಳು ಕೂಡಾ ಆದರ್ಶ ದಾರಿಯಲ್ಲಿ ಸಾಗುತ್ತಿರುವುದು ಅವರ ಧರ್ಮ ಶ್ರದ್ಧೆ ಮತ್ತು ಪೀಠಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.


ಮಳಲಿ ಸಂಸ್ಥಾನಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರಿ ಮತ್ತು ಗುರು ಇದ್ದರೆ ಬಾಳಿನಲ್ಲಿ ಬೆಳಗು ಕಾಣಲು ಸಾಧ್ಯ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿ ಇರಬೇಕೆಂದರು. ಇದೇ ಸಂದರ್ಭದಲ್ಲಿ ಗಾಯತ್ರಿ ಮರುಳಸಿದ್ಧಸ್ವಾಮಿ ರಚಿಸಿದ ಸಾಹಿತ್ಯ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

ನಂದಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮರುಳಸಿದ್ಧಸ್ವಾಮಿ ಮತ್ತು ಪ್ರಸನ್ನ ರೇಣುಕ ಸಹೋದರರು ಜಗದ್ಗುರುಗಳಿಗೆ ಭಕ್ತಿ ಗೌರವ ಸಲ್ಲಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!