ಬೆಂಗಳೂರು ನಗರಕ್ಕಿಂತ ಹೆಚ್ಚು ವಿಸ್ತಾರವುಳ್ಳ ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರ ಮರು ಮಂಜೂರು ಮಾಡಬೇಕು: ಪ್ರತಿಭಟನಾಕಾರರ ಆಗ್ರಹ

0
756

ಹೊಸನಗರ : ಬೆಂಗಳೂರು ನಗರಕ್ಕಿಂತ ಹೆಚ್ಚು ವಿಸ್ತಾರವಾದ ಹೊಸನಗರ ತಾಲೂಕು ಶಾಸಕರು ಇಲ್ಲದೆ ಸಂಪೂರ್ಣ ಬಡವಾಗಿದೆ. ಹೊಸನಗರಕ್ಕಿಂತ ಕಡಿಮೆ ವಿಸ್ತಾರವುಳ್ಳ ಬೆಂಗಳೂರು ನಗರ 28 ಶಾಸಕರನ್ನು, ನಾಲ್ಕು ಲೋಕಸಭಾ ಸದಸ್ಯರನ್ನು, 199 ಕಾರ್ಪೊರೇಟರ್ ಗಳನ್ನು ಹೊಂದಿದೆ. ಆದರೆ 175 ಕಿ.ಮೀ. ಉದ್ದದ ವಿಸ್ತಾರವುಳ್ಳ ಹೊಸನಗರ ತಾಲೂಕು ಶಾಸಕರು ಇಲ್ಲದೆ ಬಡವಾಗಿದೆ ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ, ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ಭೂ ವಿಸ್ತಾರದಂತೆ ಹೊಸನಗರ ಕನಿಷ್ಟ ಎರಡು ಶಾಸಕರನ್ನು ಹೊಂದಬೇಕಿದೆ. ತಾಲೂಕಿನಲ್ಲಿ ವಿದ್ಯುತ್ ಯೋಜನೆಗಾಗಿ 6 ಆಣೆಕಟ್ಟುಗಳನ್ನು ಕಟ್ಟಿದ್ದು ಇದರ ಪರಿಣಾಮ ಈ ಭಾಗದ ಜನತೆ ಗುಳೆ ಹೋಗಿದ್ದರಿಂದ ಜನಸಂಖ್ಯೆ ಕುಂಠಿತಗೊಂಡಿದೆ.

ಪ್ರಸ್ತುತ ಒಂದು ಲಕ್ಷಕ್ಕಿಂತ ಹೆಚ್ಚು ಮತದಾರರು ಹೊಸನಗರ ತಾಲೂಕಿನಲ್ಲಿದೆ. ನಗರ ಹೋಬಳಿಯನ್ನು ಹೊಸನಗರ ತಾಲೂಕಿಗೆ ಸೇರಿಸಿ ಕ್ಷೇತ್ರಕ್ಕೆ ಮರುಜೀವ ನೀಡುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

ಈಶಾನ್ಯ ಭಾರತದ ಮೀಜೋರಾಂ, ಅಸ್ಸಾಂ, ಅರುಣಾಚಲ ಪ್ರದೇಶ, ನಾಗಲ್ಯಾಂಡ್ ಮುಂತಾದ ಕೆಲವು ರಾಜ್ಯಗಳಲ್ಲಿ ಭೌಗೋಳಿಕ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು, ಜನಸಂಖ್ಯೆಯನ್ನು ಪರಿಗಣಿಸಿ ವಿಧಾನಸಭಾ ಕ್ಷೇತ್ರಗಳನ್ನು ರಚಿಸಲಾಗಿದೆ. ಆದುದರಿಂದ ಇದರ ಆಧಾರದ ಮೇಲೆ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸೃಷ್ಟಿಸುವುದು, ಪ್ರಜಾಪ್ರಭುತ್ವದ ದೃಷ್ಟಿಯಿಂದ ಸೂಕ್ತವಾಗಿರುತ್ತದೆ. ರಾಜ್ಯಾಡಳಿತ ಹಾಗೂ ಚುನಾವಣಾ ಆಯೋಗ ತುರ್ತಾಗಿ ಈ ಬಗ್ಗೆ ಮರುಪರಿಶೀಲಿಸಿ ಶಿಫಾರಸು ಮಾಡುವಂತೆ ಸಹ ಜನತೆ ಆಗ್ರಹಿಸಿದ್ದಾರೆ.

ಸೈಕಲ್ ನಲ್ಲಿ ರಿಪ್ಪನ್‌ಪೇಟೆಯಿಂದ ದೆಹಲಿಗೆ..!

ಸಾಮಾಜಿಕ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಮಾತನಾಡಿ, ಕ್ಷೇತ್ರದ ಬಗ್ಗೆ ಕೈಚೆಲ್ಲಿ ಕುಳಿತುಕೊಳ್ಳದೇ ಅಕ್ಟೋಬರ್ 2ರಂದು ರಿಪ್ಪನ್‌ಪೇಟೆಯಿಂದ ನವದೆಹಲಿಗೆ ಸೈಕಲ್ ಮೂಲಕ ತೆರಳಿ ಚುನಾವಣಾ ಆಯೋಗ ಹಾಗೂ ಪ್ರಧಾನಮಂತ್ರಿಯನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ಚರ್ಚಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ವೀರೇಶ್ ಆಲವಳ್ಳಿ ಮಾತನಾಡಿ, ಹೊಸನಗರ ತಾಲೂಕು ಗುಡ್ಡಗಾಡು ಪ್ರದೇಶಗಳಿಂದ ತುಂಬಿದ ಪ್ರಕೃತಿ ರಮಣೀಯ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಇದ್ದು ಬಿದನೂರು ಸಂಸ್ಥಾನವನ್ನು ಹೊಂದಿದೆ ಇಲ್ಲಿಗೆ ಎಲ್ಲರ ಸಮಸ್ಯೆಗಳನ್ನು ಪರಿಹರಿಸುವ ಪ್ರತ್ಯೇಕ ಕ್ಷೇತ್ರದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here