ಮಕ್ಕಳ ಗ್ರಾಮಸಭೆಯಲ್ಲಿ ಬೇಡಿಕೆ : ಡೆಸ್ಕ್-ಟೇಬಲ್, ಶೌಚಾಲಯ, ಆಟದ ಮೈದಾನ, ಅಡುಗೆ ಎಣ್ಣೆ, ಬೇಳೆಗಳಿಲ್ಲ !

0
374

ರಿಪ್ಪನ್‌ಪೇಟೆ: ರಾಜ್ಯ ಗೃಹ ಸಚಿವ ಸ್ವಕ್ಷೇತ್ರದ ಹುಂಚ ಹೋಬಳಿಯ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಕೊರತೆಯೊಂದಿಗೆ ಶಾಲಾ ಕಾಂಪೌಂಡ್, ಆಟದ ಮೈದಾನ ಸೇರಿದಂತೆ ಖಾಸಗಿ ಶಾಲೆಗಳಲ್ಲಿರುವಂತೆ ಸರ್ಕಾರಿ ಶಾಲೆಗಳಲ್ಲಿ ಆಟಿಕೆಗಳ ಪರಿಕರಗಳು ಮತ್ತು ಡೆಸ್ಕ್-ಟೇಬಲ್‌ಗಳಿಲ್ಲ, ಪಠ್ಯಪುಸ್ತಕ, ಬಿಸಿಯೂಟದ ಅಡುಗೆಗೆ ಎಣ್ಣೆ ಬೇಳೆ ಸರಬರಾಜಾಗಿಲ್ಲ ಎಂದು ಹೀಗೆ ಹನುಮಂತನ ಬಾಲದಂತೆ ಬೆಳೆದು ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನ ಬಿಡಿಸಿಟ್ಟರು.

ಅಮೃತ ಗ್ರಾಮದ ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದಲ್ಲಿ ಆಯೋಜಿಸಲಾದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳು ತಮ್ಮ ಶಾಲೆಯಲ್ಲಿ ಹತ್ತು ಹಲವು ಮೂಲಭೂತ ಸಮಸ್ಯೆಗಳನ್ನು ಗ್ರಾಮಸಭೆಯಲ್ಲಿ ಮಂಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಹುಳಿಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿನಿ ಕುಮಾರಿ ಲಾಸ್ಯ ವಹಿಸಿದ್ದರು.

ಸಭೆಯಲ್ಲಿ ಹೊಳೆಕೇವಿ ಶಾಲೆಯ ಕು.ಚೈತನ್ಯ ಸೇರಿದಂತೆ ವಿವಿಧ ಶಾಲೆಗಳ ತಲಾ ಒಬ್ಬರನ್ನು ಸದಸ್ಯರಾಗಿ ಆಯ್ಕೆ ಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಮೃತ ಗ್ರಾಮ ಪಂಚಾಯ್ತಿ ಪ್ರಭಾರಿ ಅಧ್ಯಕ್ಷರಾದ ಲಿಂಗರಾಜ್ ಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಮಾತ್ರ ಅರಿತರೆ ಸಾಲದು ಶಾಲೆ ಅಂಗನವಾಡಿ ಹೀಗೆ ಪ್ರೌಢಶಾಲೆಗಳಲ್ಲಿನ ಹಲವು ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ಇಂತಹ ಮಕ್ಕಳ ಗ್ರಾಮ ಸಭೆಗಳು ಸಹಕಾರಿಯಾಗಿವೆ. ಗ್ರಾಮ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಶಿಕ್ಷಕರು ತಮ್ಮ ಶಾಲೆಗಳಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ನೀಡದೆ ಸುಮ್ಮನೆ ಸಭೆಗೆ ಬಂದರೆ ಏನು ? ಪ್ರಯೋಜನ ಎಂದು ಹೇಳಿ, ಮಕ್ಕಳಿಂದ ಸಮಸ್ಯೆಗಳು ಯಾವ ಶಾಲೆಗಳಲ್ಲಿ ಏನೇನು ಸಮಸ್ಯೆಗಳಿವೆ ಎಂಬುದನ್ನು ಮನವರಿಕೆ ಮಾಡಿರುವುದನ್ನು ಮನಗೊಂಡು ಮುಂದಿನ ದಿನಗಳಲ್ಲಿ ಪರಿಹರಿಸುವ ಬಗ್ಗೆ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಮತ್ತು ಕ್ಷೇತ್ರದ ಶಾಸಕರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸಾರ್ವಜನಿಕರು ಮತ್ತು ಪೋಷಕ ವರ್ಗ ಸನ್ಮಾನಿಸಿ ಅಭಿನಂದಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಣೇಶ್, ಸಮೂಹ ಸಂಪನ್ಮೂಲ ವ್ಯಕ್ತಿ ವಿಶ್ವನಾಥ, ಜೆಜೆಎಂ ಮಹದೇವ್, ಆರೋಗ್ಯ ಇಲಾಖೆಯ ಕಾರ್ಯಕರ್ತೆ ಕು.ಜ್ಯೋತಿ, ಗ್ರಾಪಂ ಸದಸ್ಯರಾದ ಸುರೇಶ್, ದೇವರಾಜ್, ಮಂಜುಳಾ ರಾಜು, ವಿನೋದ, ಸುವರ್ಣ, ಉಮೇಶ್, ಕಲಾವತಿ, ದಾನಮ್ಮ, ಸಾವಿತ್ರಿ, ಪಿಡಿಓ ಸುಧಾ ಸಿಬ್ಬಂದಿವರ್ಗ ಹಾಜರಿದ್ದರು.

ಪಿಡಿಓ ಸುಧಾ ಸ್ವಾಗತಿಸಿದರು. ವಿದ್ಯಾರ್ಥಿ ಸಮೂಹ ನಿರೂಪಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here