ಮರಣ ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ: ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಸೂಚನೆ

0
148

ಚಿಕ್ಕಮಗಳೂರು: ವೈದ್ಯರು ಚಿಕಿತ್ಸೆ ನೀಡಿದ ವ್ಯಕ್ತಿಯು ಮೃತನಾದಲ್ಲಿ ಮೃತ ವ್ಯಕ್ತಿಯನ್ನು ಉಪಚರಿಸಿದ ವೈದ್ಯ ವೃತ್ತಿಪರರು ನಮೂನೆ 4/4ಎ ನಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ವರದಿಗಳನ್ನು ಸಲ್ಲಿಸಬೇಕು, ನಂತರ ಅದನ್ನು ನೋಂದಣಾಧಿಕಾರಿಗಳು ಇ-ಜನ್ಮ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಹೇಳಿದರು.

ಗುರುವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜನನ-ಮರಣ ನೋಂದಣಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಮಾತನಾಡಿದ ಅವರು, ಮರಣದ ಕಾರಣ ತಿಳಿಸುವ ವೈದ್ಯಕೀಯ ಪ್ರಮಾಣ ಪತ್ರ ನಮೂನೆ 4/4ಎ ಗಳ ಬದಲು ಸಂಬಂಧಪಡದ ಅನಗತ್ಯ ದಾಖಲಾತಿಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ಅಧಿಕಾರಿಗಳು ಸಲ್ಲಿಸುತ್ತಿರುವ ಮಾಹಿತಿಯಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಜನನ ಮರಣ ಘಟನೆಗಳನ್ನು ಘಟನೆ ಸಂಭವಿಸಿದ 21 ದಿನಗೊಳಗಾಗಿ ನೋಂದಾಯಿಸಬೇಕು. ವಿಳಂಬವಾದಲ್ಲಿ ವಿಧಾಯಕ ಪ್ರಾಧಿಕಾರಿಯ ಅಥವಾ ದಂಡಾಧಿಕಾರಿ ಲಿಖಿತ ಅನುಮತಿಯ ಮೇರೆಗೆ ನೋಂದಣಾಧಿಕಾರಿಗಳು ನೋಂದಣಿ ಮಾಡಬೇಕು ಎಂದು ತಿಳಿಸಿದರು.

ಜನನ-ಮರಣ ನೋಂದಣಾಧಿಕಾರಿಗಳು ಜನನ-ಮರಣ ನೋಂದಣಿಯನ್ನು ಪಾರದರ್ಶಕತೆಯಿಂದ ನಿರ್ವಹಿಸಲು ಅಸ್ತಿತ್ವದಲ್ಲಿರುವ ಇ-ಜನ್ಮ ತಂತ್ರಾಂಶದ ಲಾಗಿನ್ ಐ. ಡಿ ಮತ್ತು ಪಾಸ್‌ವರ್ಡ್‌ಗಳ ರುಜುವಾತುಗಳನ್ನು ಪರಿಶೀಲಿಸಿ ಪಾಸ್‌ವರ್ಡ್‌ಗಳನ್ನು ನವೀಕರಿಸಬೇಕು ಹಾಗೂ ನೋಂದಣಿ ವೇಳೆ ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿ, ಅನಧಿಕೃತ ಸುಳ್ಳು ಜನನ-ಮರಣ ಪ್ರಮಾಣ ದಾಖಲಾತಿಯಾಗದಂತೆ ನಿಗಾವಹಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲೆಯ 1212 ಗ್ರಾಮೀಣ ಪ್ರದೇಶದ ಹಾಗೂ 19 ನಗರಪ್ರದೇಶದ ನೋಂದಣಿ ಕೇಂದ್ರಗಳಲ್ಲಿ ಜನನ ಮರಣ ಮಾಹಿತಿಯನ್ನು ಸಕಾಲದಲ್ಲಿ ನೋಂದಣಾಧಿಕಾರಿಗಳಿಗೆ ತಿಳಿಸಲು ಅನುಕೂಲವಾಗುವಂತೆ ಅಂಗನವಾಡಿ, ಆಶಾ ಕಾರ್ಯಕರ್ತರು, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು, ಎಎನ್‌ಎಮ್‌ಗಳು ಹಾಗೂ ಇತರೆ ಸಿಬ್ಬಂದಿಗಳನ್ನೊಳಗೊಂಡ ವಾಟ್ಸಾಪ್ ಗ್ರೂಪ್‌ನ ಮೂಲಕ ಜನನ ಮರಣ ಮಾಹಿತಿಗಳನ್ನು ಕ್ರೋಡಿಕರಿಸಲಾಗುತ್ತದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಶಿಕಲಾ. ಬಿ. ಎನ್ ತಿಳಿಸಿದರು.

ಸಭೆಯಲ್ಲಿ ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಧರ್ಮೇಶ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here