ರಿಪ್ಪನ್ಪೇಟೆ: ನಾಳೆ ಶನಿವಾರ ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯ್ತಿಗೆ ಪಕ್ಷಾತೀತ ಜಾತ್ಯಾತೀತವಾಗಿ ಎಲ್ಲರೂ ಭಾಗವಹಿಸುತ್ತಿದ್ದು ಇದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಕರೆ ನೀಡಿದರು.
ಅವರು ಗುರುವಾರ ಹುಂಚದಕಟ್ಟೆ ಸಮಯದ ಮುನಿಯೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ರೈತವಿರೋಧಿ ಕಾಯ್ದಿಗಳನ್ನು ವಾಪಾಸ್ ಪಡೆಯದೆ ರೈತರಿಗೆ ವಂಚಿಸುತ್ತಿದೆ. ರೈತರಿಗೆ ಮಾರಕವಾಗಲಿರುವ ಮೂರು ಮಸೂದೆಗಳನ್ನು ತಕ್ಷಣ ಕೇಂದ್ರ ಸರ್ಕಾರ ಹಿಂಪಡೆಯಬೇಕು. ಅಲ್ಲದೆ ರೈತರ ಹೋರಾಟವನ್ನು ಹತ್ತಿಕ್ಕುವ ಸಾಹಸದಲ್ಲಿ ಕೇಂದ್ರದ ಮೋದಿ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಹೇಳಿ, ಈ ಹೋರಾಟಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲಿಸಲಿದೆ ಎಂದರು.
ಕೇಂದ್ರ-ರಾಜ್ಯ ಸರ್ಕಾರಗಳು ಬೇಗ ತೊಲಗಲಿ:
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದಷ್ಟು ಬೇಗ ತೊಲಗಬೇಕು ಅಗ ದೇಶದ ಜನರಿಗೆ ನೆಮ್ಮದಿ ಕಾಣಲು ಸಾಧ್ಯವೆಂದು ಕಿಮ್ಮನೆ ರತ್ನಾಕರ್ ಈ ಸಂದರ್ಭದಲ್ಲಿ ಆರೋಪಿಸಿದರು.
ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸಲ್ ಸೇರಿದಂತೆ ಅಡುಗೆ ಅನಿಲ ಬೆಲೆಗಳನ್ನು ಹೆಚ್ಚಿಸುವ ಮೂಲಕ ರೈತ ನಾಗರೀಕರನ್ನು ಸುಲಿಗೆ ಮಾಡುತ್ತಿವೆ. ಈ ಸರ್ಕಾರಗಳಿಂದ ರೈತ ನಾಗರೀಕರಿಗೆ ಕೂಲಿಕಾರ್ಮಿಕರ ಬದುಕು ದುಸ್ಥರವಾಗಿದೆ. ಗಗನಕೇರಿರುವ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಎರಡು ಸರ್ಕಾರಗಳು ಬೆಲೆ ಏರಿಕೆಯನ್ನು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲಗೊಂಡಿವೆ. ಬರಿ ಆರೋಪ-ಪ್ರತ್ಯಾರೋಪಗಳೊಂದಿಗೆ ಕಾಲಹರಣ ಮಾಡುವ ಕೇಂದ್ರ ಸರ್ಕಾರ ಕಾಂಗ್ರೆಸ್ ಕಡೆ ಬೆರಳು ತೋರಿಸುತ್ತಾ ಜನರನ್ನು ಮರಳು ಮಾಡಿ ಮತಪಡೆದು ಅಧಿಕಾರ ಮಾಡುತ್ತಿದ್ದಾರೆ. ಈ ಎರಡು ಸರ್ಕಾರಗಳಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಇಂತಹ ಜೋಭದ್ರ ಸರ್ಕಾರಗಳನ್ನು ಆದಷ್ಟು ಬೇಗ ತೊಲಗಿಸಬೇಕು ಆಗ ಮತದಾರರು ನೆಮ್ಮದಿಯಿಂದ ಇರಲು ಸಾಧ್ಯವೆಂದರು.
Related