ಸೊರಬ: ತಾಲ್ಲೂಕು ಬಿಜೆಪಿ ಗೊಂದಲದ ಗೂಡಾಗಿದ್ದು, ಕೆಲವರು ಪಕ್ಷ ಸಂಘಟನೆಗೆ ಹಿನ್ನಡೆ ಮತ್ತು ಬಣ ರಾಜಕೀಯ ಸೃಷ್ಟಿಗೆ ಕಾರಣವಾಗಿದ್ದಾರೆ. ಇಂತಹವರನ್ನು ಕೂಡಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಯುವ ಮುಖಂಡ ಪಿ.ಎಸ್. ಪ್ರಶಾಂತ್ ಕುಬಟೂರು (ಗಿರೀಶ್) ಆಗ್ರಹಿಸಿದರು.
ಶುಕ್ರವಾರ ತಾಲ್ಲೂಕಿನ ಕುಬಟೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಈಗಾಗಲೇ ಮೂರು ಬಣಗಳು ಸೃಷ್ಟಿಯಾಗಿರುವುದು ನಿಜ. ಈ ಹಿನ್ನೆಲೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಸಮ್ಮುಖದಲ್ಲಿ ಗುರುವಾರ ಶಾಸಕರ ಕಚೇರಿಯಲ್ಲಿ ಸಂಧಾನ ಸಭೆ ಕರೆಯಲಾಗಿತ್ತು. ತಮ್ಮ ಕ್ಷೇತ್ರದಲ್ಲಿ ಒಂದು ಗ್ರಾಪಂ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರಂಜನ ಕುಪ್ಪಗಡ್ಡೆ ಹಾಗೂ ಪಕ್ಷದ ತಾಲ್ಲೂಕು ಮಾಜಿ ಅಧ್ಯಕ್ಷ ಗಜಾನನ ರಾವ್ ನಡೆದುಕೊಂಡ ವರ್ತನೆ ಖಂಡನೀಯ. ಸಭೆಯಲ್ಲಿದ್ದ ಶಾಸಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸಿರುವುದು ವೈಯುಕ್ತಿಕವಾಗಿ ಬೇಸರ ಮೂಡಿಸಿದೆ ಎಂದರು.
ತಾವು ಸಹ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದಿದ್ದು, ರಾಜಕೀಯದ ಆಗು-ಹೋಗುಗಳ ಬಗ್ಗೆ ಅರಿವಿದೆ. ಕಳೆದ 15 ವರ್ಷಗಳ ಹಿಂದೆಯೇ ಜಿಪಂ ಸದಸ್ಯನಾಗಿ ಕಾರ್ಯನಿರ್ವಹಿಸಿ, ಜನ ಸಾಮಾನ್ಯರಲ್ಲದೇ ಎಸ್. ಬಂಗಾರಪ್ಪ ಅವರಿಂದಲೂ ಮೆಚ್ಚುಗೆ ಗಳಿಸಿದ್ದೆ, ಪಕ್ಷದಲ್ಲಿದ್ದು ಪಕ್ಷ ದ್ರೋಹ ಎಸಗುವ ಮುಖಂಡರಿಂದ ರಾಜಕೀಯ ಕಲಿಯುವ ಅಗತ್ಯವಿಲ್ಲ. ಒಂದಡೆ ಶಾಸಕರು ಗ್ರಾಪಂ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಯನ್ನು ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರೆ, ಮತ್ತೊಂದು ಬಣ ತನ್ನ ಕ್ಷೇತ್ರದಲ್ಲಿಯೇ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಾಗದ ವ್ಯಕ್ತಿಗೆ ಪಕ್ಷದ ಅಧ್ಯಕ್ಷಗಿರಿ ನೀಡಿದೆ. ಇದರಿಂದ ಪಕ್ಷ ತಾಲ್ಲೂಕಿನಲ್ಲಿ ಬೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಿಲ್ಲಾ ಮಟ್ಟದ ಮುಖಂಡರಿಗೆ ಸಂಪೂರ್ಣ ಮಾಹಿತಿ ಇದೆ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಬಣ ರಾಜಕಾರಣಕ್ಕೆ ಕಾರಣರಾಗಿರುವ ವ್ಯಕ್ತಿಗಳ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಂಡು, ಪಕ್ಷದಿಂದಲೇ ಉಚ್ಛಾಟಿಸಬೇಕು. ಇಲ್ಲವಾದಲ್ಲಿ ಮುಂದಿನ 15 ದಿನಗಳವರೆಗೆ ಕಾದು ನೋಡಿ, ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದರು.
Related