24.3 C
Shimoga
Friday, December 9, 2022

ಮಧನ್‌ಗೋಪಾಲ ವರದಿ ಯಥಾವತ್ ಅನುಷ್ಟಾನಕ್ಕೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ರಿಪ್ಪನ್‌ಪೇಟೆ: ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಅವಧಿಯಲ್ಲಿ ಬಗರ್‌ಹುಕುಂ ರೈತರ ಮತ್ತು ಶರಾವತಿ ಮುಳಗಡೆ ಸಂತ್ರಸ್ಥ ರೈತರಿಗೆ ಭೂ ಒಡೆತನ ನೀಡುವ ಮಧನ್‌ಗೋಪಾಲ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ ಜಾರಿಗೊಳಿಸಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧುಬಂಗಾರಪ್ಪ ಆಗ್ರಹಿಸಿದರು.


ರಿಪ್ಪನ್‌ಪೇಟೆಯ ಜ್ಯೋತಿ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕುಪತ್ರ ಹಾಗೂ ಬಗರ್‌ಹುಕುಂ ರೈತರಿಗೆ ಹಕ್ಕು ಪತ್ರಸೇರಿದಂತೆ ಮಲೆನಾಡಿ ರೈತರ ಜನಾಕ್ರೋಶ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯಕ್ಕೆ ಬೆಳಕು ನೀಡುವ ಉದ್ದೇಶದಿಂದಾಗಿ ಮನೆಮಠವನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಈ ವರೆಗೂ ಭೂಮಿಯ ಹಕ್ಕು ನೀಡದೆ ಅವರನ್ನು ನಿರಾಶ್ರಿತರನ್ನಾಗಿ ಮಾಡಿ ಕತ್ತಲಲ್ಲಿ ಕಾಲ ಕಳೆಯುವಂತೆ ಮಾಡಲಾಗಿದೆ ಈ ಬಗ್ಗೆ ಬೃಹತ್ ಹೋರಾಟದ ಮೂಲಕ ಹಕ್ಕುಪತ್ರ ಕೊಡಿಸಲು ಪ್ರಯತ್ನ ಮಾಡುವುದು ಅನಿರ್ವಾಯವಾಗಿದೆ ಎಂದರು.

ಮಲೆನಾಡ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದ ಅವರು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸ್ಥಿರ ಸರ್ಕಾರವಾಗಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ವಿತವಾಗಿದ್ದು ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ನಮ್ಮ ತಂದೆ ಎಸ್.ಬಂಗಾರಪ್ಪ ಸಾಹೇಬ್ರ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದರೂ ಅದರೆ ಇಂದಿನ ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡಲು ಮುಂದಾಗಿದೆ.ಹಾಗೇನಾದರೂ ಸರ್ಕಾರ ಮೀಟರ್ ಅಳವಡಿಸಲು ಮುಂದಾದರೆ ಅದನ್ನು ಕಿತ್ತು ಎಸೆಯುವುದರಲ್ಲಿ ನಾನೇ ಮೊದಲಿಗನಾಗುವೆನೆಂದರು.


ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಜನಸಾಮಾನ್ಯರು ರೈತರು ಹಿಂದುಳಿದವರ ಸಹಿತ ಎಲ್ಲರ ಸಮಸ್ಯೆಗೆ ಕಾಂಗ್ರೆಸ್ ಪಕ್ಷ ಮಾತ್ರ ಏಕೈಕ ಪರಿಹಾರವಾಗಿದೆ. ಇದೇ 28 ರಂದು ಅಯನೂರಿನಿಂದ ಶಿವಮೊಗ್ಗಕ್ಕೆ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನಾಕ್ರೋಶ ಪಾದಯಾತ್ರೆ ಹಾಗೂ ಬೃಹತ್ ಸಮಾವೇಶವನ್ನು ಉಳುವವನೇ ಹೊಲದೊಡೆಯ ಹೋರಾಟದ ಮೂಲಕ ರಾಜ್ಯದ ಹಿರಿಯ ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಹೋರಾಟ ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದರು.ಅರಣ್ಯ ಭೂಮಿ ಸಾಗುವಳಿದಾರರಿಗೆ ವಿಶೇಷ ನ್ಯಾಯಾಲಯದಿಂದ ನೋಟಿಸ್‌ಗಳು ಬರುತ್ತಿವೆ. ರೈತರನ್ನು ಭೂಗಳ್ಳರ ಹಾಗೆ ಬಿಂಬಿಸಲಾಗುತ್ತಿದೆ.ಬಸವರಾಜ್ ಬೊಮ್ಮಾಯಿ ಅವರಿಗೆ ಧಮ್ ಇದ್ರೆ, ತಾಕತ್ ಇದ್ರೆ ರೈತರ ಬಗ್ಗೆ ನಿಜವಾಗಿ ಕಾಳಜಿ ಇದ್ರೆ ಸಾಗುವಳಿದಾರರಿಗೆ ತಮ್ಮ ಅಧಿಕಾರಾವಧಿಯಲ್ಲಿಯೇ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಇನ್ನೂ ಮೂರು ನಾಲ್ಕು ತಿಂಗಳಿನಲ್ಲಿ ಭೂ ಒಡೆತನದ ಹಕ್ಕು ಕೊಡಿಸಲಿ ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಆಗ ನಾವೇ ಸಾಗುವಳಿದಾರಿಗೆ ಹಕ್ಕುಪತ್ರ ವಿತರಿಸುತ್ತೇವೆಂದರು.


ಜಿಲ್ಲಾಧ್ಯಕ್ಷ ಸುಂದರೇಶ್, ತಾಲ್ಲೂಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಎಂ.ಎಲ್.ಸಿ.ಆರ್.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ, ಪಕ್ಷದ ಮುಖಂಡರಾದ ಡಾ.ರಾಜಾನಂದಿನಿ, ಅನಿತಾಕುಮಾರಿ, ಮಂಜುನಾಥಗೌಡ, ರತ್ನಾಕರ್ ಇನ್ನಿತರರು, ಪಕ್ಷದ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!