ಬಿ.ವಿ. ಕಾರಂತ ರಂಗ ನಮನ | ರಂಗಭೂಮಿಯಿಂದ ಪರಸ್ಪರ ಸಂಬಂಧಗಳನ್ನು ಬೆಳೆಸುವ ಕಾರ್ಯ: ಕೃಷ್ಣಮೂರ್ತಿ ಕವತ್ತಾರ್

0
237

ಶಿವಮೊಗ್ಗ: ಮನುಷ್ಯ ಮನುಷ್ಯರ ನಡುವೆ ಪರಸ್ಪರ ಸಂಬಂಧವನ್ನು ಬೆಳೆಸುವ ಕಾರ್ಯವನ್ನು ರಂಗಭೂಮಿ ಮಾಡುತ್ತಿದೆ ಎಂದು ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅವರು ಹೇಳಿದರು.

ಅವರು ಭಾನುವಾರ ಶಿವಮೊಗ್ಗ ರಂಗಾಯಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸರಣಿ ಅಂಗವಾಗಿ ಆಯೋಜಿಸಲಾಗಿದ್ದ ಬಿ.ವಿ.ಕಾರಂತ ಅವರ ಜನ್ಮದಿನ ನೆನಪಿನ ರಂಗ ಸಂಗೀತ ಹಾಗೂ ಶಿವಮೊಗ್ಗ ರಂಗಾಯಣ ರೆಪರ್ಟರಿ ನಾಟಕ ವಿದುರಾಶ್ವಥದ ವೀರಗಾಥೆ ಹತ್ಯಾಕಾಂಡ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇಂದು ಮನುಷ್ಯರ ನಡುವಿನ ಸಂಬಂಧ ತೆಳುವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ರಂಗಭೂಮಿ ಮನುಷ್ಯರ ನಡುವಿನ ಸಾಮರಸ್ಯ, ಬಾಂಧವ್ಯವನ್ನು ಬೆಳೆಸುವಂತಹ ಮಹತ್ತರವಾದ ಕಾರ್ಯವನ್ನು ನಡೆಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಅವರು, ರಂಗಭೀಷ್ಮ ಬಿ.ವಿ.ಕಾರಂತ ಅವರು ದೇಶದ ರಂಗಭೂಮಿಗೆ ಹೊಸ ಸ್ವರೂಪವನ್ನು ನೀಡಿದವರು. ದೇಶದಲ್ಲಿ ರಂಗಚಟುವಟಿಕೆಗಳಿಗೆ ಹೊಸ ರೂಪವನ್ನು ಅವರು ನೀಡಿದ್ದಾರೆ ಎಂದು ಹೇಳಿದರು.

ಇತಿಹಾಸವನ್ನು ಅರಿಯದೆ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ. ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ರೂಪಿಸಲಾಗಿರುವ ರಂಗ ಚಟುವಟಿಕೆಗಳು ದೇಶಾಭಿಮಾನವನ್ನು ಬೆಳೆಸುವಂತಹ ಕಾರ್ಯವನ್ನು ಮಾಡಲಿ ಎಂದರು.

ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಂಗ ಸಂಗೀತ ಕಾರ್ಯಕ್ರಮವನ್ನು ನಡೆಸಿದ ಧಾರವಾಡದ ಬಸವಲಿಂಗಯ್ಯ ಹಿರೇಮಠ, ನಾಟಕಕಾರ ಬೇಲೂರು ರಘುನಂದನ್, ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ, ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಮತ್ತಿತರರು ಉಪಸ್ಥಿತರಿದ್ದರು. ಮಂಜುನಾಥ ಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರಿಬಿದನೂರು ತಾಲೂಕಿನ ವಿಧುರಾಶ್ವಥದಲ್ಲಿ ನಡೆದ ಧ್ವಜ ಸತ್ಯಾಗ್ರಹ ಹಾಗೂ ಹತ್ಯಾಕಾಂಡ ಹಿನ್ನೆಲೆಯ ಘಟನೆ ಆಧಾರಿತ ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶಿಸಿದ, ಶಿವಮೊಗ್ಗ ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿದ `ಹತ್ಯಾಕಾಂಡ` ನಾಟಕ ಮೆಚ್ಚುಗೆಗೆ ಪಾತ್ರವಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here