ಬಿ.ಎಡ್ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಮಸ್ಯೆ ಸರಿಪಡಿಸುವಂತೆ & ಸರ್ಕಾರಿ ವಸತಿ ನಿಲಯಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ NSUI ಪ್ರತಿಭಟನೆ

0
209

ಶಿವಮೊಗ್ಗ: ಬಿ.ಎಡ್ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಗುತ್ತಿರುವ ವಿದ್ಯಾರ್ಥಿ ವೇತನ ಸಮಸ್ಯೆ ಸರಿಪಡಿಸುವಂತೆ ಹಾಗೂ ಸರ್ಕಾರಿ ವಸತಿ ನಿಲಯಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಎನ್‌ಎಸ್ಯುಐ ಕಾಯರ್ತರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಸರ್ಕಾರಿ ಕೋಟಾದಲ್ಲಿ ಬಿ.ಎಡ್ ಪದವಿ ವ್ಯಾಸಂಗ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶುಲ್ಕ ವಿನಾಯಿತಿ ನೀಡಿದ್ದು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ನಂತರ ರಾಜ್ಯ ಸರ್ಕಾರ ಕಾಲೇಜುಗಳಿಗೆ ಶುಲ್ಕಭರಿಸುತ್ತದೆ. ಆದರೆ ಕಾಲೇಜುಗಳಿಗೆ ಮೂರು ವರ್ಷಗಳಿಂದ ಸಂಪೂರ್ಣ ಶುಲ್ಕ ಸಂದಾಯವಾಗಿರುವುದಿಲ್ಲ. ಇದರಿಂದ ವಿದ್ಯಾರ್ಥಿಗಳೇ ಶುಲ್ಕ ಭರಿಸುವಂತೆ ಕಾಲೇಜುಗಳು ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸಬೇಕುಎಂದು ಆಗ್ರಹಿಸಿದರು.

ಆಡಳಿತ ಮಂಡಳಿ ಕೋಟಾದಲ್ಲಿ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಇದರಿಂದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಕೂಡಲೇ ಸಮಸ್ಯೆ ಸರಿಪಡಿಸಿ ಸರ್ಕಾರಿ ಹಾಗೂ ಆಡಳಿತ ಮಂಡಳಿ ಕೋಟಾದಡಿ ಶಿಕ್ಷಣ ಪಡೆಯುತ್ತಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಪದವಿ ಶಿಕ್ಷಣ ಹಾಗೂ ಬಿ.ಎಡ್ ವಿದ್ಯಾರ್ಥಿಗಳ ಶೈಕ್ಷಣಿಕ ಅವಧಿಯು ಬೇರೆ ಬೇರೆ ಆಗಿದ್ದು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಸಮಯ ನೀಡಲಾಗುತ್ತಿರುತ್ತದೆ. ಇದರಿಂದ ಬಿ.ಎಡ್. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅನೇಕ ಸಮಸ್ಯೆ ಎದುರಾಗುತ್ತಿವೆ. ಆದ್ದರಿಂದ ಮುಂದಿನ ವರ್ಷದಿಂದ ಬಿ.ಎಡ್. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಪ್ರತ್ಯೇಕ ಸಮಯಾವಕಾಶ ನೀಡಬೇಕು.

ಸರ್ಕಾರಿ ಕೋಟಾದಡಿ ಹಾಗೂ ಆಡಳಿತ ಮಂಡಳಿ ಕೋಟಾದಲ್ಲಿ ಬಿ.ಎಡ್. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸುತ್ತಿಲ್ಲ. ಸರ್ಕಾರಿ ಕೋಟಾದಡಿ ಬಿ.ಎಡ್. ಶಿಕ್ಷಣ ಪಡೆಯುತ್ತಿರುವುದರಿಂದ ವಸತಿ ನಿಲಯಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸರ್ಕಾರದ ನಿಯಮಗಳಿಂದ ಬಿ.ಎಡ್.ವ್ಯಾಸಂಗಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ಆದ್ದರಿಂದ ಬೇರೆ ಜಿಲ್ಲೆಗಳಿಂದ ಮತ್ತೊಂದು ಜಿಲ್ಲೆಯಲ್ಲಿ ಬಿ.ಎಡ್ ಶಿಕ್ಷಣ ಪಡೆಯುವ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಬೃಹತ್ ಮಟ್ಟದಲ್ಲಿ ವಿದ್ಯಾರ್ಥಿಗಳು ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಸಿ.ಜಿ. ಮಧುಸೂದನ್, ಕೆ. ಚೇತನ್, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯಕುಮಾರ್ ಎಸ್.ಎನ್., ನಗರಾಧ್ಯಕ್ಷ ಚರಣ್, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ಪ್ರಮುಖರಾದ ಗಿರೀಶ್, ಆಕಾಶ್, ವಿಕಾಸ್, ಚಂದ್ರೋಜಿ, ಮಂಜು, ಕಾವ್ಯ, ಅಶ್ವಿನಿ, ಪೂಜಾ, ಭಾನುಪ್ರಕಾಶ್, ವಿದ್ಯಾ, ರಂಜಿತ, ರೇವಾಲಿ ಮುಂತಾದವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here