ಮದುವೆಯಾಗಲು ಕನ್ಯೆಯ ಫೋಟೋ ತೋರಿಸುವುದಾಗಿ ಮನೆಗೆ ಕರೆಯಿಸಿ ಯುವಕನ ಹತ್ಯೆ !

0
973

– ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು ಎಡಿಡೆಟ್ ಫೋಟೋ !

– ಫೋಟೋದ ಜಾಡು ಹಿಡಿದು ಹೊರಟ ಪೊಲೀಸರಿಗೆ ಪ್ರಕರಣ ಪಡೆದಿತ್ತು ಹೊಸ ತಿರುವು !!

ಸೊರಬ: ಮದುವೆಯಾಗಲು ಕನ್ಯೆಯ ಫೋಟೋ ತೋರಿಸುವುದಾಗಿ ಮನೆಗೆ ಕರೆಯಿಸಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ಮನ್ಮನೆ ಗ್ರಾಮದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ.

ಗ್ರಾಮದ ಲೇಖಪ್ಪ (36) ಎಂಬ ಕೊಲೆಯಾದ ವ್ಯಕ್ತಿ ಮತ್ತು ಆರೋಪಿ ಕೃಷ್ಣಪ್ಪ ನಡುವೆ ಮೊದಲಿನಿಂದಲೂ ರಾಜಕೀಯವಾಗಿ ಮತ್ತು ಮಹಿಳೆಯೊಬ್ಬರ ಸ್ನೇಹದ ಸಂಬಂಧ ದ್ವೇಷವಿತ್ತು. ಈ ಹಿನ್ನೆಲೆಯಲ್ಲಿ ಲೇಖಪ್ಪನಿಗೆ ಮದುವೆಯಾಗಲು ಕನ್ಯೆಯ ಫೋಟೋ ತೋರಿಸುವುದಾಗಿ ಮನೆಗೆ ಕರೆಸಿ ಲೇಖಪ್ಪನನ್ನು ಕೊಲೆ ಮಾಡಿ, ಮೃತ ದೇಹವನ್ನು ಕಡಸೂರು ಸಮೀಪದ ವರದಾ ಸೇತುವೆಯಿಂದ ಎಸೆದಿರುವುದು ತನಿಖೆಯಿಂದ ಪತ್ತೆಯಾಗಿದೆ.

ನಿಗೂಢವಾಗಿದ್ದ ಪ್ರಕರಣ:

ಮನೆಯಿಂದ ಜಮೀನು ಕೆಲಸಕ್ಕೆ ಹೋದ ಲೇಖಪ್ಪ ಏ.11ಂದು ನಾಪತ್ತೆಯಾಗಿರುವ ಕುರಿತು ಏ. 14ರಂದು ಲೇಖಪ್ಪನ ಸಹೋದರ ಹುಚ್ಚಪ್ಪ ದೂರು ದಾಖಲಿಸಿದ್ದರು. ಪೊಲೀಸರು ಆರಂಭದಲ್ಲಿ ಇದೊಂದು ಸಹಜ ಪ್ರಕರಣವೆಂದೇ ಭಾವಿಸಿದ್ದರು. ಆದರೆ, ಎಡಿಟೆಡ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪ್ರಕರಣದ ಹಾದಿ ತಪ್ಪಿಸಲು ಹಾಗೂ ಗ್ರಾಮಸ್ಥರು ಮತ್ತು ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆಯಲು ಲೇಖಪ್ಪನ ಜೊತೆಗೆ ಯುವತಿಯೊಬ್ಬಳು ವಿವಾಹವಾಗಿರುವಂತೆ ಫೋಟೋವನ್ನು ಕೃಷ್ಣಪ್ಪ ಹರಿಬಿಟ್ಟಿದ್ದನು ಎನ್ನಲಾಗುತ್ತಿದ್ದು, ಫೋಟೋದ ಜಾಡು ಹಿಡಿದು ಹೊರಟ ಪೊಲೀಸರಿಗೆ ಪ್ರಕರಣ ಹೊಸ ತಿರುವು ಪಡೆದಿತ್ತು. ಜೊತೆಗೆ ಮೇ.2ರಂದು ಆರೋಪಿ ಕೃಷ್ಣಪ್ಪನ ಮೇಲೆ ಅನುಮಾನವಿರುವುದಾಗಿ ಪುನಃ ಮತ್ತೊಂದು ದೂರು ಸಹ ದಾಖಲಾಗಿತ್ತು.

ಹತ್ಯೆಗೆ ಕಾರಣವಾಯ್ತಾ ರಾಜಕೀಯ ದ್ವೇಷ ?:

ಮನಮನೆ ಗ್ರಾಮದಲ್ಲಿ ಬಿಜೆಪಿ ಮುಖಂಡನಾಗಿದ್ದ ಲೇಖಪ್ಪ ಗ್ರಾಮದಲ್ಲಿ ಚಿರಪರಿಚಿತ. ಅದೇ ಗ್ರಾಮದ ಗ್ರಾಪಂ ಸದಸ್ಯೆ ಪತಿ ಕೃಷ್ಣಪ್ಪನ ನಡುವೆ ರಾಜಕೀಯವಾಗಿ ಪೈಪೋಟಿ ಇತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚೆಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಯೊಂದನ್ನು ಲೇಖಪ್ಪ ಕೈಗೊಂಡಿದ್ದನು. ಈ ಸಂದರ್ಭದಲ್ಲಿ ಲೇಖಪ್ಪ ಮತ್ತು ಕೃಷ್ಣಪ್ಪನ ನಡುವೆ ಮಾತಿನ ಚಕಮಕಿ ನಡೆದು ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿಪಂಚಾಯ್ತಿ ನಡೆಸಲಾಗಿತ್ತು. ರಾಜಕೀಯವಾಗಿ ಲೇಖಪ್ಪ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಕೃಷ್ಣಪ್ಪ ಹತ್ಯೆ ಮಾಡಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಜಿಲ್ಲಾ ರಕ್ಷಣಾಧಿಕಾರಿ ಎಂ.ಬಿ. ಲಕ್ಷ್ಮೀ ಪ್ರಸಾದ್ ಹಾಗೂ ಡಿವೈಎಸ್‍ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಸಿಪಿಐ ಎಲ್ ರಾಜಶೇಖರ್ ನೇತೃತ್ವದಲ್ಲಿ ಪಿಎಸ್‍ಐ ದೇವರಾಯ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ. ತಂಡದಲ್ಲಿ ಹೆಡ್ ಕಾನ್ಸ್‍ಟೇಬಲ್‍ಗಳಾದ ಬಿ.ನಾಗೇಶ್, ನೀಲೇಂದ್ರ ನಾಯ್ಕ್, ಸಿಬ್ಬಂದಿ ಸಲ್ಮಾನ್ ಖಾನ್ ಹಾಜಿ, ನಾಗರಾಜ್, ಮೆಹಬೂಬ್, ಸಂದೀಪ್, ಉಷಾ, ಮೋಹನ್ ಕುಮಾರ್, ಶಶಿಧರ, ಕುಮಾರ್, ಶಿವಾಜಿರಾವ್, ಸುಚಿತ್ರಾ, ಶಶಿಕಲಾ, ಗೋಪಾಲ್ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here