ಮನುಷ್ಯ ದೇವರಿಗೆ ಮೆಚ್ಚುವಂತೆ ಬಾಳಬೇಕು: ಸಚ್ಚಿದಾನಂದ ಶ್ರೀ

0
184

ಚಿಕ್ಕಮಗಳೂರು: ಮನುಷ್ಯರು ದೇವರು ಮೆಚ್ಚುವಂತೆ ಬದುಕಬೇಕು, ನಾವು ಹಾಗೆ ಬಾಳಿದರೆ ಮಾತ್ರ ಭಗವಂತನ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಹರಿಹರಪುರ ಮಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ನಗರದ ಕಾಮಧೇನು ಗಣಪತಿ ಕ್ಷೇತ್ರದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವದಲ್ಲಿ ಹರಿಹರಪುರ ಮಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಕಾಮಧೇನು ಕ್ಷೇತ್ರವನ್ನು ಧರ್ಮಾಧಿಕಾರಿ ಡಾ. ಎಂ. ಎಸ್. ನಂಜುಂಡಸ್ವಾಮಿ ಅವರು ಹರಿಹರಪುರ ಶ್ರೀಮಠಕ್ಕೆ ಹಸ್ತಾಂತರಿಸಿದರು. ಈ ವೇಳೆ ಹರಿಹರಪುರದ ಸ್ವಾಮೀಜಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮನುಷ್ಯರು ತಮ್ಮ ವೈಯಕ್ತಿಕ ಉನ್ನತಿ, ಕುಟುಂಬದ ಕ್ಷೇಮ, ಸಮಾಜ ಮತ್ತು ದೇಶದ ಅಭಿವೃದ್ದಿ ಹಾಗೂ ವಿಶ್ವಕಲ್ಯಾಣ ಇವುಗಳನ್ನು ಗಮನದಲ್ಲಿಟ್ಟುಕೊಂಡು ಬದುಕಬೇಕು, ಹಾಗೆ ಬಾಳಿದರೆ ಮಾತ್ರ ಅವರ ಹೆಸರು ಚಿರಸ್ಥಾಯಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಕಾಮಧೇನು ಕ್ಷೇತ್ರವನ್ನು ಶ್ರೀಮಠಕ್ಕೆ ಸಮರ್ಪಣೆ ಮಾಡಿರುವ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ. ಎಸ್. ನಂಜುಂಡಸ್ವಾಮಿ ಅವರ ಕಾರ್ಯ ಸ್ತುತ್ಯಾರ್ಹವಾಗಿದ್ದು ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ತಿಳಿಸಿದರು.

ಧರ್ಮ ಸಭೆಯ ನಂತರ ಕ್ಷೇತ್ರದ ಅಧಿದೇವತೆಗಳಾದ ಕಾಮಧೇನು ಮಹಾಶಕ್ತಿ ಗಣಪತಿ, ಧನ್ವಂತರಿ ಮೃತ್ಯುಂಜಯ ಶ್ರೀಕಂಠೇಶ್ವರಸ್ವಾಮಿ, ಶ್ರೀ ರಾಜರಾಜೇಶ್ವರಿ, ಬಾಲಸುಬ್ರಹ್ಮಣ್ಯ ಸ್ವಾಮಿ ಮತ್ತು ಅಭಯ ಸಂಜೀವಿನಿ ಮಾರುತಿ ಉತ್ಸವ ಮೂರ್ತಿಗಳನ್ನು ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ನೂರಾರು ಭಕ್ತರ ನಡುವೆ ಬುಧವಾರ ವೈಭವದಿಂದ ನಡೆಯಿತು. ರಥೋತ್ಸವದ ಪ್ರಯುಕ್ತ ಬೆಳಿಗ್ಗೆ ಕ್ಷೇತ್ರದ ಅಧಿದೇವತೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಹಸ್ರ ದೂರ್ವಾರ್ಚನೆ, ಸಹಸ್ರ ಕುಂಕುಮಾರ್ಚನೆ ಜರುಗಿತು.

ಹರಿಹರಪುರ ಮಠಾಧೀಶ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಧಾರ್ಮಿಕ ವಿಧಿವಿಧಾನಗಳ ನಡುವೆ ಬ್ರಹ್ಮರಥವನ್ನು ಎಳೆಯಲಾಯಿತು.

ಬ್ರಹ್ಮರಥೋತ್ಸವದ ನಂತರ ಕ್ಷೇತ್ರದಲ್ಲಿ ಮಹಾಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಜಾಹಿರಾತು

LEAVE A REPLY

Please enter your comment!
Please enter your name here