ಬೆಲೆ ಏರಿಕೆಯ ಬಿಸಿ ನಡುವೆ ಯುಗಾದಿ ಹಬ್ಬಕ್ಕೆ ಖರೀದಿ ಜೋರು !

0
226

ಶಿವಮೊಗ್ಗ: ಬೆಲೆ ಏರಿಕೆಯ ಬಿಸಿ ನಡುವೆ ಹಿಂದೂಗಳ ಹೊಸ ವರ್ಷವಾದ ಯುಗಾದಿಯನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಜನರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಇಂದು ಅಮಾವಾಸ್ಯೆಯಾಗಿದ್ದು, ನಾಳೆ ಚಂದ್ರದರ್ಶನವಾಗಲಿದೆ. ಹಬ್ಬದ ಹಿನ್ನಲೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದೆ. ಆದರೆ, ಬಡವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.‌ ಅಡುಗೆ ಎಣ್ಣೆ ಒಂದು ಲೀಟರ್ ಗೆ 200 ರೂ. ದಾಟಿದೆ. ದೀಪದ ಎಣ್ಣೆಯೂ ಕೂಡ‌ ಲೀಟರ್ ಗೆ 200 ರೂ.ಗಿಂತ ಹೆಚ್ಚಾಗಿದೆ. ಇನ್ನು ಬೇಳೆ, ಬೆಲ್ಲ, ಮೈದಾ ಹಿಟ್ಟು ಸೇರಿದಂತೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕೂಡ ಏರಿಕೆಯಾಗಿತ್ತು. ಒಂದು ಮಾರು ಸೇವಂತಿಗೆಗೆ 100 ರೂ. ದರ ಇತ್ತು. ತರಕಾರಿಗಳ ಬೆಲೆ ಕೂಡ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ನಡುವೆಯೂ ಹಬ್ಬದ ಸಿದ್ಧತೆ ಮಾತ್ರ ಜೋರಾಗಿಯೇ ನಡೆಯುತ್ತಿದೆ.

ಮಾರುಕಟ್ಟೆಯಲ್ಲಿ ವಿಪರೀತ ಜನಜಂಗುಳಿ ಕಂಡು ಬಂದಿದ್ದು, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುಖ್ಯವಾಗಿ ಹೊಸ ಬಟ್ಟೆ ಖರೀದಿ, ದಿನಸಿ, ಮಾವಿನ ಸೊಪ್ಪು, ಬೇವಿನ ಹೂವು ಮತ್ತು ಸೊಪ್ಪು, ಹೂವು, ಹಣ್ಣು ಹಂಪಲು ಖರೀದಿಯಲ್ಲಿ ಜನರು ತೊಡಗಿದ್ದು, ಧಾರಣೆಯಲ್ಲಿನ ಏರಿಕೆ ಇವರ ಹಬ್ಬದ ಸಂಭ್ರಮಕ್ಕೆ ತೊಡಕಾದಂತೆ ಕಾಣಲಿಲ್ಲ.

ನಗರದ ಶಿವಪ್ಪನಾಯಕ ಹೂವಿನ ಮಾರುಕಟ್ಟೆಯಲ್ಲೂ ಹೂವಿನ ಖರೀದಿ ಬಲು ಜೋರಾಗಿ ನಡೆದಿದೆ. ಅಲ್ಲದೇ ನೆಹರೂ ರಸ್ತೆ, ಬಿ. ಹೆಚ್.ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಸವಳಂಗ ರಸ್ತೆ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ಅಲ್ಲದೇ ಅಂಗಡಿಗಳಲ್ಲೂ‌ ವ್ಯಾಪಾರ ವಹಿವಾಟು ಹೆಚ್ಚಳವಾಗಿದೆ.

ಪ್ರಮುಖ ವೃತ್ತಗಳಲ್ಲಿ ಮಾವು, ಕಹಿಬೇವು,‌ ಬಾಳೆ ಕಂದು, ಹಣ್ಣು ಮುಂತಾದ ವಸ್ತುಗಳ‌ ಖರೀದಿ ಪ್ರಕ್ರಿಯೆ ಸಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ.

ದ್ರಾಕ್ಷಿ 80 -100 ರೂ., ಕಿತ್ತಳೆ 60-80 ರೂ.ಗೆ ಮಾರಾಟವಾಗುತ್ತಿದ್ದು, ಕಲ್ಲಂಗಡಿ, ಬನಾಸ್‌ಪತ್ರೆ ಹಣ್ಣುಗಳ ಮಾರಾಟ ಕೂಡ ಬಲು ಜೋರಾಗಿದೆ.

ತರಕಾರಿ ಬೆಲೆ ಕೂಡ ಹಬ್ಬ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಏರಿಕೆ ಕಂಡಿದೆ. ಟೊಮೆಟೋ 10 ರೂ, ಬೀನ್ಸ್ 40 ರೂ, ಕ್ಯಾರೆಟ್ 60 ರೂ, ಮೂಲಂಗಿ ಒಂದು ಕಟ್ಟು 10 ರೂ., ಬೆಂಡೆ ಕಾಯಿ 30 ರೂ, ಎಲೆಕೋಸು 10 ರೂ., ಅಷ್ಟೇನು ಏರಿಕೆಯಾಗಿಲ್ಲ. ಈರುಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೆಜಿಗೆ 20 -25 ರೂ. ಬೆಲೆ ಇದೆ. ಹಬ್ಬದ ಹಿನ್ನೆಲೆಯಲ್ಲಿ ಹೊರ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಊರುಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚ ತೊಡಗಿದೆ. ವಾರಾಂತ್ಯದಲ್ಲಿ ಹಬ್ಬ ಬಂದಿರುವುದರಿಂದ ಶಿವಮೊಗ್ಗಕ್ಕೆ ಆಗಮಿಸುವ‌ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಕೆಎಸ್‌ಆರ್‌ಟಿಸಿ ಹಾಗೂ ರೈಲುಗಳಲ್ಲಿ ಮುಂಗಡ ಬುಕಿಂಗ್ ಹೆಚ್ಚಾಗಿದೆ.

ಬೆಂಗಳೂರು, ಮೈಸೂರಿನಿಂದ ವಿಶೇಷ ಬಸ್ ಗಳ ವ್ಯವಸ್ಥೆಯನ್ನು ಕೆಎಸ್ ಆರ್‌ಟಿಸಿ ಕಲ್ಪಿಸಿದೆ.

ಹೊಸ ವರ್ಷಾರಂಭದ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲೂ ವಿಶೇಷ ಪೂಜೆಗೆ ಸಿದ್ದತೆ ನಡೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here