ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಭಿನ್ನ ಪ್ರತಿಭಟನೆ

0
325

ಶಿಕಾರಿಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲ್ಲೂಕು ಕಛೇರಿ ಎದುರು ರಸ್ತೆ ಮಧ್ಯದಲ್ಲಿ ಟೀ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಪಕ್ಷದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 57 ರೂಪಾಯಿ, ಡೀಸೆಲ್ ದರ 52 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ 350 ರೂಪಾಯಿ ಇತ್ತು. ಆಗ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇವಲ ಒಂದು ರೂಪಾಯಿ, ಗ್ಯಾಸ್ ಸಿಲಿಂಡರ್ ಬೆಲೆ ಐದು ರೂಪಾಯಿಗೆ ಹೆಚ್ಚಿಸಿದ್ದಕ್ಕೆ ಬಿಜೆಪಿ ಪಕ್ಷದವರಾದ ತಾಲ್ಲೂಕಿನ ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿ ಸೇರಿದಂತೆ ಅನೇಕ ಮುಖಂಡರು,‌‌ ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದೆಲ್ಲೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆದರೀಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ, ದಿನೇ ದಿನೇ ಪೆಟ್ರೋಲ್ ಬೆಲೆ ಹೆಚ್ಚುತ್ತಿದ್ದು, ಈಗಾಗಲೇ ಪೆಟ್ರೋಲ್ ಬೆಲೆ 105, ಡೀಸೆಲ್ 97, ಗ್ಯಾಸ್ ಸಿಲಿಂಡರ್ 900 ರ ಗಡಿದಾಟಿದೆಯಲ್ಲದೇ, ಇವುಗಳ ಬೆಲೆ ಏರಿಕೆ ಜೊತೆಗೆ ದೈನಂದಿನ ಬದುಕಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಬೆಲೆಯೂ ಕೂಡ ಏರಿಕೆಯಾಗಿದೆ. ಇದರಿಂದ ಮಹಿಳೆಯರು, ಕೂಲಿ ಕಾರ್ಮಿಕರು ಜನ ಸಾಮಾನ್ಯರು ಕಂಗೆಟ್ಟಿದ್ದಾರೆ ಎಂದರು.

ದೇಶದಲ್ಲಿ ಅಚ್ಚೇದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷದವರು, ಈಗ ದೇಶದಲ್ಲಿ ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ದೇಶದ ಜನತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಬರೆ ಎಳೆಯುವ ಕೆಲಸ ಮಾಡಿದ್ದಾರೆ ಇದು ಖಂಡನೀಯವಾಗಿದೆ. ಈಗಾಗಲೇ ಹಲವಾರು ರೈತರ, ಕೂಲಿಕಾರ್ಮಿಕರ ಹಾಗೂ ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದು, ವಿದ್ಯುತ್ ಸೇರಿದಂತೆ ಅನೇಕ ಸರ್ಕಾರಿ ಸ್ವಾಮ್ಯದ ಇಲಾಖೆಗಳನ್ನ ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಲವು ಬಾರಿ ಎಚ್ಚರಿಕೆಯ ಸಂದೇಶ ನೀಡಿದೆ.ಆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಚ್ಚೆತ್ತು ಕೊಂಡಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರುತ್ತಿದೆ. ದೈನಂದಿನ ಬದುಕಿಗೆ ಬೇಕಾದ ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಕೂಡಲೇ ಕಡಿಮೆಯಾಗಬೇಕು. ರಾಜ್ಯದಲ್ಲಿ ಬಿಜೆಪಿಗರೇ ಹೆಚ್ಚು ಸಂಸತ್ ಸದಸ್ಯರಿದ್ದಾರೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಲೆ ಏರಿಕೆಯ ಬಗ್ಗೆ ಮನವರಿಕೆಯಾಗುವ ರೀತಿಯಲ್ಲಿ ತಿಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ನಾಗರಾಜ್ ಗೌಡ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅಡಿಕೆ ಬೆಳೆಗಾರರು ಕೊಳೆ ರೋಗದಿಂದ ಬಳಲುತ್ತಿದ್ದಾರೆ ಇದರ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಮತ್ತು ಸಂಸದರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು ಆದರೆ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಬಗ್ಗೆ ಯಾವುದೇ ರೀತಿಯ ಮಾತನ್ನು ಆಗುತ್ತಿಲ್ಲ. ರೈತರಿಗೆ ಅಗತ್ಯವಾದ ಬೀಜ ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆಗಳೂ ಕೂಡ ಹೆಚ್ಚಾಗಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ಇದರ ಬಗ್ಗೆ ಜಿಲ್ಲೆಯ ಹಾಗೂ ರಾಜ್ಯದ ಸಂಸದರು ಕೇಂದ್ರದಲ್ಲಿ ತಮ್ಮದೇ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್, ಖಜಾಂಚಿ ಪಿ ಬಿ ಮಂಜುನಾಥ್ ರಾವ್ (ಜಿದ್ದು), ಎನ್.ಎಸ್.ಯು.ಐ ಅಧ್ಯಕ್ಷ ಶಿವು ಹುಲ್ಮಾರ್ ಮುಖಂಡರಾದ ಉಮೇಶ್ ಮಾರ್ವಳ್ಳಿ, ಪ್ರಕಾಶ್, ಎ ಪಿ ಮಂಜುನಾಥ್, ಫೈರೋಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here