ಮರ ಆಧಾರಿತ ಕೃಷಿಯಿಂದ ಲಾಭ

0
275

ಶೃಂಗೇರಿ: ತಮಿಳುನಾಡಿನ ಈಶಾ ಸಂಸ್ಥೆ ಹಾಗೂ ಮೆಣಸೆ ಗ್ರಾಪಂ ಸಹಯೋಗದಲ್ಲಿ ನಡೆದ “ಕಾವೇರಿ ಕೂಗು” ಕಾರ್ಯಕ್ರಮವನ್ನು ತಾಪಂ ಇಒ ಜಯರಾಮ್ ಉದ್ಘಾಟಿಸಿದರು.

ಪ್ರಕೃತಿಯ ಜಲ, ಭೂ ಸಂಪತ್ತನ್ನು ಉಳಿಸಿ ಬೆಳೆಸುವತ್ತ ಎಲ್ಲರೂ ಹೆಚ್ಚಿನ ಗಮನಹರಿಸಬೇಕಿದೆ. ಸರ್ವರ ಜೀವನಾಡಿಯಾದ ನದಿಗಳು ಉಳಿಯಬೇಕಾದರೆ ಅರಣ್ಯಸಂಪತ್ತನ್ನು ಜತನಗಳಿಂದ ಕಾಪಾಡುವ ಹೊಣೆಗಾರಿಕೆ ಜನಪ್ರತಿನಿಧಿ ಹಾಗೂ ಅಧಿಕಾರ ವರ್ಗದ ಮೇಲಿದೆ ಎಂದರು.

ಈಶಾ ಸಂಸ್ಥೆಯ ಕಾರ್ಯಕರ್ತ ಸಚಿನ್ ಮಾತನಾಡಿ, ಕೃಷಿಕರ ಜಮೀನುಗಳಲ್ಲಿ ಮರದ ನೆಡುವಿಕೆಯಿಂದ ದೊರಕುವ ಲಾಭದಿಂದ ಕೃಷಿಕರ ಆದಾಯ ಹೆಚ್ಚಳವಾಗುತ್ತದೆ. ಮರ ಆಧಾರಿತ ಕೃಷಿಯನ್ನು ಅಂತರಬೆಳೆಗಳ ಜೊತೆ ರೂಢಿ ಮಾಡಿದಾಗ ಸಾಮಾನ್ಯ ಬೆಳೆಗಳ ಮೇಲೆ ಕೀಟ ಮತ್ತು ರೋಗಗಳ ಪ್ರಭಾವ ಕಡಿಮೆಯಾಗುತ್ತದೆ ಎಂದರು.

ಮಲೆನಾಡಿನಲ್ಲಿ ತೇಗ, ಹೆಬ್ಬೇವು, ಶ್ರೀಗಂಧ ಮರಗಳನ್ನು ಬೆಳೆಸುವತ್ತ ರೈತರು ಹೆಚ್ಚು ಗಮನ ನೀಡಬೇಕು. ಮರ ಆಧಾರಿತ ಕೃಷಿಯ ನಿರ್ವಹಣೆ ವೆಚ್ಚವು ಕಡಿಮೆ. ಜಮೀನಿನ ಫಲವತ್ತತೆಯನ್ನು ಮರಳಿ ಮರಗಳನ್ನು ನೆಡುವ ಮೂಲಕ ಪಡೆದರೆ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರಾಕೃತಿಕ ಸಮತೋಲನಕ್ಕೆ ಮರಗಳ ಸಂರಕ್ಷಣೆ ಅತಿ ಅಗತ್ಯವೆಂದು ಹೇಳಿದರು.

ಸಂಸ್ಥೆಯ ಪದಾಧಿಕಾರಿ ಪ್ರವೀಣ್, ಗ್ರಾ. ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಶಾಮಣ್ಣ, ಮಂಜುನಾಥ್, ತ್ರಿಮೂರ್ತಿ, ಸಂಧ್ಯಾ, ಭಾಗ್ಯ ಹಾಗೂ ಕೃಷಿಕರಾದ ಸಸಿಮನೆ ಶಿವಶಂಕರ್, ಅಂಗುರ್ಡಿ ದಿನೇಶ್ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here