ಮಗನ ಪಬ್‌ಜಿ ಗೀಳಿಗೆ ಬಲಿಯಾದ ತಾಯಿ ! ಹಾಗಾದ್ರೆ ಅಲ್ಲಿ ನಡೆದಿದ್ದೇನು ?

0
739

ಚಿಕ್ಕಮಗಳೂರು: ಪುತ್ರನ ಪಬ್‌ಜಿ ಆಟದ ಗೀಳು ತಾಯಿಯನ್ನು ಬಲಿ ಪಡೆದ ಘಟನೆ ತಾಲ್ಲೂಕಿನ ಗಿರಿಶ್ರೇಣಿಯ ಅಗಲಖಾನ್‌ ಎಸ್ಟೇಟ್‌ನಲ್ಲಿ ಮಂಗಳವಾರ ನಡೆದಿದೆ.

ಮೈಮುನ್ನಾ (40) ಮೃತಪಟ್ಟವರು. ಅವರ ಪತಿ ಇಮ್ತಿಯಾಜ್‌ ಗುಂಡು ಹಾರಿಸಿದವರು. ಗ್ರಾಮಾಂತರ ಠಾಣೆಯಲ್ಲಿ ಎಸ್ಟೇಟ್‌ ಮಾಲೀಕ ಸಿ.ಎಸ್‌.ಪವನ್ ದೂರು ದಾಖಲಿಸಿದ್ದಾರೆ.

ಎಸ್ಟೇಟ್‌ನ ಕೂಲಿ ಲೈನ್‌ನಲ್ಲಿ ಇಮ್ತಿಯಾಜ್‌ ಮತ್ತು ಮೈಮುನ್ನಾ ದಂಪತಿ ಕುಟುಂಬ ಸಮೇತ ಎರಡು ವರ್ಷಗಳಿಂದ ವಾಸವಾಗಿದ್ದಾರೆ. ಗುತ್ತಿಗೆದಾರ ತೌಫಿಕ್ ಎಂಬವರು ಇಮ್ತಿಯಾಜ್‌ಗೆ ತೋಟದಲ್ಲಿನ ಕಿತ್ತಳೆ ಹಣ್ಣುಗಳ ನಿಗಾ ಕೆಲಸ ವಹಿಸಿದ್ದರು. ತೌಫಿಕ್‌ ಅವರು ಇಮ್ತಿಯಾಜ್‌ಗೆ ಬಂದೂಕು ಕೊಟ್ಟಿದ್ದರು.

ಮಂಗಳವಾರ ಇಮ್ತಿಯಾಜ್‌ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಯಾವಾಗಲೂ ಪಬ್‌ ಜಿ ಆಟದಲ್ಲಿ ತೊಡಗಿರುತ್ತೀಯಾ ಎಂದು ಪುತ್ರನಿಗೆ ಇಮ್ತಿಯಾಜ್‌ ಅವರು ಕೋವಿ ಹಿಡಿದು ಜೋರು ಮಾಡುತ್ತಿರುವಾಗ ಮೈಮುನ್ನಾ ಮಧ್ಯ ಪ್ರವೇಶಿಸಿದ್ದಾರೆ. ಪುತ್ರನ ಪರ ವಹಿಸುತ್ತೀಯಾ ಎಂದು ಪತ್ನಿಗೆ ಇಮ್ತಿಯಾಜ್‌ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ್ದ ಮೈಮುನ್ನಾ ಮನೆಯಿಂದ ಹೊರಕ್ಕೆ ಓಡಿ ಬಂದು ಬಿದ್ದಿದ್ದರು. ತಕ್ಷಣವೇ ಮೈಮುನ್ನಾ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಮೈಮುನ್ನಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಇಮ್ತಿಯಾಜ್‌ ಮತ್ತು ತೌಫಿಕ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಪಿಸಿ 302 (ಕೊಲೆ) ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here