ಭದ್ರಾವತಿ ನಗರಸಭೆ 29ನೇ ವಾರ್ಡ್‌ನ ಚುನಾವಣಾ ಫಲಿತಾಂಶ ಪ್ರಕಟ: ಜೆಡಿಎಸ್ ಅಭ್ಯರ್ಥಿಗೆ ಭರ್ಜರಿ ಜಯ

0
710

ಭದ್ರಾವತಿ: ನಗರಸಭೆ 29ನೇ ವಾರ್ಡ್‌ನ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲ್ ಕುಮಾರ್ ರವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

450 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ನಾಗರತ್ನ ಭರ್ಜರಿ ಗೆಲುವು ಸಾಧಿಸಿದ್ದು 1282 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ ಲೋಹಿತಾ ನಂಜಪ್ಪ 832 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ರಮಾ ವೆಂಕಟೇಶ್‌ ಕೇವಲ 70 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಚುನಾವಣೆಯಲ್ಲಿ 16 ನೋಟಾ ಮತಗಳು ಚಲಾವಣೆಯಾಗಿವೆ.

ಒಟ್ಟು 3374 ಮತದಾರರಿದ್ದು ಅದರಲ್ಲಿ 2200 ಮತಗಳು ಚಲಾವಣೆಗೊಂಡಿದ್ದವು. ಅದರಲ್ಲಿ ಅತ್ಯಧಿಕ ಬಹುಮತ ಪಡೆದ ಜೆಡಿಎಸ್ ಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ.

ಏಪ್ರಿಲ್‌ನಲ್ಲಿ ನಡೆದ ನಗರಸಭೆ ಚುನಾವಣೆ ವೇಳೆ 29 ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪ್ರಚಾರದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 29ನೇ ವಾರ್ಡ್‌ನ ಚುನಾವಣೆ ರದ್ದು ಪಡಿಸಿತ್ತು. ಆಯೋಗ ಮರು ಚುನಾವಣೆ ಘೋಷಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಲೋಹಿತಾ ನಂಜಪ್ಪ, ಜೆಡಿಎಸ್ ನ ನಾಗರತ್ನಾ ಅನಿಲ್‌ಕುಮಾರ್, ಬಿಜೆಪಿಯಿಂದ ರಮಾ ವೆಂಕಟೇಶ್‌ ಕಣದಲ್ಲಿ ಸ್ಪರ್ಧೆ ಮಾಡಿದ್ದರು.

ಯಾವ್ಯಾವ ಬೂತ್ ನಲ್ಲಿ ಯಾರಿಗೆಷ್ಟು ಮತ?

29ನೇ ವಾರ್ಡ್ ನಲ್ಲಿ ನಾಲ್ಕು ಬೂತ್ ಗಳಿದ್ದವು. ಬೂತ್ ನಂಬರ್ 111ರಲ್ಲಿ ಜೆಡಿಎಸ್ 243, ಕಾಂಗ್ರೆಸ್ 143, ಬಿಜೆಪಿ 15 ಮತ ಪಡೆದಿದೆ. ಇಲ್ಲಿ ಒಟ್ಟು 402 ಮತಗಳು ಚಲಾವಣೆಯಾಗಿತ್ತು. ಇನ್ನು ಬೂತ್ 112ರಲ್ಲಿ 420 ಮತ ಚಲಾವಣೆಯಾಗಿತ್ತು. ಈ ಪೈಕಿ ಜೆಡಿಎಸ್ 211, ಕಾಂಗ್ರೆಸ್ 195, ಬಿಜೆಪಿ 10 ಮತ ಪಡೆದಿವೆ. ಬೂತ್ 113ರಲ್ಲಿ 737 ಮತಗಳು ಚಲಾವಣೆಯಾಗಿದ್ದು, ಜೆಡಿಎಸ್ 485, ಕಾಂಗ್ರೆಸ್ 237, ಬಿಜೆಪಿ 12 ಮತಗಳು ಪಡೆದಿವೆ. ಬೂತ್ 114ರಲ್ಲಿ 641 ಮತಗಳು ಚಲಾವಣೆಯಾಗಿದ್ದವು. ಜೆಡಿಎಸ್ 343 ಕಾಂಗ್ರೆಸ್ 257, ಬಿಜೆಪಿ 33 ಮತ ಗಳಿಸಿದೆ.

ಬಲಾಬಲ ಹೇಗಿದೆ?

ಪ್ರಸ್ತುತ ಭದ್ರಾವತಿ ನಗರಸಭೆ 34 ವಾರ್ಡ್‌ಗಳ ಪೈಕಿ ಕಾಂಗ್ರೆಸ್ -18, ಜೆಡಿಎಸ್‌ – 11, ಬಿಜೆಪಿ -4, ಪಕ್ಷೇತರ -1 ಸದಸ್ಯ ಸ್ಥಾನ ಪಡೆದುಕೊಂಡಿದೆ. ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್ ಈಗಾಗಲೆ ಅಧಿಕಾರ ನಿರ್ವಹಿಸುತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here