ಮನುಷ್ಯ ಸಂಸ್ಕೃತಿ-ಸಂಸ್ಕಾರವನ್ನು ಬೆಳೆಸಿಕೊಂಡಿರಬೇಕು: ಬಸವ ಮರುಳಸಿದ್ದ ಶ್ರೀಗಳು

0
182

ಚಿಕ್ಕಮಗಳೂರು: ಮನುಷ್ಯ ಸಂಸ್ಕೃತಿಯೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು, ಹೆಣ್ಣನ್ನು ಗೌರವಿಸಬೇಕು, ಬಸವಣ್ಣನವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ದ ಶ್ರೀಗಳು ನುಡಿದರು.

ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಬಸವತತ್ವ ಪೀಠದಿಂದ ಆಯೋಜಿಸಿದ್ದ ಗುರುವಿನ ನಡಿಗೆ ಭಕ್ತರ ಕಡೆಗೆ ಕಾರ್ಯಕ್ರಮದಲ್ಲಿ ಗ್ರಾಮದ ಸಾಧಕರಿಗೆ ಮತ್ತು ಗಾ. ಪಂನ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನಿಸಿ ಆರ್ಶೀವಚನ ನೀಡಿ ಮಾತನಾಡಿ, ಪ್ರಪಂಚದಲ್ಲಿ ರೈತರೆಂದರೆ ದೇಶದ ಬೆನ್ನುಲುಬು. ಭೂಮಿ ಉತ್ತಿ ಬೆಳೆಯುವ ಮೂಲಕ ಇಡೀ ನಾಡಿಗೆ ಅನ್ನಕೊಡುವವರು. ದೇಶದಲ್ಲೇ ಯಾವುದೇ ಘಟನೆಗಳಾದರೂ ತಾವು ಭೂಮಿ ಉತ್ತಿ ಬೆಳೆ ಬೆಳೆಯುವ ಕೆಲಸವನ್ನು ಎಂದಿಗೂ ನಿಲ್ಲಿಸುವುದಿಲ್ಲ ಅಂತಹ ರೈತ ಸಮುದಾಯವನ್ನು ನಾವೆಲ್ಲರೂ ಸದಾ ಗೌರವದಿಂದ ಕಾಣಬೇಕು ಎಂದರು.

ಉಪನ್ಯಾಸ ನೀಡಿ ಮಾತನಾಡಿದ ರವೀಶ್ ಕ್ಯಾತನಬೀಡು, ದಿನ ನಿತ್ಯದಲ್ಲಿ ಮನುಷ್ಯ ಮಾಡುವ ತಪ್ಪುಗಳನ್ನು ತಿದ್ದಿ ಹೇಳಿ ಪರಾಮರ್ಶಿಸುವ ಕೆಲಸ ಗುರುಗಳದ್ದು, ಮನುಷ್ಯನ ತಪ್ಪುಗಳನ್ನು ತಿದ್ದಿ ಪರಾಮರ್ಶಿಸಿ ಬದುಕನ್ನು ಸದಾ ಕಟ್ಟುವ ಕೆಲಸವನ್ನು ಶರಣರು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ, ಭಕ್ತರೆಂದರೆ ಕೇವಲ ದೇವರ ಪೂಜೆ ಮಾಡುವುದಲ್ಲ ಬದಲಾಗಿ ನಿರಂತರವಾಗಿ ಒಳ್ಳೆಯ ಕೆಲಸಗಳನ್ನು ಮಾಡುವುದು, ದಿನನಿತ್ಯ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳುವುದು ಎಂದರು.

12 ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯದ ಮೂಲಕ ಮನುಷ್ಯರ ಬದುಕನ್ನು ಕಟ್ಟುವ ಕೆಲಸ ಮಾಡಿದರು. ನಾನು ಎಂಬ ಅಹಂಕಾರದಿಂದ ನಾಶ ಎಂಬುದನ್ನು ಮನವರಿಕೆ ಮಾಡಿದರು. ಆದರೆ ಇತ್ತೀಚಿನ ದಿನಗಳಲ್ಲಿ ವೈಚಾರಿಕ ಪ್ರಜ್ಞೆ ಬದಲಾಗಿ ಧರ್ಮ, ದೇವರ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ ಸಂಸ್ಕೃತಿ ಆಚಾರ ವಿಚಾರಗಳ್ನು ಮುಂದಿನ ಪೀಳಿಗೆಗೆ ರವಾನಿಸುವ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಗಳು ಇಂದಿಗೂ ಇವೆ. ಮನುಷ್ಯ ಅಂತರಂಗವನ್ನು ಶುಚಿಯಾಗಿಟ್ಟುಕೊಳ್ಳಬೇಕು, ಧರ್ಮದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶರಣರ ಕಾಲದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಮೇಲೆ, ಶೋಷಣೆ, ದೌರ್ಜನ್ಯಗಳು ಹೆಚ್ಚುತ್ತಿವೆ. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದೇ ಹೆಣ್ಣನ್ನು ಸೃಷ್ಟಿಸಿದ್ದು ನಾವೆಲ್ಲರೂ ಗೌರವ ಪೂಜ್ಯಭಾವನೆಯಿಂದ ಕಾಣಬೇಕು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯರ ನಡುವೆ ಬಾಂಧವ್ಯಗಳು ಕಡಿಮೆಗೊಳ್ಳುತ್ತಿವೆ, ನಗರ ಪ್ರದೇಶ ಹಾಗೂ ಹಳ್ಳಿ ಜನರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಮಾನವೀಯ ಮೌಲ್ಯಗಳು ಕಡಿಮೆಗೊಳ್ಳುತ್ತಿವೆ, ಜಾತಿ ತಾರತಮ್ಯ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಗ್ರಾಮಪಂಚಾಯಿತಿ ಅಧ್ಯಕ್ಷ ರಘುನಂದನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾತೀಯತೆ, ಮೌಢ್ಯಾಚರಣೆಗಳು ಹೆಚ್ಚಿದ್ದು ಗೋಷ್ಟಿಗಳ ಸಮಾಜವನ್ನು ತಿದ್ದುವ ಕೆಲಸವನ್ನು ಶ್ರೀಗಳು ಮಾಡುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. 12 ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಭಿತ್ತಿದವರು ಅವರ ಸಂದೇಶಗಳು, ಅನುಸರಿಸಿಕೊಂಡು ಸಮಾಜ ಸಾಗಬೇಕಿದೆ ಎಂದು ಅಭಿಪ್ರಾಯಿಸಿದರು.

ಎಂ. ಎಸ್. ಚಂದ್ರಪ್ಪ ಪ್ರಾಸ್ತವಿಕವಾಗಿ ಮುಗುಳುವಳ್ಳಿ ಗ್ರಾಮದ ಇತಿಹಾಸವನ್ನು ವಿಸ್ತಾರವಾಗಿ ವಿವರಿಸಿದರು. ಮಳವಳ್ಳಿ, ಮಂಡಕಳ್ಳಿ ಎಂದು ಕರೆಯಲ್ಪಡುತ್ತಿದ್ದ ಗ್ರಾಮ ಇಂದು ಮುಗುಳುವಳ್ಳಿಯಾಗಿ ಮಾರ್ಪಾಟ್ಟು ಸಾಕಷ್ಟು ಅಭಿವೃದ್ಧಿ ಹೊಂದಿದೆ, ಗ್ರಾಮದ ಅಭಿವೃದ್ಧಿಯಲ್ಲಿ ಸಾಕಷ್ಟು ಹಿರಿಯ ಮುಖಂಡರು ಶ್ರಮಿಸಿದ್ದಾರೆ ಅವರ ಹಾದಿಯಲ್ಲಿ ಇಂದಿನ ಪೀಳಿಗೆಯು ಶ್ರಮಿಸುತ್ತಿದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here