ರಿಪ್ಪನ್ಪೇಟೆ : ರಾಜ್ಯದ ಯುವ ರಾಜಕಾರಣಿ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ ಎಂದು ರಾಜ್ಯ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪನವರು ಕಾಂಗ್ರೆಸ್ ಸೇರ್ಪಡೆಯಾಗುವುದರ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಬಲಿಷ್ಠವಾಗಲಿದೆ. ಹಾಗೆಯೇ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯರವರ ಕಾಂಗ್ರೆಸ್ನ ಮಹಾನ್ ಶಕ್ತಿಯ ಜೊತೆಗೆ ಇನ್ನೊಂದು ಯುವ ಶಕ್ತಿ ಸೇರಿದಂತಾಗಿದೆ ಎಂದರು.
ಬಿಜೆಪಿಯ ಬೆದರಿಕೆಗೆ ಕಾಂಗ್ರೆಸ್ ಬಗ್ಗುವುದಿಲ್ಲ:
ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ತನ್ನ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಶಾಸಕರ ಮೇಲೆ ಸವಾರಿ ಮಾಡಲು ಹೊರಟಿದೆ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷದ ಯಾರು ಸಹ ಬೆದರುವುದಿಲ್ಲ. ಬಿಜೆಪಿಯ ದುರಾಡಳಿತದ ಬಗ್ಗೆ ಸತ್ಯ ಹೇಳಿದರೆ ಅವರ ಪಾಲಿಗೆ ಅದು ರಾಷ್ಟ್ರ ದ್ರೋಹದ ಕೆಲಸವಾಗುತ್ತದೆ. ಇ.ಡಿ ಮತ್ತು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ಬಿಜೆಪಿಯವರು ಎತ್ತಿದ ಕೈ. ಕಳೆದ ಕೆಲವು ತಿಂಗಳುಗಳಿಂದ ದಿನೇಪಯೋಗಿ ವಸ್ತುಗಳ ಜೊತೆಗೆ ಎಲ್.ಪಿ.ಜಿ., ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದರೂ ಕೇಂದ್ರ ಮತ್ತು ರಾಜ್ಯದ ಬಿಜೆಪಿಯ ಮಾಹಾನ್ ಮುಖಂಡರುಗಳ ತುಟಿ ಪಿಟಿಕ್ ಅನ್ನುತ್ತಿಲ್ಲ ಎಂದು ಲೇವಡಿ ಮಾಡಿದರು.
ಇನ್ನೂ ಭದ್ರಾವತಿಯ ಶಾಸಕ ಸಂಗಮೇಶ್ವರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ಆಡಳಿತದ ಬಗ್ಗೆ ಶನಿವಾರ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವುದರ ಜೊತೆಗೆ ಜಿಲ್ಲೆಯಲ್ಲಿ ಬಿಜೆಪಿಯವರ ದುರಾಡಳಿತದ ಬಗ್ಗೆ ಜನ ಜಾಗ್ರತೆಯನ್ನುಂಟುಮಾಡಲಾಗುವುದು. ಈ ಬೃಹತ್ ಪ್ರತಿಭಟನೆಯಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲಾ ಹಿರಿಯ ಕಾಂಗ್ರೆಸ್ ಮುಖಂಡರುಗಳು ಮತ್ತು ಜಿಲ್ಲೆಯ ಮುಖಂಡರುಗಳು ಸೇರಿದಂತೆ ಪಕ್ಷದ ಎಲ್ಲರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿ.ಆರ್. ಗೋಪಾಲಕೃಷ್ಣ, ಉಂಟುಗೋಡು ನಾಗಪ್ಪ, ಗವಟೂರು ಉಲ್ಲಾಸ ಇನ್ನಿತರರಿದ್ದರು.
Related