24.3 C
Shimoga
Friday, December 9, 2022

ಮಲೆನಾಡಿನ ಹೆಮ್ಮೆಯ ಪಕ್ಷಿಕಾಶಿ ಗುಡವಿಯಲ್ಲೀಗ ಹಕ್ಕಿ ಸಂಕುಲಗಳ ಕಲರವ

ಸೊರಬ: ವಿಶ್ವ ವಿಖ್ಯಾತಿ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪಕ್ಷಿ ಕಾಶಿ ಗುಡವಿಯಲ್ಲೀಗ ಪಕ್ಷಿ ಸಂಕುಲಗಳ ಕಲರವ, ಸಂಭ್ರಮ ಕಾಣಸಿಗುತ್ತಿದೆ. ಸರಾಸರಿ 950-1000 ಮಿಮೀ ಮಳೆ ಬೀಳುವ ಈ ಪ್ರದೇಶದಲ್ಲಿ 15-38 ಡಿಗ್ರಿ ಸೆ.ಉಷ್ಣಾಂಶವಿರುತ್ತದೆ. ಪಕ್ಷಿಧಾಮದ ವಿಸ್ತೀರ್ಣ 74 ಹೆಕ್ಟೇರ್ ಇದ್ದು, ಅರ್ಧದಷ್ಟು ಜಲಾವೖತಗೊಂಡಿದೆ. ಉತ್ತಮ ತೇವಾಂಶ ಇರುವ ಇಲ್ಲಿ ಎಲೆ ಉದುರುವ ತಾರೆ, ಮತ್ತಿ, ಹುಣಾಲು, ಬೀಟೆ, ತೇಗ, ನಂದಿ, ಅಳಲೆ, ಎತ್ಯಾಗ, ಜಂಬೆ, ಆಲ, ಅರಳಿ, ಮುತ್ತುಗ, ನೇರಳೆ ಶ್ರೀಗಂಧವಲ್ಲದೆ ಇನ್ನೂ ಅನೇಕ ಮರ, ಗಿಡಗಳು ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಆಶ್ರಯ ನೀಡಿವೆ, ವಿಶ್ರಾಂತಿಗಾಗಿ ಹೂಲಿ, ಹೊಳೆಲಕ್ಕಿ, ಬೆಟ್ಟದ ನೆಲ್ಲಿ, ಕರಿಬಸರಿ, ಯಥೇಚ್ಛಾ ಬಿದಿರು ನೆರವು ನೀಡಿವೆ. ಸುಮಾರು 200-250 ಮನೆಗಳಿರುವ ತಾಲ್ಲೂಕಿನ ಚಿಕ್ಕ ಗ್ರಾಮವೊಂದಕ್ಕೆ ದೇಶ ವಿಖ್ಯಾತಿ ನೀಡಿದ ಕೀರ್ತಿ ಇಲ್ಲಿಗೆ ಬರುವ ವಲಸೆಗಾರ ಪಕ್ಷಿಗಳಿಗೆ ಸೇರಬೇಕಿದೆ.

ಗುಡವಿ ಪಕ್ಷಿಧಾಮದಲ್ಲಿನ ಪಕ್ಷಿಗಳ ಕಲರವ.

ಸಂತಾನಾಭಿವೖದ್ಧಿ :

1993ರ ಪಕ್ಷಿ ಗಣತಿ ಅನ್ವಯ ಸುಮಾರು 191 ಜಾತಿಯ ಪಕ್ಷಿಗಳನ್ನು ಇಲ್ಲಿ ಗುರುತಿಸಲಾಗಿದೆ. ಅವುಗಳಲ್ಲಿ 63 ಜಲಾಶ್ರಿತ ಪಕ್ಷಿಗಳು, ಇವುಗಳಲ್ಲಿ 20 ಜಾತಿಯ ಪಕ್ಷಿಗಳು ಪಕ್ಷಿಧಾಮದಲ್ಲಿಯೇ ವಂಶಾಭಿವೖದ್ಧಿ ನಡೆಸಿದರೆ, ಇನ್ನು 10 ಜಾತಿಯ ಪಕ್ಷಿಗಳು ದಾಮದ ಒಳಗೆ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಸಂತಾನ ಬೆಳೆಸುತ್ತವೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸುವ ಪಕ್ಷಿಗಳು ಇದೇ ಜೂನ್ ನಿಂದ ವಲಸೆ ಬರಲಾರಂಭಿಸುತ್ತವೆ. ಈ ತಿಂಗಳೇನಿದ್ದರೂ ಗೂಡುಗಳಿಗಾಗಿ ತಡಕಾಟ, ಜುಲೈ ತಿಂಗಳಲ್ಲಿ ಗೂಡು ನಿಮಾ೯ಣ, ಅಗಸ್ಟ್ ನ ಮೊದಲ ವಾರದಲ್ಲಿ ಮೊಟ್ಟೆ ಇಡುವ ತರಾತುರಿ, ಸೆಪ್ಟೆಂಬರ್ ನಲ್ಲಿ ಮರಿಗಳು ಮೊಟ್ಟೆಯಿಂದ ಹೊರಗೆ ಬರುತ್ತವೆ. ಇವುಗಳಲ್ಲಿ ಸ್ಪೂನ್ ಬಿಲ್ ಪಕ್ಷಿ ಮಾತ್ರ ತುಸು ವಿಳಂಬ ನೀತಿ ಅನುಸರಿಸುತ್ತಿದ್ದು, ಅಕ್ಟೋಬರ್ ಮಾಹೆಯಲ್ಲಿ ಮರಿಗಳ ಆರ್ರಂಗೆಟ್ಟಾ ಆರಂಭಗೊಳ್ಳುತ್ತದೆ.

ಗುಡವಿ ಪಕ್ಷಿಧಾಮದ ಪ್ರವೇಶ ದ್ವಾರ.

ಮುಖ್ಯ ಸಂಕುಲಗಳು :

ಇಲ್ಲಿ ಸ್ಥಳೀಯ ಪಕ್ಷಿಗಳು ಸೇರಿದಂತೆ ಸ್ಕಾಟ್ ಲ್ಯಾಂಡ್ ನ ಸುಮಾರು 25 ಸಾವಿರಕ್ಕೂ ಅಧಿಕ ಪಕ್ಷಿಗಳು ಬೀಡು ಬಿಡುತ್ತವೆ. ಬಿಳಿ ಐಬಿಸ್, ಚಿಕ್ಕ, ಮಧ್ಯಮ ಗಾತ್ರದ ಇಗ್ರೆಟ್, ಚಿಕ್ಕ ಕಾರ್ಮೋರೆಂಟ್, ಡಾರ್ಟರ್ಸ್, ಪರ್ಪಲ್ ಹೆರಾನ್ ಇವು ಇಲ್ಲಿನ ಮುಖ್ಯ ಸಂಕುಲಗಳಾಗಿವೆ.

ಗ್ರಾಮಾಭಿಮಾನ :

ಗುಡವಿ ಗ್ರಾಮಸ್ಥರಿಗೆ ತಮ್ಮ ಗ್ರಾಮಕ್ಕೆ ಆಗಮಿಸುವ ಈ ಅಪರೂಪದ ಅತಿಥಿಗಳ ಕುರಿತು ಅಪಾರ ಗೌರವವಿದೆ, ಅಂತೆಯೇ ಪ್ರತಿ ವಷ೯ ಇಲ್ಲಿನ ಕಲರವ, ಕುಹು ಕುಹು ಗಮನಿಸಿ ಸಂತಸ ಪಡುತ್ತಾರೆ. ಪಕ್ಷಿಧಾಮದ ಅಭಿವೖದ್ಧಿಗೆ, ರಕ್ಷಣೆಗೆ ತುಂಬು ಸಹಕಾರ ನೀಡುತ್ತಾರೆ. ಅದೇ ರೀತಿ ಇಲ್ಲಿನ ವಾಚ್ ಮನ್, ಸಿಬ್ಬಂದಿ ಕೂಡ ವೀಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇಚ್ಛಿಸುತ್ತಾರೆ. ಪಕ್ಷಿಗಳ ಹಿಕ್ಕೆ ನೀರಿಗೆ ಬಿದ್ದು ಮೀನುಗಳಿಗೆ ಆಹಾರವಾಗಿ, ಅದೇ ಮೀನು ಪಕ್ಷಿಗಳಿಗೆ ಆಹಾರವಾಗುವ ಆಹಾರ ಸರಪಳಿಗೆ ಇಲ್ಲಿ ಹೆಚ್ಚು ಒತ್ತು ದೊರಕಿದೆ. ಅಂತೆಯೇ ಇಲ್ಲಿ ಕೆರೆ ಬೇಟೆ, ಮೀನು ಬೇಟೆ ನಿಷಿದ್ಧ.

ಚಂದ್ರಗುತ್ತಿ ಸಮೀಪದ ಗುಡವಿ ಪಕ್ಷಿಧಾಮದಲ್ಲಿ ಬೆಳ್ಳಿ ಚುಕ್ಕಿಗಳ ಆವರಣ ನಿರ್ಮಿಸಿರುವ ಪಕ್ಷಿಗಳು.

ಹೇಗೆ ಬರಬೇಕು :

ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿಮೀ ತಾಲ್ಲೂಕು ಕೇಂದ್ರ ಸೊರಬಕ್ಕೆ ಬಂದು ಅಲ್ಲಿಂದ ಆನವಟ್ಟಿ-ಹುಬ್ಬಳ್ಳಿ ಮಾಗ೯ದಲ್ಲಿ ಸುಮಾರು 6 ಕಿಮೀ ಚಿತ್ರಟ್ಟೆಹಳ್ಳಿ ಬೋರ್ಡ್ ನಿಂದ ಎಡಕ್ಕೆ ಮತ್ತೆ 9 ಕಿಮೀ ಚಲಿಸಬೇಕು, ಸಿಸಿ೯, ಸಿದ್ದಾಪುರದ ಕಡೆಯಿಂದ ಬರುವವರು ಚಂದ್ರಗುತ್ತಿ ಮಾರ್ಗದಿಂದ ಸೊರಬ ರಸ್ತೆಯಲ್ಲಿ ಸುಮಾರು 4 ಕಿಮೀ ಗುಂಜನೂರು, ಚಂದ್ರಗುತ್ತಿ ಹರೀಶಿ ರಸ್ತೆಯ ಬೆನ್ನೂರು ಕ್ರಾಸಲ್ಲಿ 7-8 ಕಿಮೀ ಚಲಿಸಬೇಕು.

ಸೌಕರ್ಯ:

ಪಕ್ಷಿಧಾಮಕ್ಕೆ ಅಗತ್ಯವಿರುವ ವಾತಾವರಣ ಗಮನಿಸಿದ ಇಲ್ಲಿ ರಾಜ್ಯ ಸರ್ಕಾರ 2000ನೇ ಇಸವಿಯಲ್ಲಿ ಪಕ್ಷಿಧಾಮ ಎಂದು ಘೋಷಿಸಿದ್ದು, ಧಾಮಕ್ಕೆ ಪೂರಕವಾದ ಆಳವಾದ ಕಂದಕ, ಚಿಕನ್ ಮೆಶ್ ಬೇಲಿ, ಆಹಾರಕ್ಕಾಗಿ ವಿವಿಧ ಹಣ್ಣಿನ ಗಿಡ ಬೆಳೆಸಿ, ವೀಕ್ಷಕರಿಗೆ ಕೆಲ ನಿರ್ಬಂಧ ಹೇರುವ ಮೂಲಕ ಪಕ್ಷಿಗಳಿಗೆ ರಕ್ಷಣೆ ಒದಗಿಸಿದೆ. ವೀಕ್ಷಕರಿಗಾಗಿ ಗ್ರಾಮೀಣ ಮಾದರಿ ರಸ್ತೆ, ವೀಕ್ಷಣಾ ಗೋಪುರ, ಇಡೀ ಆವರಣ ಸುತ್ತು ಹಾಕಲು ಕಾಲು ಸಂಕ, ಅಲ್ಲಲ್ಲಿ ವಿಶ್ರಾಂತಿ ಛಾವಣಿ, ಅರಣ್ಯ, ಮಕ್ಕಳಿಗಾಗಿ ಕಿಂಡರ್ ಗಾರ್ಡನ್, ಬೋಟಿಂಗ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಇಲ್ಲಿ ಉಳಿಯಲು, ತಿನ್ನಲು ಯಾವುದೇ ವ್ಯವಸ್ಥೆ ಇಲ್ಲ, ಸಮೀಪದಲ್ಲಿರುವ ಸೊರಬ (10ಕಿಮೀ), ಸಾಗರ (40ಕಿಮೀ), ಸಿಸಿ೯ (40ಕಿಮೀ) ಇಲ್ಲವೆ ಜಿಲ್ಲಾ ಕೇಂದ್ರ (105ಕಿಮೀ) ಶಿವಮೊಗ್ಗದಲ್ಲಿ ಉಳಿಯಬಹುದು.

ಗುಡವಿ ಪಕ್ಷಿಧಾಮದ ಆವರಣ ಸುತ್ತು ಹಾಕಲು ನಿರ್ಮಿಸಿರುವ ಕಾಲು ಸಂಕ.

ಗುಡವಿ ಪಕ್ಷಿಧಾಮದ ಆವರಣ ಸುತ್ತು ಹಾಕಲು ನಿರ್ಮಿಸಿರುವ ಕಾಲು ಸಂಕ.

ಎಚ್ಚರ :

ಇಲ್ಲಿನ ಅಪರೂಪದ ಅತಿಥಿಗಳು ತುಂಬ ಸೂಕ್ಷ್ಮ, ಗಲಾಟೆ, ಕಪಿ ಚೇಷ್ಟೆ ಮಾಡದೆ, ಅವುಗಳ ರತ್ಯೋತ್ಸವ, ವಂಶಾಭಿವೖದ್ಧಿ ಪ್ರಕ್ರಿಯೆಗೆ ಅವಕಾಶ ನೀಡಿ.

“ಈಚೆಗೆ ಪ್ರಾಕೃತಿಕ ವೈಪರೀತ್ಯತೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಪಕ್ಷಿಗಳ ವಲಸೆ ಸಂಖ್ಯೆ ಕ್ಷೀಣಿಸಿದೆ. ಜನಜಾಗೃತಿ ಶಿಬಿರ, ಅವುಗಳ ಮೂಲಭೂತ ಸೌಕರ್ಯವನ್ನು ವೃದ್ಧಿಪಡಿಸಲು ಇದರದ್ದೆ ಆದ ಇಡಿಸಿ (ಎಕೋ ಡೆವಲಪ್ಮೆಂಟ್‌ ಕಮಿಟಿ) ಯನ್ನು ವೃಕ್ಷಲಕ್ಷ ಆಂದೋಲನ ಮತ್ತು ಪರಿಸರ ಜಾಗೃತಿ ಟ್ರಸ್ಟ್‌ ಸೊರಬ ವತಿಯಿಂದ ಕೇಳಲಾಗಿದ್ದು ರಾಜ್ಯ ಸರ್ಕಾರ ಅನುಮೋಧನೆ ನೀಡಿದೆ”. ‌‌‌‌‌‌‌‌‌‌                
-ಶ್ರೀಪಾದ ಬಿಚ್ಚುಗತ್ತಿ, ಪರಿಸರ ಕಾಯಕರ್ತ.

ವರದಿ : ಎನ್ ಪುರುಷೋತ್ತಮ ಗದ್ದೆಮನೆ

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!