23.2 C
Shimoga
Sunday, November 27, 2022

ಮದ್ಯ ಸಹಿತ ವಾಪಾಸ್ಸು ತೆರಳಿದ ಎಂಎಸ್‌ಐಎಲ್ ಸಿಬ್ಬಂದಿಗಳು !
ಕಾಳಿಕಾಪುರ ಗ್ರಾಮಸ್ಥರ ಹೋರಾಟಕ್ಕೆ ಸಂದ ಜಯ


ಹೊಸನಗರ: ರಾಜ್ಯದ ಎಂಎಸ್‌ಐಎಲ್ ಸಂಸ್ಥೆ ತಾಲೂಕಿನ ಜೇನಿ ಗ್ರಾ.ಪಂ.ವ್ಯಾಪ್ತಿಯ ಕಾಳಿಕಾಪುರ ಗ್ರಾಮದಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಮದ್ಯ ಮಾರಾಟ ಮಳಿಗೆ ಆರಂಭಕ್ಕೆ ಮುನ್ನವೇ ಗ್ರಾಮಸ್ಥರ ಆಕ್ರೋಶದ ಕಾರಣ ಮದ್ಯ ಸಾಗಾಣಿಕೆ ವಾಹನ ಸಹಿತ ಅಧಿಕಾರಿಗಳು ವಾಪಾಸ್ ತೆರಳಿದ ಘಟನೆ ಶನಿವಾರ ನಡೆದಿದೆ.


ಕಳೆದ 20 ವರ್ಷಗಳಿಂದ ಜೇನಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಗ್ರಾಮಸ್ಥರೇ ವಿರೋಧಿಸುತ್ತ ಬಂದಿದ್ದಾರೆ. ಆದಕಾರಣ ಇಡೀ ಪಂಚಾಯತಿ ವ್ಯಾಪ್ತಿಯೇ ಮದ್ಯಮುಕ್ತವಾಗಿದೆ. ಆದರೆ, ಇದೇ ಪಂಚಾಯತಿ ವ್ಯಾಪ್ತಿಯ ಕಾಳಿಕಾಪುರದಲ್ಲಿ ತರಾತುರಿಯಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಆರಂಭಕ್ಕೆ ಹುನ್ನಾರ ನೆಡೆಸಿದ್ದಾರೆ ಎಂದು ಕಳೆದ ಗುರುವಾರವಷ್ಟೇ ಜೇನಿ ಗ್ರಾ.ಪಂ. ವ್ಯಾಪ್ತಿಯ ಸುತ್ತಲ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು. ಇದು ಮಳಿಗೆ ಪ್ರಾರಂಭಕ್ಕೆ ತಾತ್ಕಾಲಿಕ ಬ್ರೇಕ್ ನೀಡಿತ್ತು. ಆದರೆ, ಶನಿವಾರ ಸಂಜೆ ಮತ್ತೆ ಮದ್ಯ ಮಾರಾಟ ಮಳಿಗೆ ಆರಂಭಿಸುವ ಕುರಿತು ಮಾಹಿತಿ ಸಂಗ್ರಹಿಸಿದ ಗ್ರಾಮಸ್ಥರು ವಿವಿಧ ಸ್ತ್ರೀ ಶಕ್ತಿ ಸಂಘ, ಆಮ್ ಆದ್ಮಿ ಪಕ್ಷ, ದಲಿತ ಸಂಘ, ಹಲವು ನಾಯಕರ ಜೊತೆಗೂಡಿ ಮತ್ತೆ ನಿಗಮದ ಆಟಾಟೋಪದ ವಿರುದ್ದ ಯುದ್ದ ಸಾರಿದರು.
ಸ್ವಾಸ್ಥ್ಯ ಹಾಳುಮಾಡ ಬೇಡಿ;

ಬೆಳಗಿನಿಂದಲೇ, ಉದ್ದೇಶಿಸಿ ಮದ್ಯಮಾರಾಟ ಮಳಿಗೆ ಎದುರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಕಾರರು ಜಮಾವಣೆಗೊಂಡು ಎಂಎಸ್‌ಐಎಸ್ ನಿಗಮದ ಅಧಿಕಾರಿಗಳ ಕಾರ್ಯವೈಖರಿ ಕುರಿತು ಧಿಕ್ಕಾರ ಕೂಗಿದರು. ಕೂಲಿಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿರುವ ಈ ಭಾಗದಲ್ಲಿ ಮದ್ಯದಂಗಡಿ ಬೇಡ. ಸಮೀಪದಲ್ಲಿ ಶಾಲೆಗಳಿವೆ. ಹೆಣ್ಣುಮಕ್ಕಳು ಶಾಲೆಗೆ ತೆರಳಲು ಈ ದಾರಿಯನ್ನೆ ಆಶ್ರಯಿಸಿದ್ದಾರೆ. ಮದ್ಯದಂಗಡಿ ತೆರೆದ ಪಕ್ಷದಲ್ಲಿ ಈ ಭಾಗದ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡವಿದಂತಾಗುತ್ತದೆ. ಮಕ್ಕಳು, ಮಹಿಳೆಯರು, ವೃದ್ದರು ನಿರ್ಭೀತಿಯಿಂದ ಓಡಾಡಲು ಅಸಾಧ್ಯವಾಗುವ ಲಕ್ಷಣಗಳಿವೆ. ಮುಂದಾಗಬಹುದಾದ ಅವಗಢಗಳಿಗೆ ಯಾರು ಹೊಣೆ? ಎಂಬ ಆತಂಕವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು.


ಕಾಳಿಕಾಪುರದಲ್ಲಿ ಎಂಎಸ್‌ಐಎಲ್ ಸಂಸ್ಥೆ ಆರಂಭಿಸಲು ಉದ್ದೇಶಿಸಿದ್ದ ಮದ್ಯ ಮಾರಾಟ ಮಳಿಗೆಗೆ ಸ್ಥಳೀಯ ಗ್ರಾಮಸ್ಥರು ಜೊತೆ ದಲಿತ ಸಂಘರ್ಷ ಸಮಿತಿ, ಆಮ್‌ಆದ್ಮ ಪಕ್ಷ, ವಿವಿಧ ಸ್ತ್ರಿ ಶಕ್ತಿ ಸಂಘಗಳ ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.


ಮಧ್ಯಾಹ್ಮದ ನಂತರ ಸ್ಥಳೀಯ ಅಬಕಾರಿ ಸಿಬ್ಬಂದಿಗಳು ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಮನ ಒಲಿಸಲು ಎಷ್ಟೇ ಯತ್ನಿಸಿದರು ಅದು ಸಫಲವಾಗಲಿಲ್ಲ ಸಂಜೆ ವೇಳೆಗೆ ಎಂಎಸ್‌ಐಎಲ್ ಸಿಬ್ಬಂದಿಗಳು ಸಾಗರದ ಗೋದಾಮಿನಿಂದ ಮಾಲು ಸಹಿತ, ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಪ್ರತಿಭಟನೆಯ ಕಾವು ತಾರಕಕ್ಕೇರಿತು. ಪೊಲೀಸರ ಉಪಸ್ಥಿತಿಯಲ್ಲೇ ಪ್ರತಿಭಟನೆಕಾರರು ಹಾಗೂ ಎಂಎಸ್‌ಐಎಲ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದ ಸಂಬAರ್ಧದಲ್ಲಿ, ಎಂಎಸ್‌ಐಎಲ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಕೃಷ್ಣಮೂರ್ತಿ, ತಮ್ಮ ಮೇಲಾಧಿಕಾರಿಗಳಿಗೆ ಪರಿಸ್ಥಿತಿಯ ಅರಿವು ಮಾಡಿಕೊಟ್ಟರು.
ಹೈಡ್ರಾಮಾ;

ಈ ವೇಳೆಗಾಗಲೇ ಪ್ರತಿಭಟನ ನಿರತರಲ್ಲಿ ಕೆಲವರು, ಮದ್ಯ ಸಾಗಣಿಕೆ ವಾಹನದ ಮುಂದೆ ಅಡ್ಡಲಾಗಿ ಮಲಗಿ, ಜೀವ ಬಿಟ್ಟೆವು, ಮದ್ಯಮಾರಾಟ ಮಳಿಗೆ ಆರಂಭಕ್ಕೆ ಅವಕಾಶ ನೀಡೆವು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಪ್ರತಿಭಟನೆಯ ತೀವ್ರತೆ ಅರಿತ ಅಧಿಕಾರಿಗಳು ಮಾರಾಟಕ್ಕಾಗಿ ತಂದಿದ್ದ ಮದ್ಯ ಸಹಿತ ಪ್ರತಿಭಟನಾ ಸ್ಥಳದಿಂದ ವಾಪಾಸ್ಸು ಸುಮಾರು 42 ಬ್ರಾಂಡಿ ಬಾಕ್ಸ್ ಗಳನ್ನು ಹೊಸನಗರ ಅಭಕಾರಿ ಇಲಾಖೆಗೆ ತೆಗೆದುಕೊಂಡು ಹೋಗಿ ಅಲ್ಲಿ ಶೇಖರಿಸಿದರು.
ಮುಂದೆಯೂ ಸಹ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಮದ್ಯ ಮಾರಾಟ ಅಂಗಡಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂಬ ಧ್ಯೇಯವಾಕ್ಯದೊಂದಿಗೆ ಗ್ರಾಮಸ್ಥರು ಪ್ರತಿಭಟನೆಗೆ ಇತಿಶ್ರೀ ಹಾಡಿದರು.


ಪ್ರತಿಭಟನೆಯಲ್ಲಿ ಆಮ್‌ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಗಣೇಶ್ ಸೋಗೋಡು, ಜಿಲ್ಲಾ ದಲಿತ ಸಂಘದ ಅರಳುಸುರಳಿ ನಾಗರಾಜ್, ಮಾವಿನಕೊಪ್ಪದ ಬಾಬಣ್ಣ, ಜೇನಿ ಗ್ರಾ.ಪಂ. ಅಧ್ಯಕ್ಷೆ ವಿನೋಧ ಟೀಕಪ್ಪ, ಉಪಾಧ್ಯಕ್ಷೆ ಅಕ್ಷತಾ ನಾಗರಾಜ್, ಸದಸ್ಯ ಈರಮ್ಮ, ಮಾಜಿ ಉಪಾಧ್ಯಕ್ಷೆ ಸಹಿತ ವಿವಿಧ ಸ್ತ್ರಿ ಶಕ್ತಿ ಸಂಘದ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ.ಪಂ. ಸದಸ್ಯ ಅಶ್ವಿನಿಕುಮಾರ್, ಎಂ. ಗುಡ್ಡೇಕೊಪ್ಪ ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಕಳೂರು ಕೃಷ್ಣಮೂರ್ತಿ, ಪ್ರಮುಖರಾದ ಸಣ್ಣಕ್ಕಿ ಮಂಜು, ಜಯನಗರ ಗುರುರಾಜ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!