ಬೋಟ್ ಬಳಸಿ ಶರಾವತಿ ಒಡಲು ಬಗೆಯುತ್ತಿರುವ ಮರಳು ಚೋರರು | ಹೊಸನಗರ ತಾಲ್ಲೂಕಿನಲ್ಲಿ ನಿಲ್ಲದ ಅಕ್ರಮ ಮರಳು ದಂಧೆ – ನಿಷ್ಕ್ರಿಯಗೊಂಡ ಟಾಸ್ಕ್ ಫೋರ್ಸ್ ಕಮಿಟಿ, ಇನ್ನೂ ನಿದ್ದೆಯಿಂದ ಏಳದ ಭೂ ಮತ್ತು ಗಣಿ ಇಲಾಖೆ !

0
2019

ಹೊಸನಗರ: ತಾಲ್ಲೂಕಿನಲ್ಲಿ ರಾತ್ರಿ 12ಗಂಟೆಯಿಂದ ಬೆಳಗಿನ ಜಾವ 6ಗಂಟೆಯವರೆಗೆ ಶಿವಮೊಗ್ಗಕ್ಕೆ ಕೋಡೂರು, ರಿಪ್ಪನ್‌ಪೇಟೆ, ಆಯನೂರು ಮಾರ್ಗವಾಗಿ ಸುಮಾರು 25-30 ಲಾರಿಗಳಲ್ಲಿ ಉಗಿ ಬಂಡಿಯುಂತೆ ಹೊಗೆ ಉಗುಳುತ್ತ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದರೂ ಇಲ್ಲಯವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಾಗಲಿ ಇಲ್ಲಿಂದ ಶಿವಮೊಗ್ಗ, ಸಾಗರ ಕಡೆಗೆ ಹೋಗುತ್ತಿರುವ ಲಾರಿಗಳನ್ನು ಹಿಡಿಯುವ ತಂಟೆಗೆ ಹೋಗದೆ ಆಡಳಿತ ನಡೆಸುತ್ತಿರುವ ರಾಜಕೀಯ ನಾಯಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಅಕ್ರಮ ಮರಳು ಗಣಿಗಾರಿಕೆಗೆ ಕೊನೆಯೇ ಇಲ್ಲವೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ‌.

ಈ ಅಕ್ರಮ ಮರಳು ದಂಧೆಗೆ ಕಿಂಗ್ ಪಿನ್‌ಗಳು ಯಾರೆಂಬುದು ಅಧಿಕಾರಿಗಳಿಗೆ ತಿಳಿದಿದ್ದರೂ ಹಿಡಿಯುವ ಕೆಲಸಕ್ಕೆ ಕೈ ಹಾಕದಿರುವುದು ಒಂದು ವಿಪರ್ಯಸವೇ ಸರಿ?.

ತಿಂಗಳ ಹಿಂದೆ ಅಕ್ರಮ ಮರಳು ಸಾಗಿಸುವಾಗ ಅರಸಾಳು ಬಳಿ ಅಪಘಾತ ಸಂಭವಿಸಿದ್ದು ಓರ್ವ ವ್ಯಕ್ತಿ ಸಾವಿಗೀಡಾಗಿದ್ದು ಇದೇ ರೀತಿ ಅಕ್ರಮ ಮರಳುಗಾರಿಕೆ ರಾತ್ರಿ ವೇಳೆಯಲ್ಲಿ ಮುಂದುವರೆದರೇ ಯಾರ‍್ಯಾರು ಪ್ರಾಣ ಕಳೆದುಕೊಳ್ಳುತ್ತಾರೋ ತಿಳಿಯದಾಗಿದೆ.

ಬೋಟ್, ಮೋಟಾರ್ ಬಳಸಿ ಅಕ್ರಮ ಮರಳು ಗಣಿಗಾರಿಕೆ: ಶರಾವತಿ ಹಿನ್ನೀರಿನ ಒಡಲಿಗೆ ಕೈ ಹಾಕಿದ ಮರಳು ಚೋರರು !

ಅಕ್ರಮ ಮರಳು ಗಣಿಗಾರಿಕೆ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ಮಳೆ ಹಿನ್ನೆಲೆಯಲ್ಲಿ ಮರಳು ಗಣಿಗಾರಿಕೆ ಕಷ್ಟವಾಗಿದ್ದು, ಮರಳು ಕಳ್ಳರು ನೀರಿನಾಳಕ್ಕೇ ಕೈಹಾಕಿದ್ದಾರೆ. ಇದೇ ಮೊದಲ ಬಾರಿ ಮಲೆನಾಡು ಭಾಗದಲ್ಲಿ ಭಾರಿ ಪ್ರಮಾಣದ ಯಂತ್ರ ಬಳಸಿ, ನೀರಿನಾಳದ ಮರಳು ಮೇಲೆತ್ತಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ತಾಲೂಕಿನ ಹಲವು ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಕಾನೂನು ಕ್ರಮದ ಭಯವಿಲ್ಲದೇ ನಿರಾಂತಕವಾಗಿ ನಡೆಯುತ್ತಿದೆ. ಮಲೆನಾಡು ಭಾಗದಲ್ಲಿ ಹಲವು ವರ್ಷಗಳಿಂದ ಕಂಡು ಬರುತ್ತಿರುವ ಅಕ್ರಮ ಮರಳು ದಂಧೆಯು ರಾಜಾರೋಷವಾಗಿ ನಡೆಯುತ್ತಿದೆ. ಜನ ಸಾಮಾನ್ಯರಿಗೆ ಸುಲಭವಾಗಿ ಕೈಗೆಟುಕದ ಮರಳು ಪಟ್ಟಣ ಪ್ರದೇಶಗಳಿಗೆ ದುಬಾರಿ ಬೆಲೆಗೆ ಸರಬರಾಜು ಆಗುತ್ತಿದೆ.

ಮೋಟರ್ ಬಳಸಿ ದಂಧೆ:

ತಾಲೂಕಿನ ಈಚಲಕೊಪ್ಪ ಸಮೀಪದ ಶರಾವತಿ ಹಿನ್ನೀರಿನ ನಡು ಭಾಗದಲ್ಲಿ ಬೃಹತ್ ಗಾತ್ರದ ಬೋಟ್ ನಿಲ್ಲಿಸಿ, ಅದರಲ್ಲಿ ಬಾರಿ ದೊಡ್ಡ ಪ್ರಮಾಣದ ಪಂಪ್ ಅಳವಡಿಸಲಾಗಿದೆ. ಪಂಪ್‌ಗೆ ಪೈಪ್ ಅಳವಡಿಸಿ ದಡಕ್ಕೆ ತಲುಪಿಸಲಾಗಿದೆ. ಮೋಟಾರ್ ಪಂಪ್ ಚಾಲನೆ ಮಾಡುತ್ತಿದ್ದಂತೆ ಹಿನ್ನೀರ ತಳದಲ್ಲಿ ನಿಂತಿರುವ ಮರಳನ್ನು ಪಂಪ್ ದಡಕ್ಕೆ ತಂದು ರಾಶಿ ಹಾಕುತ್ತದೆ. ಕೇವಲ ಗಂಟೆಯೊಳಗಾಗಿ ಐದಾರು ಟಿಪ್ಪರ್ ಲೋಡಿನಷ್ಟು ಮರಳನ್ನು ಮೇಲಕ್ಕೆತ್ತುವ ಸಾಮರ್ಥ್ಯವನ್ನು ಈ ಮೋಟಾರ್ ಹೊಂದಿದೆ. ನೆರೆಯ ಕೇರಳ ರಾಜ್ಯದಿಂದ ವಿಶೇಷವಾಗಿ ತಂದು ಅಳವಡಿಸಿರುವ ಈ ಲಕ್ಷಂತರ ರೂ. ಬೆಲೆ ಬಾಳುವ ಪಂಪ್ ಕಳೆದ ನಾಲ್ಕೈದು ತಿಂಗಳಿನಿಂದಲೂ ನಿರಂತರವಾಗಿ ಕಾರ‍್ಯ ನಿರ್ವಹಿಸುತ್ತಿದೆ.

ಇದಲ್ಲದೇ ತಾಲೂಕಿನ ತೋಟದಕೊಪ್ಪ, ಸಂಪಳ್ಳಿ, ರಾಮಚಂದ್ರಾಪುರ, ಕಪ್ಪೆಹೊಂಡ, ಮಾವಿನಹೊಳೆ, ಮುತ್ತೂರು, ನಂಜವಳ್ಳಿ, ಸೊನಲೆ, ಹಲುಸಾಲೆ ಮಳವಳ್ಳಿ, ಪುಣಜೆ ಸೇರಿದಂತೆ ಹಲವು ಕಡೆಗಳಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಸುಮಾರು 70ಕ್ಕೂ ಹೆಚ್ಚು ಸ್ಥಳೀಯ ಟಿಪ್ಪರ್‌ಗಳು ನಿತ್ಯವೂ ಯಾವುದೇ ಪರವಾನಗಿ ಇಲ್ಲದೇ ಮರಳು ಸಾಗಿಸುತ್ತಿವೆ.

ಸೀಟ್‌ಬೆಲ್ಟ್, ಹೆಲ್ಮೆಟ್ ತಪಾಸಣೆಗೆ ಸೀಮಿತವಾದ ಪೊಲೀಸರು:

ತಾಲೂಕಿನಲ್ಲಿ ಮರಳು ಅಕ್ರಮ ಜೋರಾಗಿಯೇ ನಡೆಯುತ್ತಿದ್ದರೂ, ಪೊಲೀಸರು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಮರಳು ಲಾರಿಗಳ ಚಲನ ವಲನಗಳ ಸಂಪೂರ್ಣ ಮಾಹಿತಿ ಇರುವ ಪೊಲೀಸರು ಮೌನವಾಗಿರುವುದರ ಹಿಂದಿನ ಕಾರಣವೇನು ಎನ್ನುವುದು ಜನತೆಯ ಪ್ರಶ್ನೆಯಾಗಿದೆ. ಪಟ್ಟಣದ ಸರ್ಕಲ್‌ಗಳಲ್ಲಿ ನಿಂತು ಕೇವಲ ಸೀಟ್‌ಬೆಲ್ಟ್ ಹಾಕಿಲ್ಲ, ಹೆಲ್ಮೆಟ್ ಹಾಕಿಲ್ಲ ಎಂದು ಸಾರ್ವಜನಿಕರಿಂದ ದಂಡ ವಸೂಲಿ ಮಾಡುವುದರಲ್ಲೇ ಇತ್ತೀಚೆಗೆ ಕಾಲ ಕಳೆಯುತ್ತಿರುವ ಪೊಲೀಸರಿಗೆ ಲಕ್ಷಾಂತರ ರೂ. ಮೌಲ್ಯದ ಮರಳು ಅಕ್ರಮವಾಗಿ ಸಾಗಾಟ ಆಗುತ್ತಿರುವುದು ಕಂಡರೂ ಸುಮ್ಮನಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇನ್ನೂ ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳಿಗೆ ಇದಕ್ಕೂ ನಮಗೂ ಸಂಬಂಧವಿಲ್ಲ. ಇದು ಟಾಸ್ಕ್ ಫೋರ್ಸ್ ಸಮಿತಿ ಮತ್ತು ತಹಶೀಲ್ದಾರ್ ರವರಿಗೆ ಸಂಬಂಧಿಸಿದ ವಿಷಯ ಎಂದು ಮಾಧ್ಯಮದವರಿಗೆ ತಾಲೂಕಿನ ಪೊಲೀಸ್ ಇಲಾಖೆ ನೀಡುತ್ತಿರುವ ಉತ್ತರ.

ಅಕ್ರಮ ದಂಧೆ ನಡೆಯುತ್ತಿದ್ದರೂ, ಇಲಾಖಾ ಅಧಿಕಾರಿಗಳು ಇದನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಗಣಿ, ಪೊಲೀಸ್, ಅರಣ್ಯ, ಕಂದಾಯ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅಕ್ರಮದ ಕುರಿತು ಸಂಪೂರ್ಣ ಮಾಹಿತಿ ಇದ್ದರೂ, ಮೌನಕ್ಕೆ ಶರಣಾಗಿದ್ದಾರೆ. ಸಾಲದು ಎನ್ನುವಂತೆ ಕೆಲ ಪ್ರಭಾವಿ ಅಧಿಕಾರಿಗಳು ಅಕ್ರಮಕ್ಕೆ ಬೆಂಬಲವಾಗಿ ನಿಂತಿರುವ ಕುರಿತು ಸಹಾ ಸಾರ್ವಜನಿಕ ವಲಯದಲ್ಲಿ ಚರ್ಚೆ ಕೇಳಿಬಂದಿದೆ.

ಬಟ್ಟೆಮಲ್ಲಪ್ಪ, ಸೂಡೂರು ಗ್ರಾಮಗಳಲ್ಲಿ ಹೆದ್ದಾರಿಗೆ ಅಡ್ಡಲಾಗಿ ಚೆಕ್‌ಪೋಸ್ಟ್ ಇದ್ದರೂ, ಮರಳು ಟಿಪ್ಪರ್‌ಗಳು ಅಡೆತಡೆ ಇಲ್ಲದೇ ಶಿವಮೊಗ್ಗ, ಸಾಗರ, ಸೊರಬ, ಭದ್ರಾವತಿ ತಾಲೂಕಿಗೆ ಸಾಗುತ್ತಿವೆ.

“ಈಚಲಕೊಪ್ಪ ಸಮೀಪ ಬೇಕಾಬಿಟ್ಟಿ ಯಂತ್ರ ಬಳಸಿ ಮರಳು ತೆಗೆಯುತ್ತಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗೆಯೇ ಮುಂದುವರೆದಲ್ಲಿ ಪಶ್ಚಿಮಘಟ್ಟ ಪ್ರದೇಶಗಳು ಕಣ್ಮರೆಯಾಗಲು ತುಂಬಾ ವರ್ಷಗಳು ಬೇಕಿಲ್ಲ. ಅಕ್ರಮ ನಡೆಸಿರುವವರ ವಿರುದ್ಧ ಹಾಗೂ ಅಕ್ರಮ ತಡೆಯುವಲ್ಲಿ ವಿಫಲರಾಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.”

– ಗಿರೀಶ್ ಆಚಾರ್, ಜನಸಂಗ್ರಾಮ ಪರಿಷತ್ ಸಂಚಾಲಕ.
ಜಾಹಿರಾತು

LEAVE A REPLY

Please enter your comment!
Please enter your name here