24.3 C
Shimoga
Friday, December 9, 2022

ಮಕ್ಕಳಿಗೆ ಪೆಪರ್‌ಮೆಂಟ್ ಕೊಡುವ ಹಾಗೆ ಎಲೆಚುಕ್ಕಿ ರೋಗಕ್ಕೆ ಔಷಧಿ ನೀಡುತ್ತಿದ್ದಾರೆ ; ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ : ಮಕ್ಕಳಿಗೆ ಪೆಪರ್‌ಮೆಂಟ್ ಕೊಡುವ ರೀತಿಯಲ್ಲಿ ಎಲೆಚುಕ್ಕಿ ರೋಗಕ್ಕೆ ಔಷಧಿ ನೀಡಲಾಗುತ್ತಿದೆ. 40-45 ವರ್ಷಗಳಿಂದ ಹಬ್ಬಿರುವ ಹಳದಿ ರೋಗಕ್ಕೆ ಇನ್ನು ಔಷಧಿ ಕಂಡುಹಿಡಿದಿಲ್ಲ ಅಂತಹದರಲ್ಲಿ ಮೂರು ತಿಂಗಳಿನಲ್ಲಿ ಜ್ಞಾನೇಂದ್ರ ಔಷಧಿ ಕಂಡುಹಿಡಿಯುತ್ತಾರಾ? ಚುನಾವಣೆ ಬರುತ್ತಿರುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು

ಎಲೆಚುಕ್ಕಿ ರೋಗಕ್ಕೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮೇಗರವಳ್ಳಿಯಿಂದ ತೀರ್ಥಹಳ್ಳಿ ತೋಟಗಾರಿಕಾ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಶೀತ, ಕೆಮ್ಮು ಆದಾಗ ವೈದ್ಯರು ಸಣ್ಣ ಬಾಟಲ್ ನಲ್ಲಿ ಔಷಧಿ ನೀಡುತ್ತಿದ್ದ ಹಾಗೆ ಈಗ ರೈತರಿಗೆ ಅಧಿಕಾರಿಗಳು ಮಾಡುತ್ತಿದ್ದಾರೆ. ಇವರು ಕೊಡುವ ಔಷಧಿ ಸಿಂಪಡಿಸಲು 3,000 ರೂ. ಲೇಬರ್ ಚಾರ್ಜ್ ಆಗುತ್ತೆ ಅದನ್ನು ಯಾರು ಕೊಡುತ್ತಾರೆ. ಜ್ಞಾನೇಂದ್ರ ಅವರಿಗೆ ಇಲ್ಲಿಯವರೆಗೆ ಎಷ್ಟು ಜನರಿಗೆ ನಷ್ಟವಾಗಿದೆ ಎಂದೇ ಗೊತ್ತಿಲ್ಲ. ಆದರೆ ಅಷ್ಟು ಹಣ ಇಷ್ಟು ಹಣ ಬಿಡುಗಡೆಯಾಗಿದೆ ಎಂದು ರೈಲು ಬಿಡುತ್ತಾರೆ ಎಂದರು.

ರೈತರ ಪರ ಎಂದು ಹೇಳುವ ಆರಗ ಜ್ಞಾನೇಂದ್ರ ಆಗಲಿ ಅಥವಾ ಯಡಿಯೂರಪ್ಪನವರೇ ಆಗಲಿ ಒಂದು ರೂಪಾಯಿ ಆದರೂ ಸಾಲ ಮನ್ನಾ ಮಾಡಿದ್ದಾರ ? ಹಾಗೇನಾದರೂ ರೈತರಿಗೆ ಅನುಕೂಲ ಆಗಿದ್ದರೆ ಅದು ಸಿದ್ದರಾಮಯ್ಯನವರ ಕಾಲದಲ್ಲಿ ಎಂದರು.

ಹಾಲಪ್ಪ ನವರು ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಂಡರೆ ಅಡಿಕೆ ಬೆಳೆಗಾರರಿಗೆ ತೊಂದರೆ ಆಗುತ್ತದೆ ಎನ್ನುತ್ತಾರೆ. ಆರಗ ಜ್ಞಾನೇಂದ್ರ ಇದರಿಂದ ನಮಗೆ ಏನು ತೊಂದರೆಯಿಲ್ಲ ಎನ್ನುತ್ತಾರೆ. ಜಮೀನು ಇವರದ್ದಲ್ವಲ. ಅವರ ಜಮೀನು ಕೂಡ ದಾನ ಬಂದಿದ್ದು ಎಂದು ಅವರೇ ಹೇಳುತ್ತಿರುತ್ತಾರೆ ಹಾಗಾಗಿ ಅವರಿಗೆ ಸಮಸ್ಯೆ ಗೊತ್ತಾಗುವುದಿಲ್ಲ ಎಂದರು.

ಬಿಜೆಪಿಗೊಂದು ನ್ಯಾಯ ಕಾಂಗ್ರೆಸ್‌ಗೊಂದು ನ್ಯಾಯ

ಕಾಂಗ್ರೆಸ್‌ನವರ ಮೇಲೆ ಸುಖಾಸುಮ್ಮನೆ 307 ಕೇಸ್ ಹಾಕಿಸುತ್ತಾರೆ ಆದರೆ ಬಿಜೆಪಿಯವರು ಮರಳು ಹೊಡೆದರು ಕೂಡ ಅವರನ್ನು ಪ್ರಶ್ನೆ ಕೂಡ ಮಾಡುವುದಿಲ್ಲ. ಅವರ ಮನೆ ಬಳಿಯೇ ಕೊಲೆ ನಡೆದರು ಆ ಕೇಸ್ ಮುಚ್ಚಿ ಹಾಕಲು ಪ್ರಯತ್ನಿಸುತ್ತಾರೆ. ಬಿಜೆಪಿಗೊಂದು ನ್ಯಾಯ ಕಾಂಗ್ರೆಸ್‌ಗೊಂದು ನ್ಯಾಯದ ರೀತಿಯಲ್ಲಿ ಗೃಹಸಚಿವರು ನಡೆದುಕೊಳ್ಳುತ್ತಿದ್ದರೆ ಎಂದರು.

ತೀ.ನಾ ಶ್ರೀನಿವಾಸ್ ಮಾತನಾಡಿ, ಗೃಹಸಚಿವ ಆರಗ ಜ್ಞಾನೇಂದ್ರರವರು ಶಾಸಕರಾಗಿದ್ದಾಗ ಪಿಸುಪಿಸು ಮಾತನ್ನ ಆದರೂ ಆಡುತ್ತಿದ್ದರು ಆದರೆ ಈಗ ಸಂಪೂರ್ಣ ಬಾಯಿ ಬಂದ್ ಆಗಿದೆ. 40 ಪರ್ಸೆಂಟ್ ಅಲ್ಲ 60 ಪರ್ಸೆಂಟ್ ಅನ್ನು ಗೋಣಿಚೀಲದಲ್ಲಿ ತುಂಬುವುದೊಂದೇ ಕೆಲಸವಾಗಿದೆ. ಎಲೆಚುಕ್ಕಿ ರೋಗವೆಲ್ಲ ಅವರಿಗೆ ಬೇಡವಾಗಿದೆ. ಲೂಟಿ ಮಾಡಿ ಹಾಳು ತುಂಬುವುದೇ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಗೃಹಸಚಿವರು ತೀರ್ಥಹಳ್ಳಿಗೆ ಬಂದಿದ್ದರು. ಇಲ್ಲಿ ಮೀಟಿಂಗ್ ಮಾಡಿ ಎಲೆ ಅಡಿಕೆ ಹಾಕಿದ್ರು. ಯಾವಾಗ ಎಲೆ ಅಡಿಕೆ ಹಾಕಿದ್ರೋ ಅಡಿಕೆ ಬೆಳೆಗೆ ಗ್ರಹಚಾರ ಬಂತು. ಎಲೆಚುಕ್ಕಿ ರೋಗ ಆಗುಂಬೆ ಭಾಗ ಮಾತ್ರವಲ್ಲದೆ ಹೊಸನಗರದ ನಗರ, ನಿಟ್ಟೂರು, ಸಾಗರ ಎಲ್ಲಾ ಕಡೆ ಹಬ್ಬುತ್ತಿದೆ. ಇದರಿಂದ ರೈತರು ಸಾವಿಗೆ ಶರಣಾಗಿದ್ದು ಇದೆ. ನಂತರದಲ್ಲಿ ರೈತರು ಯಾವಾಗ ಗಲಾಟೆ ಮಾಡಲು ಬೀದಿಗೆ ಇಳಿದರೋ ಆಗ ಗೃಹಸಚಿವರಿಗೆ, ಸಂಸದರಿಗೆ ಎಚ್ಚರವಾಗಿದೆ ಎಂದರು. ಗೃಹಸಚಿವರು ಬರಿ ಮೊಬೈಲ್ ನಲ್ಲೆ ಭರವಸೆ ಕೊಡುವುದನ್ನು ಮಾಡುತ್ತಿದ್ದಾರೆ. ಇವರು ಇನ್ನು ಕೆಲಸ ಮಾಡದೇ ಹೋದರೆ ರೈತರು ಪಾದಯಾತ್ರೆ ಬಿಟ್ಟು ತೋಟಗಾರಿಕ ಇಲಾಖೆ ಹಾಗೂ ಗೃಹಸಚಿವರ ಕಚೇರಿಗೆ ಬೀಗ ಹಾಕಬೇಕು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಡ್ತೂರ್ ದಿನೇಶ್, ವಿಶ್ವನಾಥ್ ಶೆಟ್ಟಿ, ಕುಲಗೋಡು ರತ್ನಾಕರ್, ಬಿ.ಜಿ ಚಂದ್ರಮೌಳಿ, ಕೆಸ್ತೂರು ಮಂಜುನಾಥ್, ಮೂಡುಬ ರಾಘವೇಂದ್ರ, ಬಾಳೇಹಳ್ಳಿ ಪ್ರಭಾಕರ್ ಸೇರಿ ನೂರಾರು ಕಾರ್ಯಕರ್ತರು, ರೈತರು ಭಾಗಿಯಾಗಿದ್ದರು.

ವರದಿ : ಅಕ್ಷಯ್ ಕುಮಾರ್

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!