ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ: ನ್ಯಾಯಾಧೀಶೆ ಶಿಲ್ಪ ಕೆ.ಎಸ್

0
294

ಚಿಕ್ಕಮಗಳೂರು: ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಕೆ.ಎಸ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಪಾಲನಾ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ಹಕ್ಕು ಮತ್ತು ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಒದಗಿಸಬೇಕಾದ ಕನಿಷ್ಠ ಮೂಲಭೂತ ಸೌಕರ್ಯ ಮತ್ತು ಮಾನದಂಡಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದ ಮಕ್ಕಳ ದೈಹಿಕ ಬೆಳವಣಿಗೆ ಅಂದಿನ ಆಹಾರ ಪದ್ಧತಿಯಿಂದ ಉತ್ತಮವಾಗಿತ್ತು, ಆದರೆ ಇಂದಿನ ಆಹಾರ ಪದ್ಧತಿಯ ಬದಲಾವಣೆಯಿಂದಾಗಿ ಮಕ್ಕಳು ಪೌಷ್ಠಿಕಾಂಶವನ್ನು ಒಳಗೊಂಡ ಆಹಾರವನ್ನು ಸೇವಿಸುತ್ತಿಲ್ಲ, ಇದರ ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಹಲವಾರು ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡುವುದು ಪಾಲನಾ ಕೇಂದ್ರದ ಮುಖ್ಯ ಜವಾಬ್ದಾರಿಯಾಗಿದ್ದು, ಹಾಗೆಯೇ ಪೋಷಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.

ಪ್ರಸ್ತುತ ಜಗತ್ತು ಸ್ಪರ್ಧಾತ್ಮಕತೆಯಿಂದ ಕೂಡಿದ್ದು, ಸ್ಪರ್ಧೆಯನ್ನು ಎದುರಿಸಲು ಮಕ್ಕಳು ಸಶಕ್ತರಾಗಲು ಉತ್ತಮ ಆರೋಗ್ಯದ ಅವಶ್ಯಕತೆಯಿದೆ.

ಪೋಷಕರು ಮಕ್ಕಳಿಗೆ ಕೌಶಲ್ಯಯುತ ಕೆಲಸಗಳನ್ನು ಮಾಡಲು ಮಾರ್ಗದರ್ಶನ ನೀಡುವುದರಿಂದ ಮುಂದೆ ಸ್ವಯಂ ಉದ್ಯೋಗಗಳನ್ನು ಸೃಷ್ಠಿಸಿಕೊಳ್ಳಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಅತಿಯಾದ ಮೊಬೈಲ್ ಬಳಸುತ್ತಿದ್ದು, ಇದು ಅವರ ದೈಹಿಕ ಬೆಳವಣಿಗೆ ಕುಂಠಿತವಾಗುವಂತೆ ಮಾಡುತ್ತದೆ. ಆದ್ದರಿಂದ ಮಕ್ಕಳು ಮೊಬೈಲ್ ಬಳಸುವುದನ್ನು ಪೋಷಕರು ನಿಯಂತ್ರಿಸುವುದು ಅವಶ್ಯಕವಾಗಿದ್ದು, ಅದರ ಬದಲಾಗಿ ಅವರಿಗೆ ಮೌಲ್ಯಯುತ ಶಿಕ್ಷಣ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಮುದ್ದಣ ಮಾತನಾಡಿ, ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಮಾಡಿದ ತಪ್ಪುಗಳನ್ನು ಆಗಲೇ ತಿದ್ದಿ ಸರಿಪಡಿಸುವುದರಿಂದ ಮುಂದೆ ಆಗಬಹುದಾದಂತಹ ದೊಡ್ಡ ತಪ್ಪುಗಳನ್ನು ತಡೆಯಬಹುದೆಂದು.‌ ಮಕ್ಕಳಿಗೆ ಪಾಲನಾ ಕೇಂದ್ರಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಆದರ್ಶ ವ್ಯಕ್ತಿಗಳ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸುವುದು ಮತ್ತು ಸೃಜನಶೀಲತೆಯನ್ನು ಬೆಳೆಸುವ ಪ್ರಯತ್ನ ಮಾಡಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ, ಪೌಷ್ಠಿಕ ಆಹಾರ ನೀಡುವಲ್ಲಿ ಪಾಲನಾ ಕೇಂದ್ರಗಳ ಪಾತ್ರ ಪ್ರಮುಖವಾಗಿರಬೇಕೆಂದು ಹೇಳಿದರು.

ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯ ನಟರಾಜ್ ಹೆಚ್.ಸಿ ಮಾತನಾಡಿ, ಭವಿಷ್ಯದಲ್ಲಿ ಉಜ್ವಲ ಭಾರತ ಸೃಷ್ಟಿಯಾಗಬೇಕಾದರೆ ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಹಾಗೂ ಸಮಾಜದಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು, ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸರ್ಕಾರವು ಹಲವಾರು ಕಾಯ್ದೆಗಳನ್ನು ಜಾರಿ ಮಾಡಿದ್ದರೂ ಸಹ ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ ಇವುಗಳನ್ನು ತಡೆಗಟ್ಟಲು ಎಲ್ಲರೂ ಕಾರ್ಯ ನಿರ್ವಹಿಸಬೇಕು ಅದೇ ರೀತಿ ಇಂದಿನ ಸಮಾಜದಲ್ಲಿ ನಮ್ಮ ಮಕ್ಕಳನ್ನು ನಾವು ರಕ್ಷಿಸಿಕೊಳ್ಳಲು ಕಾನೂನು ಮತ್ತು ಕಾಯ್ದೆಗಳ ಮೊರೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ ಇಂತಹ ಪರಿಸ್ಥಿತಿಯಿಂದ ದೂರ ಉಳಿಯಲು ಸಮಾಜದಲ್ಲಿ ಉತ್ತಮವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಪಾಲನಾ ಕೇಂದ್ರಗಳು ಹಾಗೂ ಪೋಷಕರು ಕೈಜೋಡಿಸಬೇಕು ಎಂದು ತಿಳಿಸಿದರು.

ಮಂಗಳೂರು ಶಾಂತಿ ಸಂದೇಶ ಟ್ರಸ್ಟ್‌ನ ನಿರ್ದೇಶಕಿ ಮತ್ತು ಯೂನಿಸೆಫ್ ಮಕ್ಕಳ ರಕ್ಷಣೆ ಸಲಹೆಗಾರರಾದ ಸಿಸ್ಟರ್ ದೂಲ್ಸಿನ ಕ್ರಾಸ್ತ ರವರು ಕಾರ್ಯಕ್ರದಲ್ಲಿ ಮಕ್ಕಳ ಹಕ್ಕು ಮತ್ತು ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳು ಮತ್ತು ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಒದಗಿಸಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಮಾನದಂಡಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಗನಾಥ ಸಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಕೆ.ಎನ್.ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ತಾರನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೀರಭದ್ರಯ್ಯ ಸೇರಿದಂತೆ ಜಿಲ್ಲೆಯ ಪಾಲನಾ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here