ಬೆನ್ನಿಗೆ ಕಬ್ಬಿಣದ ಕೊಂಡಿ ಹಾಕಿ ಬೃಹತ್ ವಾಹನ ಎಳೆದು ಹರಕೆ ತೀರಿಸಿದ ಭಕ್ತರು !

0
635

ಚಿಕ್ಕಮಗಳೂರು: ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಹಾಕಿಕೊಂಡು ಹೀಗೆ ಟ್ರ್ಯಾಕ್ಟರ್, ಲಾರಿ, ಕಾರು, ಆಟೋಗಳನ್ನು ಎಳೆಯುತ್ತಿರುವುದು ಯಾವುದೋ ಶಕ್ತಿ ಪ್ರದರ್ಶನದ ಸ್ಪರ್ಧೆಯಲ್ಲ ಇದೊಂದು ಹರಕೆ ಕಾಯಕ.

ನಾವು ಮಾಮೂಲಿಯಾಗು ದೇವರಿಗೆ ಉಪವಾಸ ಇದ್ದೂ‌ ಅಥವಾ ಮಂಡೆ (ತಲೆಕೂದಲು) ನೀಡಿಯೋ ಅಥವಾ ವಿಶಿಷ್ಟ ರೀತಿಯ ಅಡುಗೆಯನ್ನು ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದನ್ನು ನೋಡಿರ್ತಿವಿ. ಆದರೆ ಕಾಫಿನಾಡಿನ ಕರುಮಾರಿಯಮ್ಮ ದೇವರ ಭಕ್ತರು ಹರಕೆ ತೀರಿಸುವುದೇ ವಿಭಿನ್ನ.

ನಗರದ ಕರುಮಾರಿಯಮ್ಮನ ಭಕ್ತರು ಈ ರೀತಿ ವಿಭಿನ್ನವಾಗಿ ಹರಕೆ ತೀರಿಸುವುದು ಸಾಮಾನ್ಯ, ಈ ಬಾರಿ 26 ಜನರು ತಮ್ಮ ಹರಕೆಯನ್ನು ತೀರಿಸಿದರು. ದೇವರ ಜಾತ್ರೆಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ದಂಟರಮಕ್ಕಿಯ ಕೆರೆಕೋಡಿಯಮ್ಮನ ಸನ್ನಿಧಿಯಲ್ಲಿ ಕರಗ ಪೂಜೆ ನೇರವೇರಿಸಿ ಬಳಿಕ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಮೂರ್ನಾಲ್ಕು ಕೊಂಡಿಗಳನ್ನು (ಅಳಲು) ಹಾಕಿಕೊಂಡು ಟ್ರ್ಯಾಕ್ಟರ್, ಆಟೋ, ಕಾರು, ಮಿನಿ ಲಾರಿಯಂತಹ ಬೃಹತ್ ವಾಹನಗಳನ್ನು ಕೆರೆಕೋಡಿಯಮ್ಮ ದೇವಸ್ಥಾನದಿಂದ ಕರುಮಾರಿಯಮ್ಮ ದೇವಸ್ಥಾನದವರೆಗೆ ಎಳೆದುಕೊಂಡು ಹೋಗುವ ಮೂಲಕ ಭಕ್ತಿಭಾವ ಮೆರೆದರು. ಈ ವೇಳೆ ಸಂಬಂಧಿಕರು, ಜಾತ್ರೆಯಲ್ಲಿ ಭಾಗಿಯಾದವರು ಗೋವಿಂದ ಗೋವಿಂದ ಎಂದು ಅವರಿಗೆ ಸ್ಥೈರ್ಯ ತುಂಬಿದರು. ಈ ವಿಭಿನ್ನ ಆಚರಣೆಗೆ ಅಳಲು ಹಾಕುವುದು ಎಂದು ಸ್ಥಳೀಯವಾಗಿ ಕರೆಯುತ್ತಾರೆ.

ಇನ್ನು ಕೆಲವು ಭಕ್ತರು ತಮ್ಮ ಕಾಲು, ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು (ಅಳಲು) ಹಾಕಿಕೊಂಡು ದೇವರ ಕಳಸವನ್ನು ಕುತ್ತಿಗೆಗೆ ಹಾಕಿಕೊಂಡು ವಾಹನದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ನೇತು ಬಿದ್ದು ಸಾಗಿದ್ದು ಅಬ್ಬಾ ಎನ್ನುವಂತಿದ್ದರೆ ಮತ್ತೆ ಕೆಲವು ಮಕ್ಕಳು ಬಾಯಿಗೆ ಕಬ್ಬಿಣದ ಸರಳುಗಳನ್ನು ಹಾಕಿಕೊಂಡು ಸಾಗಿದ್ದು ಮೈ ಜುಂಮ್ಮೆನ್ನುವಂತಿತ್ತು.

ಇನ್ನು ಜಾತ್ರೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನದಿಂದ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗಿದವು.

ಜಾಹಿರಾತು

LEAVE A REPLY

Please enter your comment!
Please enter your name here