ಮನೆ ಮನೆಯಲ್ಲಿ ದೇಶ ಭಕ್ತಿಗೀತೆ, ರಾಷ್ಟ್ರಾಭಿಮಾನ ಮೊಳಗಬೇಕು: ಸಚಿವ ಕೆ.ಎಸ್ ಈಶ್ವರಪ್ಪ

0
171

ಶಿವಮೊಗ್ಗ: ಮನೆ ಮನೆಯಲ್ಲಿ ದೇಶ ಭಕ್ತಿಗೀತೆ, ರಾಷ್ಟ್ರಾಭಿಮಾನ ಮೊಳಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಜಿಲ್ಲಾ ಜಂಗಮ ಮಹಿಳಾ ಸಮಾಜದ ವತಿಯಿಂದ ತಾಲೂಕು ಜಂಗಮ ಸಮಾಜ, ವಿನೋಬನಗರ ವೀರಶೈವ ಸೇವಾ ಸಮಿತಿ ಇವರ ಸಹಯೋಗದೊಂದಿಗೆ ವಿನೋಬನಗರ ಶಿವಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಡ ನಮನ ಸಮೂಹ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣುಮಕ್ಕಳು ಸದಾ ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಮನೆಯೊಳಗೆ ಒತ್ತಡದಲ್ಲಿರುತ್ತಾರೆ. ಅವರು ಮನೆ ಕೆಲಸದ ಜೊತೆಗೆ ಈ ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪರಸ್ಪರ ತಮ್ಮ ಸಮಸ್ಯೆ ಹಂಚಿಕೊಳ್ಳಬೇಕು, ಒಳ್ಳೆಯ ವಿಚಾರ ತಿಳಿಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಭಜನೆ, ಹಾಡು ಇನ್ನಿತರ ಸಂಸ್ಕಾರ ಬೇರೂರಿದಾಗ ಅದು ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದರು.

ಭಜನೆ ಮತ್ತು ಹಾಡಿಗೆ ರಾಗ ಮುಖ್ಯವಲ್ಲ, ಭಾವ ಮುಖ್ಯ. ಉತ್ತಮ ಹಾಡುಗಾರರ ಜೊತೆಗೆ ಧ್ವನಿ ಗೂಡಿಸಿದಾಗ ತನ್ನಿಂತಾನೇ ಅವರು ಅದ್ಭುತ ಹಾಡುಗಾರರಾಗುತ್ತಾರೆ. ಭಕ್ತಿಯಲ್ಲಿ ತಲ್ಲೀನರಾದಾಗ ಸ್ವಾಭಾವಿಕವಾಗಿ ಉತ್ತಮ ಹಾಡು ಹೊರ ಬರುತ್ತದೆ. ಮತ್ತು ಅದರಿಂದ ಹೃದಯಕ್ಕೆ ಆನಂದ, ಮಾನಸಿಕ ನೆಮ್ಮದಿ ದೊರೆಯುತ್ತದೆ. ಒಟ್ಟಾಗಿ ಸೇರುವುದರಿಂದ ಪರಸ್ಪರ ಸಮಸ್ಯೆ, ಸಂತೋಷಗಳನ್ನು ಹಂಚಿಕೊಳ್ಳಬಹುದಾಗಿದೆ ಎಂದರು.

ಸದ್ಗುಣ, ಸಚ್ಚಾರಿತ್ರ್ಯ, ಸಹನೆ, ಸಹಕಾರ ಮನೋಭಾವನೆ, ಸಂಸ್ಕಾರ ಇವೆಲ್ಲವೂ ಭಜನೆಯಿಂದ ಹೊರಬರಲು ಸಾಧ್ಯ. ಇದು ಕೇವಲ ಮಹಿಳೆಯರ ಗುಂಪುಗಾರಿಕೆ ಮಾತ್ರವಲ್ಲ. ಭಕ್ತಿ ಮತ್ತು ಭಾವದ ಸಮ್ಮಿಲನವಾಗಿದೆ. ಸಂಗೀತ, ಹಾಡುಗಳು ಹೃದಯನ್ನು ಮಾತ್ರ ತಟ್ಟುವುದಿಲ್ಲ. ಮನಸಿಗೆ ನೆಮ್ಮದಿಯನ್ನೂ ನೀಡುತ್ತವೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಹೆಣ್ಣು ಮಕ್ಕಳನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ನಮಗೆ ಅರಿವಿಲ್ಲದೇ ನಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರ ಸಿಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಜಂಗಮ ಸಮಾಜದ ಗೌರವಾಧ್ಯಕ್ಷ ಟಿ.ವಿ. ಈಶ್ವರಯ್ಯ, ವಿನೋಬನಗರ ವೀರಶೈವ ಸಮಿತಿ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನ ಸ್ವಾಮಿ, ತಾಲೂಕು ಸಮಾಜ ಅಧ್ಯಕ್ಷ ಉಮೇಶ್ ಹಿರೇಮಠ್, ಜಿಲ್ಲಾ ಜಂಗಮ ಮಹಿಳಾ ಸಮಾಜದ ಅಧ್ಯಕ್ಷೆ ಸುಜಯ ಪ್ರಸಾದ್, ರುದ್ರಯ್ಯ, ಮರುಳೇಶ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here