ಶಿವಮೊಗ್ಗ: ಇಂಧನ ಮತ್ತು ಅಡುಗೆ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ನಗರದ ಮಹಾವೀರ ವೃತ್ತದಲ್ಲಿ ಸಿಲಿಂಡರ್ ಗಳಿಗೆ ಹೂವಿನಹಾರ ಹಾಕುವ ಜಾಗಟೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಕೊರೊನಾದಿಂದ ಜನ ಜೀವನ ಸಂಕಷ್ಟದಲ್ಲಿದ್ದು, ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ದೊಡ್ಡಪೆಟ್ಟು ನೀಡಿದೆ. ಅಲ್ಲದೇ, ಕೊರೊನಾದಿಂದ ತತ್ತರಿಸಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಇಂಧನ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಪರಿಣಾಮ ದಿನ ಬಳಕೆ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳ ದರ ಕೂಡ ಹೆಚ್ಚಳವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆಬಂದ ದಿನದಿಂದ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾಗಿದ್ದರೂ ಸಹ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವ ಬದಲು ಮನಸೋ ಇಚ್ಛೆ ದರ ಹೆಚ್ಚಳ ಮಾಡುತ್ತಿದೆ. ಮಾರ್ಚ್ ತಿಂಗಳಲ್ಲಿಯೇ 9 ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿದೆ. ಇದರಿಂದ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿ ವಾಹನ ಸವಾರರು ತೀವ್ರ ಆತಂಕಗೊಂಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದಾಗಿ ದೇಶದಲ್ಲಿ ಅರ್ಥ ವ್ಯವಸ್ಥೆ ಹಾಳಾಗಿದ್ದು, ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದ್ದು, ಈ ಮಧ್ಯೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ವಿಜಯಕುಮಾರ್, ರಾಮೇಗೌಡ, ವೈ.ಹೆಚ್. ನಾಗರಾಜ್, ಚಂದ್ರಭೂಪಾಲ್, ಹೆಚ್.ಸಿ. ಯೋಗೀಶ್, ಹೆಚ್.ಪಿ. ಗಿರೀಶ್, ಮಧುಸೂದನ್, ಚೇತನ್, ಸೌಗಂಧಿಕ, ರೇಖಾ ರಂಗನಾಥ್, ಯಮುನಾ ರಂಗೇಗೌಡ ಮೊದಲಾದವರಿದ್ದರು.
ಹೂವಿನ ಹಾರ ಹಾಕಿ ಶ್ರದ್ಧಾಂಜಲಿ :
ನಿರಂತರವಾಗಿ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ಏರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಇಂದು ಸಂತೇಕಡೂರಿನಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ವೇದಾವಿಜಯಕುಮಾರ್ ಹಾಗೂ ಪಿ.ಎಲ್.ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷರಾದ ಆರ್. ವಿಜಯಕುಮಾರ್(ದನಿ) ಸಂತೇಕಡೂರುರವರ ನೇತೃತ್ವದಲ್ಲಿ ಅಡುಗೆ ಅನಿಲ ಸಿಲಿಂಡರ್ ಮತ್ತು ಕಾರು, ಬೈಕುಗಳಿಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪ್ರತಿಭಟಿಸಲಾಯಿತು.