ಬಿಜೆಪಿಯವರ ಮಾತನ್ನು ಕೇಳುವ ಪೊಲೀಸರು ಕೇಸರಿ ಸಮವಸ್ತ್ರ ತೊಡಲಿ ; ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿ

0
326

ತೀರ್ಥಹಳ್ಳಿ: ಕೇಂದ್ರ ಮತ್ತು ರಾಜ್ಯ ಎರಡು ಕಡೆಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲಿಗೆ ಪ್ರತಿದಿನ ಜನರ ಹೃದಯ ಕೊಲ್ಲುವ ಕೆಲಸವನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು.

ಶುಕ್ರವಾರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಜಾಬ್ ನಿಂದ ಪ್ರಾರಂಭವಾದ ಘಟನೆ ಇಂದು ವ್ಯಾಪಾರಕ್ಕೆ ನಿರ್ಬಂಧ ಹಾಕುವ ಮಟ್ಟಕ್ಕೆ ಬಂದು ನಿಂತಿದೆ.

ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಒಬ್ಬ ನಾಯಕರು ಬಿಜೆಪಿ ಪಕ್ಷದಲ್ಲಿ ಇಲ್ಲ ಮೋದಿಗೂ ಪುಟಿನ್ ಗೂ ಯಾವುದೇ ವ್ಯತ್ಯಾಸವಿಲ್ಲ ಮೋದಿ ಆಡಳಿತಕ್ಕೆ ಬಂದ 8ವರ್ಷದಿಂದ ಧರ್ಮಕ್ಕೆ ಸಂಬಂಧಿಸಿದ ಕಾನೂನುಗಳು ತಂದಿದೆ ಹೊರತು ಜನಪರವಾದ ಯಾವುದೇ ಕಾರ್ಯಕ್ರಮಗಳನ್ನು ತಂದಿರುವ ಉದಾಹರಣೆ ಇಲ್ಲ.

ಬೆಲೆ ಏರಿಕೆ ನಿರುದ್ಯೋಗ ಸಮಸ್ಯೆ ಬಗ್ಗೆ ಯಾವ ಕ್ರಮವನ್ನೂ ಕೇಂದ್ರ ರಾಜ್ಯ ಸರ್ಕಾರ ಕೈಗೊಂಡಿಲ್ಲ ಪ್ರತಿದಿನ ಬೆಲೆ ಏರಿಕೆಯಿಂದ ಸಾರ್ವಜನಿಕರು ಹೈರಾಣಾಗಿ ಹೋಗಿದ್ದಾರೆ. ಇನ್ನೂ ನಿರುದ್ಯೋಗಿಗಳು ಸಾಯುವ ಪರಿಸ್ಥಿತಿ ಬಂದು ತಲುಪಿದ್ದಾರೆ ಎಂದು ಬಿಜೆಪಿ ಆಡಳಿತ ಹಾಗೂ ಗೃಹ ಸಚಿವರ ವಿರುದ್ಧ ತಮ್ಮ ಮಾತಿನ ಸುರಿಮಳೆಗೈದರು.

ಇನ್ನು ತಾಲ್ಲೂಕಿನಲ್ಲಿ ಗೃಹ ಸಚಿವರ ಬೆಂಬಲಿಗರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದು ಬುಕ್ಲಾಪುರದ ಸರ್ಕಾರಿ ಕ್ವಾರೆ ಹೆಸರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ದಿನಕ್ಕೆ ಲಕ್ಷಾಂತರ ರೂಪಾಯಿ ಮರಳು ಅಕ್ರಮ ಸಾಗಣೆ ಆಗುತ್ತಿದೆ. ನನ್ನ ಅವಧಿಯಲ್ಲಿ 23 ಕ್ವಾರೆ ಇದ್ದು ಮರಳು ಕೊರೆಯವರಿಗೂ ನನಗೂ ಸಂಪರ್ಕವೇ ಇರಲಿಲ್ಲ. ಅಂದು ಬೆಳಿಗ್ಗೆ ಎದ್ದಾಗ ನಾವು ಜಮೀನಿಗೆ ಹೊದರೆ ಆರಗ ಮರಳು ಕ್ವಾರೆಗೆ ಹೋಗುತ್ತಿದ್ದರು. ಇಂದು ಮರಳು ಕ್ವಾರೆ ಬಗ್ಗೆ ಸಚಿವರ ಮಾತೆ ಇಲ್ಲವಾಗಿದೆ.

ಬಂದೂಕು ತರಬೇತಿ ಹೆಸರಿನಲ್ಲಿ ಅವರ ಬೆಂಬಲಿಗರು ಹಣ ಹೊಡೆಯುತ್ತಿದ್ದಾರೆ. ನನ್ನ ಅವಧಿಯಲ್ಲಿ ಕೂಡ ಬಂದೂಕು ತರಬೇತಿಯನ್ನು ನಡೆಸಿದ್ದು ಕಾರ್ಯಕ್ರಮಕ್ಕೆ 1200 ವೆಚ್ಚ ತಗಲಿತ್ತು ಆದರೆ ಇಂದು ತರಬೇತಿ ಹೆಸರಿನಲ್ಲಿ ಬಿಜೆಪಿ ಪ್ರಮುಖರು 26 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ.‌ ಇದಕ್ಕೆ ಸೂಕ್ತ ದಾಖಲೆ ಎಸ್ ಪಿ, ಡಿವೈಎಸ್ಪಿ ಕೊಡದಿದ್ದರೆ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.

ನಾಲ್ಕು ವರ್ಷಗಳ ಅವಧಿಯಲ್ಲಿ ಇವರು ಎಷ್ಟು ಬಗರ್ ಹುಕುಂ ಅರ್ಜಿ ಮಂಜೂರು ಮಾಡಿದ್ದಾರೆ ಎಂದು ಜನರಿಗೆ ತಿಳಿಸಲಿ ಇದರ ಬಗ್ಗೆ ದಿನ ನಿತ್ಯ ಹೋರಾಟ ಮಾಡಬೇಕು. ಆನೆ ಹಿಡಿಯುವ ಬಗ್ಗೆ ಆರಗ ನನ್ನ ಅವಧಿಯಲ್ಲಿ ಆಗುಂಬೆಯಿಂದ ತೀರ್ಥಹಳ್ಳಿ ವರೆಗೆ ಕಪ್ಪೆ ಯಾತ್ರೆ ಮಾಡಿದ್ದರು. ಆದರೆ ಇವರ ಆಳ್ವಿಕೆಯ ಅವಧಿಯಲ್ಲಿ ತಾಲೂಕಿನ ಆಗುಂಬೆ, ಉಂಬ್ಳೇಬೈಲು ಕಡೆಗಳಲ್ಲಿ ನಿತ್ಯ ಆನೆಗಳು ಓಡಾಡುತ್ತಲೇ ಇದ್ದು ಈಗ ಆನೆ ಹಿಡಿಯುವ ಗೋಜಿಗೆ ಹೋಗದೆ ಆನೆಯಿಂದ ರೈತರ ತೋಟ, ಜಮೀನುಗಳಲ್ಲಿ ತೊಂದರೆ ಆದವರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಪೋಲಿಸ್ ಠಾಣೆಯಲ್ಲಿ ಬಿಜೆಪಿಯವರು ದೂರು ಕೊಟ್ಟರೆ ಕೇಸು ದಾಖಲಿಸುತ್ತಾರೆ.

ಬೇರೆ ವ್ಯಕ್ತಿಗಳು ಯಾರೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುವುದು ಇಲ್ಲ ನಮ್ಮವರನ್ನು ಬಿಡಿ ಎದುರು ಗಡೆಯವರನ್ನು ಒಳಗೆ ಹಾಕಿ ಎಂದು ಸಚಿವರು ಹೇಳುತ್ತಾರೆ ಗೃಹ ಸಚಿವರು ಹೇಳಿದ ಹಾಗೆ ಕೇಳುವ ಕ್ಷೇತ್ರದ ಪೊಲೀಸರಿಗೆ ಕೇಸರಿ ಸಮವಸ್ತ್ರ ನೀಡಲಿ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಆಡಳಿತ ನಾಯಕರ ದುರಾಡಳಿತ ವಿರುದ್ಧ ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಜಿ ಎಸ್ ನಾರಾಯಣ್ ರಾವ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಾದ ಕೆಸ್ತೂರು ಮಂಜುನಾಥ್ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ,ವಿಲಿಯಂ ಮಾರ್ಟಿಸ್, ಯಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here