ಮರ-ಗಿಡಗಳನ್ನು ರಕ್ಷಿಸಿದರೆ ಅದು ನಿಮ್ಮ‌ ಕುಟುಂಬವನ್ನೇ ಸಂರಕ್ಷಿಸುತ್ತದೆ ; ಸಾಲುಮರದ ತಿಮ್ಮಕ್ಕ

0
141

ಶಿವಮೊಗ್ಗ: ಮರಗಿಡಗಳನ್ನು ರಕ್ಷಿಸಿದರೆ ಅದು ನಿಮ್ಮ‌ ಕುಟುಂಬವನ್ನೇ ಸಂರಕ್ಷಿಸುತ್ತದೆ ಎಂದು ಪದ್ಮಶ್ರೀ ಪುರಸ್ಕೃತರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.

ಅವರು ಇಂದು ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯಲ್ಲಿ ಸರ್ಜಿ ಫೌಂಡೇಷನ್ ಹಾಗೂ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆ ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನ ಮಹೋತ್ಸವ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ‌ ಪತ್ರ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಗಿಡ ನೆಟ್ಟು ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮರಗಳು ಬೆಳೆದಂತೆ ಪರಿಸರದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಊರು, ಕೇರಿ, ಜನ, ಕುಟುಂಬಗಳು ಸಂತೋಷವಾಗಿರಬೇಕಾದರೆ ಗಿಡ, ಮರಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಆಗ ಊರು ಉದ್ಧಾರವಾಗುತ್ತದೆ. ಊರಿನಲ್ಲಿ ಜನಗಳು ಯಾವ ರೀತಿ ಒಟ್ಟಾಗಿ ಗುಂಪಾಗಿ ಇರುತ್ತಾರೋ ಅದೇ ರೀತಿ ಮರಗಳನ್ನು ಕೂಡ ಗುಂಪು ಗುಂಪಾಗಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಒಬ್ಬರಿಗೊಬ್ಬರು ಸಹಕರಿಸಬೇಕು. ಪರಿಸರ ವೃದ್ಧಿಯಾದರೆ ಮಳೆ, ಬೆಳೆ ಚೆನ್ನಾಗಿ ಬರುತ್ತದೆ. ಎಲ್ಲರಿಗೂ ಸುಖ, ಸಂಪತ್ತು ಲಭ್ಯವಾಗುತ್ತದೆ. ಕಷ್ಟಗಳು ದೂರವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಪರಿಸರ ದಿನಾಚರಣೆಯನ್ನು ವರ್ಷಪೂರ್ತಿ ಆಚರಿಸಿದರೂ ತಪ್ಪಲ್ಲ. ಅದನ್ನು ರಕ್ಷಿಸಿದರೆ ಮಾತ್ರ ಮನುಷ್ಯನಿಗೆ ಉಳಿಗಾಲ ಎಂದರು.

ಮರಗಳ ನಾಶದ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಪರಿಸರದಲ್ಲಿ ಅಸಮತೋಲನ ಉಂಟಾಗಿ ಮಳೆಯಲ್ಲಿ ವ್ಯತ್ಯಯವಾಗುತ್ತದೆ. ಪರಿಸರವನ್ನು ನಾವು ಗೆಲ್ಲಲು ಸಾಧ್ಯವಿಲ್ಲ. ಅದರ ಜೊತೆಗೆ ಜೀವನ ಮಾಡಬೇಕೆಂದಾದರೆ ಗಿಡ ಮರಗಳನ್ನು ನೆಡುವುದರ ಜೊತೆಗೆ ಇರುವ ಮರಗಳನ್ನು ಕಾಪಾಡಬೇಕು. ವಿವಿಧ ರೀತಿಯಲ್ಲಿ ಪರಿಸರ ಮಾಲಿನ್ಯವಾಗುವುದನ್ನು ನಿಯಂತ್ರಣಕ್ಕೆ ತರಬೇಕು. ಪರಿಸರದಿಂದ ಸಿಗುವ ಲಾಭವನ್ನು ಮಿತವಾಗಿ ಬಳಸಬೇಕು ಎಂದು ಹೇಳಿದರು.

ಡಾ. ಧನಂಜಯ ಸರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿ, ನೀರು ಹರಿಯವುದು ಗೊತ್ತಾಗುತ್ತದೆ. ಅನೇಕರಿಗೆ ರಕ್ತ ಹರಿಯುವುದು ಗೊತ್ತಿರುವುದಿಲ್ಲ. ಪ್ರತಿ ಮನುಷ್ಯ ಪ್ರತಿನಿತ್ಯ 11500 ಲೀಟರ್ ಗಾಳಿಯನ್ನು ಸೇವಿಸಿ ಹೊರಗೆ ಬಿಡುತ್ತಾನೆ. ಮಾನವನಿಗೆ ಶ್ವಾಸಕೋಶ ಇದ್ದಂತೆ ಮರ ಗಿಡಗಳೇ ಪ್ರಕೃತಿಗೆ ಶ್ವಾಸಕೋಶ. ಒಂದು ದೊಡ್ಡ ಮರ ಒಂದು ವರ್ಷಕ್ಕೆ 10 ಜನರಿಗಾಗುವಷ್ಟು ಶುದ್ಧಆಮ್ಲಜನಕ ಕೊಡುತ್ತದೆ. ಮಾಲಿನ್ಯ ಜಾಸ್ತಿ ಆಗುತ್ತಿರುವ ಇಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ದು, ಶೇ. 30 ರಷ್ಟು ಮಾತ್ರ ಅರಣ್ಯ ಉಳಿದಿದೆ. ಗ್ಲೋಬಲ್ ವಾರ್ಮಿಂಗ್ ಹೆಚ್ಚಳದಿಂದ‌ ಉಷ್ಣಾಂಶ ಏರಿಕೆಯಾಗಿದ್ದು, ಸಮುದ್ರ ಜೀವಿಗಳು ಮತ್ತು ಮನುಷ್ಯರಿಗೆ ತೊಂದರೆಯಾಗಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ತಾಪ‌ಮಾನ 40 ಡಿಗ್ರಿ ಸಮೀಪಕ್ಕೆ ಬರುತ್ತಿದೆ ಎಂದರು.

ಪರಿಸರ ನಾಶದಿಂದ ಮಾಲಿನ್ಯ ಹೆಚ್ಚಳವಾಗುತ್ತಿದ್ದು, ಟಿವಿ, ಮೊಬೈಲ್ ನಿಂದ ಮೆದುಳು ಮಾಲಿನ್ಯ ಹೆಚ್ಚಾಗುತ್ತಿದ್ದು, ಅನೇಕ ರೀತಿಯ ಕಾಯಿಲೆಗಳು ಬರುತ್ತಿವೆ. ಇಂದಿನ ಮಕ್ಕಳೇ‌ ಮುಂದಿನ ದೇಶದ ಆಸ್ತಿ. ಆದ್ದರಿಂದ ಅವರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಹೊಣೆಯಾಗಿದೆ. ಹಾಗಾಗಿ ನಮಗಿರುವುದೊಂದೇ‌ ಭೂಮಿ. ಅದರ ರಕ್ಷಣೆಯ ಹೊಣೆ ನಮ್ಮದು ಎನ್ನುವ ಧ್ಯೇಯ ವಾಕ್ಯದಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ 15 ಶಾಲೆಗಳಿಂದ 2200 ಮಕ್ಕಳಿಗೆ ಪರಿಸರಕ್ಕೆ ಸಂಬಂಧಿಸಿದ ಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ವಿಲೇವಾರಿ ಹಾಗೂ ಚರಂಡಿಗಳ ಸ್ವಚ್ಛತೆಯಲ್ಲಿ ಸಮುದಾಯಗಳ ಪಾತ್ರ ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅವರಿಗೆ ಇಂದು ಬಹುಮಾನ ವಿತರಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಬಸವ ಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಶಿವಮೊಗ್ಗ ಡಿಎಫ್‌ಒ ಜಿ.ಯು ಶಂಕರ್, ಪ್ರಾಂಶುಪಾಲ ಫಾ.ವಿನ್ಸೆಂಟ್, ರೆ.ಫಾ. ಜೋಸೆಫ್, ಪೂಪಲ್ಲಿಲ್, ಸರ್ಜಿ ಫೌಂಡೇಷನ್ ನಮಿತಾ ಸರ್ಜಿ, ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆ ಪ್ರಾಂಶುಪಾಲ ಫಾ. ನಿಕ್ಸನ್ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here