ಬಾಗಿಲು ಮುಚ್ಚುವ ಹಂತದಲ್ಲಿ ಡಿಟಿಪಿ ಸೆಂಟರ್‌ಗಳು !

0
497

ಹೊಸನಗರ: ಇತ್ತೀಚಿನ ದಿನಗಳಲ್ಲಿ ನಗರ ಹಾಗೂ ಪಟ್ಟಣಗಳಲ್ಲಿ ಸಿ.ಎಸ್ಸಿ, ಸೆಂಟರ್ ಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದವರ ಪಾಡು ಹೇಳ ತೀರದು, ಸರಿ ಸುಮಾರು 5-6 ತಿಂಗಳಿನಿಂದ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ರಾಮ ಒನ್ ನಿಂದ ಅನೇಕ ಸಿ.ಎಸ್ಸಿ ಕೇಂದ್ರಗಳಲ್ಲಿ ಗ್ರಾಹಕರಿಲ್ಲದೇ, ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಂಡವಾಳ ಹೂಡಿಕೊಂಡು ವ್ಯವಹಾರವಿಲ್ಲದೆ ಉದ್ಯೋಗವಿಲ್ಲದೇ ಮೌನಿಗಳಾಗಿ ಕೂರುವಂತಹಾ ಪರಿಸ್ಥಿತಿ ನಿರ್ಮಣವಾಗಿದ್ದು, ಅನೇಕರಿಗೆ ಜೀವನ ನಡೆಸುವುದು ಕಷ್ಟಕರವಾಗಿದೆಯಲ್ಲದೆ, ಡಿಟಿಪಿ ಕೇಂದ್ರಗಳು ಬಾಗಿಲು ಮುಚ್ಚುವ ಹಂತದಲ್ಲಿದ್ದಾರೆ.

ಗ್ರಾಮೀಣ ಪ್ರದೇಶದ ಜನರು ಹಾಗೊಮ್ಮೆ ಹೀಗೊಮ್ಮೆ ಡಿಟಿಪಿ ಕೇಂದ್ರಗಳಿಗೆ ಸಿ ಎಸ್ ಸಿ ಕೇಂದ್ರಗಳಿಗೆ ಆಗಮಿಸಿ ಅಗತ್ಯವಿರುವ ದಾಖಲೆಗಳನ್ನೋ ಅಥವಾ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಆನ್‌ಲೈನ್ ಅರ್ಜಿಗಳನ್ನೋ ಅಥವಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇ- ಶ್ರಮ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದರು, ಈಗ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರು ಕೃಷಿ ಕಾರ್ಮಿಕರು ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೊಡಗುತ್ತಿದ್ದಾರೆ. ಹೀಗಿರುವಾಗ ಸಿ ಎಸ್ ಸಿ ಕೇಂದ್ರಗಳ ಪರಿಸ್ಥಿತಿ ಇನ್ನಷ್ಟು ಕೆಳಮಟ್ಟಕ್ಕೆ ತಲುಪುವುದರಲ್ಲಿ ಸಂದೇಹವಿಲ್ಲ.

ಕೃಷಿಇಲಾಖೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯಿತಿ, ಕಾರ್ಮಿಕರ ಹಾಗೂ ಇ- ಶ್ರಮ ಸೇರಿದಂತೆ ವಿವಿಧ ಇಲಾಖೆಗಳು ನಗರ ಪಟ್ಟಣಗಳಲ್ಲಿಯೇ ಇರುವುದರಿಂದ ಸರ್ಕಾರಿ ಸೇವೆಗೆ ಗ್ರಾಮೀಣ ಪ್ರದೇಶದ ಜನರು ನಗರ ಪಟ್ಟಣಗಳಲ್ಲಿನ ಇಲಾಖೆಗಳಿಗೆ ಬರುವಂತಹ ಸ್ಥಿತಿ ಇದೆ. ಸಾರ್ವಜನಿಕರಿಗೆ ಯಾವುದೇ ದಾಖಲಾತಿಗಳನ್ನು ಪಡೆಯಲು, ಅರ್ಜಿ ಸಲ್ಲಿಸಲು ಡಿ.ಟಿ.ಪಿ ಸೆಂಟರ್ ಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದ್ದು ಅಲ್ಲದೇ, ವಿವಿಧ ದಾಖಲಾತಿಗಳ ನಕಲನ್ನು ಪಡೆಯಲು ಜೆರಾಕ್ಸ್ ಅಂಗಡಿಗಳಿಗೆ ಮೊರೆ ಹೋಗುವ ಪರಿಸ್ಥಿತಿ ಇದೆ,

ರಾಜ್ಯದಲ್ಲಿ ಲಕ್ಷಾಂತರ ಜನರು ನಗರ, ಪಟ್ಟಣಗಳಲ್ಲಿ ಬಾಡಿಗೆ ಮಳಿಗೆಯಲ್ಲಿ ಸಿ.ಎಸ್ ಸಿ, ಕೇಂದ್ರಗಳನ್ನು, ಡಿ.ಟಿ.ಪಿ‌, ಸೆಂಟರ್‌ಗಳನ್ನ ಮತ್ತು ಜೆರಾಕ್ಸ್ ಅಂಗಡಿಯನ್ನೇ ಅವಲಂಬಿತರಾಗಿ ಜೀವನ‌ ನಡೆಸುತ್ತಿರುವವರು ಇದ್ದಾರೆ. ಇಂತಹ ಡಿ.ಟಿ.ಪಿ ಸೆಂಟರ್ ಹೊಂದಿರುವ ಅನೇಕರಿಗೆ ಜೀವನ ನಡೆಸುವುದು, ಮಳಿಗೆ ಬಾಡಿಗೆ ಕಟ್ಟುವುದು ಕಷ್ಟಕರವಾಗಿದೆ. ಇದನ್ನೇ ಅವಲಂಬಿತರಾದವರಿಗೆ ಬೇರೆ ಉದ್ಯೋಗ ಸಿಗದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಾರೆ.

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಮಳೆಗಾಲ ವಾತಾವರಣ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದ್ದು, ಕೃಷಿಕರು ಗೊಬ್ಬರ ಬೀಜಗಳನ್ನು ಪಡೆಯಲು ಪಹಣಿಯ ಅವಶ್ಯಕತೆ ಇದೆ, ಇಂತಹ ಪಹಣಿಯನ್ನು ಪಡೆಯಲು ರೈತರು ಸೇವಾ ಸಿಂಧು ಕೇಂದ್ರಗಳಿಗೆ ಮೊರೆ ಹೋಗುತ್ತಿದ್ದಾರೆ, ಅನೇಕ ಸೇವಾ ಸಿಂಧು ಕೇಂದ್ರಗಳು ರಾಜ್ಯದ ಮಹತ್ವ ಕಾಂಕ್ಷಿ ಗ್ರಾಮ ಒನ್ಯೋಜನೆಯಿಂದ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಮಳಿಗೆ ತೆರೆದಿರುವುದರಿಂದ ಗ್ರಾಮೀಣದ ಪ್ರದೇಶದ ಜನರು ನಗರ ಪಟ್ಡಣಗಳಿಗೆ ಬರುವುದು ಕಡಿಮೆಯಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಮಳಿಗೆಗಳಿಗೆ ಅವಶ್ಯಕವಾಗಿರುವ ಮೂಲ ಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಕಾರ್ಮಿಕ ಇಲಾಖೆ, ಉಪನೊಂದಾವಣೆ ಇಲಾಖೆ, ಇನ್ನಿತರ ಯಾವುದೇ ಇಲಾಖೆಗೆ ದಾಖಲಾತಿಗಳನ್ನು ಪಡೆಯಲು ಆನ್ ಲೈನ್ ಮುಖಾಂತರ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಿದಲ್ಲಿ ಪುನಃ ಅರ್ಜಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಪಡೆಯಲು ಗ್ರಾಮ ಒನ್ ಗಳಿಗೆಯೇ ಮೊರೆ ಹೋಗುವಂತಹಾ ಪರಿಸ್ಥಿತಿ ಇರುತ್ತದೆ. ಆದರೆ ಗ್ರಾಮ ಒನ್ ಗಳಲ್ಲಿ ಅರ್ಜಿ ಪಡೆಯುವಾಗ ಮಾತ್ರ ನೆಟ್ ವರ್ಕ್ ಸೌಲಭ್ಯವಿರುತ್ತದೆ, ದಾಖಲಾತಿಗಳನ್ನು ನೀಡುವ ಸಂದರ್ಭದಲ್ಲಿ ವಿವಿಧ ಕಾರಣಗಳನ್ನು ಹೇಳುವ ಮೂಲಕ ಅರ್ಜಿದಾರರಿಗೆ ವಿನಾಕಾರಣ ಅಲೆದಾಡಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು, ಜನತೆಯು ತಮ್ಮ ಮೊಬೈಲ್ ಗಳಿಗೆ ನೆಟ್‌ವರ್ಕ್ ಸಿಗುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಅಲ್ಲದೆ ಗ್ರಾಮ ಒನ್ ಕೇಂದ್ರಗಳಲ್ಲಿ ವಿವಿಧ ರೀತಿಯ ಅರ್ಜಿಗಳನ್ನು ಹಾಕಲು ನೆಟ್‌ವರ್ಕ್ ಸಮಸ್ಯೆ ಕೂಡ ಇದೆ. ಶಿವಮೊಗ್ಗ ಜಿಲ್ಲೆಯ ಸಂಸದರಿಂದ ಹೊಸನಗರ, ತೀರ್ಥಹಳ್ಳಿ, ಸಾಗರ ಸೇರಿದಂತೆ ವಿವಿಧ ಗ್ರಾಮಗಳಿಗೆ ನೆಟ್‌ವರ್ಕ್ ಕೊಡಿಸುವ ಭರವಸೆ ಏನೋ ಕೊಡಲಾಗಿತ್ತು. ಹೀಗಿರುವಾಗ ಗ್ರಾಮ್ ಒನ್ ಕೇಂದ್ರಗಳಿಗೆ ನೆಟ್‌ವರ್ಕ ಸಿಗುವುದು ದುಸ್ಥರವಾಗಿದೆ. ಹಾಗೆಯೇ ಸಾರ್ವಜನಿಕರಿಗೆ ಯಾವುದೇ ದಾಖಲಾತಿ ಪಡೆಯ ಬೇಕಾದರೂ ನಗರ ಪಟ್ಟಣಗಳಲ್ಲಿರುವ, ಸೇವಾ ಸಿಂಧು ಕೇಂದ್ರಗಳಿಗೆ, ಡಿಟಿಪಿ ಕೇಂದ್ರಗಳಿಗೆ ಮೊರೆಹೋಗುವಂತಾಗುತ್ತಿದೆ.

ಆದ್ದರಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಗ್ರಾಮ‌ ಒನ್ ಕೇಂದ್ರವು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ಬದಲು ಅನಾನುಕೂಲವೇ ಹೆಚ್ಚಾಗುತ್ತಿರುವುದು ಮೇಲ್ನೋಟಕ್ಕೆ‌ ಕಂಡು ಬರುತ್ತಿದೆ. ಆದ್ದರಿಂದ ನಗರ ಪಟ್ಟಣಗಳಲ್ಲಿ ನೆಟ್‌ವರ್ಕ್ ಸೌಲಭ್ಯವಿರುವುದರಿಂದ ಹಾಗೂ ನಗರ ಪಟ್ಟಣಗಳಲ್ಲಿ ಮುಖ್ಯ‌ ಕಚೇರಿಗಳಾದ, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಅನೇಕ ಇಲಾಖೆಗಳು ನಗರ ಪಟ್ಟಣ ಕೆಂದ್ರಗಳಲ್ಲೇ ಇರುವುದರಿಂದ ಗ್ರಾಮ ಒನ್ ಕೇಂದ್ರವನ್ನು ರದ್ದುಪಡಿಸಿ ಮೊದಲಿನಂತೆಯೇ ನಗರ ಪಟ್ಟಣಗಳಲ್ಲಿನ ಸೇವಾ ಸಿಂಧು ಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರು ಪಡೆಯುವಂತೆ ಅನುಕೂಲ ಕಲ್ಪಿಸಬೇಕಾಗಿದೆ ಎಂಬುದು ಗ್ರಾಮೀಣ ಪ್ರದೇಶ ಹಾಗೂ ಪಟ್ಟಣಗಳ ಜನತೆಯ ಒತ್ತಾಸೆಯಾಗಿದೆಯಲ್ಲದೇ ಆಶಯಕೂಡ ಆಗಿದೆ.

ವರದಿ: ಪುಷ್ಪ ಜಾಧವ್ ಹೊಸನಗರ
ಜಾಹಿರಾತು

LEAVE A REPLY

Please enter your comment!
Please enter your name here