ಹೊಸನಗರ: ಮಾಸ್ಕ್ ಧರಿಸದೆ ಅಡ್ಡಾದಿಡ್ಡಿ ಓಡಾಡುತ್ತಿದ್ದವರಿಗೆ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಹೊಸನಗರದ ತಹಶಿಲ್ದಾರ್ ವಿ.ಎಸ್ ರಾಜೀವ್, ಸರ್ಕಲ್ ಇನ್ಸ್ಪೆಕ್ಟರ್ ಜಿ.ಕೆ ಮಧುಸೂದನ್, ಕಂದಾಯ ಇಲಾಖೆ ಅಧಿಕಾರಿಗಳು ದಂಡ ಹಾಕುವುದರ ಮೂಲಕ ಜನರಿಗೆ ಬಿಸಿ ಮುಟ್ಟಿಸಿದ ಪ್ರಸಂಗ ಇಂದು ಸಂಜೆ ನಡೆಯಿತು.
ಮಾಸ್ಕ್ ಧರಿಸದೆ ದ್ವಿಚಕ್ರವಾಹನ, ಕಾರು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಹಾಗೂ ನಡೆದುಕೊಂಡು ಹೋಗುತ್ತಿದ್ದವರಿಗೆ ಮಾಸ್ಕ್ ಧರಿಸದಿರುವ ಬಗ್ಗೆ ಅವರುಗಳಿಗೆ ಕಿವಿಮಾತು ಹೇಳಿ ದಂಡ ವಿಧಿಸಿದರು.
ಕೋವಿಡ್-19 2ನೇ ಅಲೆ ಬಗ್ಗೆ ಎಲ್ಲರೂ ಜಾಗೃತರಾಗಿದ್ದು ಇದು ವ್ಯಾಪಿಸದಂತೆ ಮುಂಜಾಗ್ರತೆ ವಹಿಸಬೇಕೆಂದು ತಹಶಿಲ್ದಾರ್ ವಿ.ಎಸ್ ರಾಜೀವ್ ತಿಳಿಸಿ, ಕಳೆದ ಬಾರಿಯ ಕೋವಿಡ್ ವಯೋವೃದ್ಧರನ್ನು ಗುರಿಯಾಗಿದ್ದು ಈ ಬಾರಿ ಮಕ್ಕಳು ಮತ್ತು ಯುವಕರನ್ನು ಟಾರ್ಗೆಟ್ ಮಾಡಿರುವುದು ದುರಂತದ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಿ ಎರಡನೇ ಅಲೆಯನ್ನು ಹಿಮ್ಮೆಟ್ಟಿಸುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದಿರುವ ವಿರುದ್ಧ ರಕ್ಷಣಾ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಿ.ಕೆ ಮಧುಸೂದನ್ ತಿಳಿಸಿದರು.
ನಂತರ ಪಟ್ಟಣ ಪಂಚಾಯಿತಿಯಲ್ಲಿ ನಾಗರಿಕರ ಸಭೆ ನಡೆಸಿ, ಮದುವೆ, ಸಭೆ-ಸಮಾರಂಭ, ಹುಟ್ಟುಹಬ್ಬ, ರಾಜಕೀಯ ಸಭೆ, ಶವ ಸಂಸ್ಕಾರ ಮೊದಲಾದವುಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಕಟ್ಟುನಿಟ್ಟಿನ ಕ್ರಮಗಳನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ ಸಭೆ ಗಮನಕ್ಕೆ ತಂದರು.
ಕಲ್ಯಾಣ ಮಂದಿರ, ಸಮುದಾಯ ಭವನ, ಶಾದಿ ಮಹಲ್, ಚರ್ಚ್ ಮೊದಲಾದ ಕಡೆ ನಡೆಯುವ ಮದುವೆ ಸಮಾರಂಭಕ್ಕೆ ನೂರು ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು ಇವಗಳಿಗೆ ಸಂಬಂಧಿಸಿದಂತೆ ತಾಲೂಕಾಡಳಿತದಿಂದ ಅನುಮತಿ ಪತ್ರ ಹಾಗೂ ಪಾಸ್ ಗಳನ್ನು ಪಡೆಯಬೇಕೆಂದು ತಹಶಿಲ್ದಾರ್ ರಾಜೀವ್ ರವರು ಸಭೆ ಗಮನಕ್ಕೆ ತಂದು, ಧಾರ್ಮಿಕ ಆಚರಣೆ, ಸಮಾರಂಭಗಳನ್ನು ಸಂಪೂರ್ಣ ಸರ್ಕಾರ ರದ್ದುಗೊಳಿಸಿರುವುದಾಗಿ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ಮಾಹಿತಿ ನೀಡಿ, ಈ ವರ್ಷ ಈವರೆಗೆ ತಾಲೂಕಿನಲ್ಲಿ 106 ಜನರಿಗೆ ಸೋಂಕು ತಗಲಿದ್ದು ಅದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ತೆಗೆದುಕೊಳ್ಳುವ ಮೂಲಕ ಆರೋಗ್ಯ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಪಾಸ್ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನಿಷೇಧಿಸಿರುವುದಾಗಿ ತಿಳಿಸಿ ಮದುವೆ ಹಾಗೂ ಇನ್ನಿತರ ಸಮಾರಂಭಗಳನ್ನು ಹೊಂದಿರುವವರು ತಾಲೂಕು ಆಡಳಿತ ಸಂಪರ್ಕಿಸುವಂತೆ ತಿಳಿಸಿದರು.
ಪ್ರತಿದಿನ ಹೊಸ ಹೊಸ ಆದೇಶ ಬರುತ್ತಿರುವುದರಿಂದ ಆದೇಶ ಬರುವವರೆಗೂ ಈಗಿರುವ ಆದೇಶಗಳು ಜಾರಿಯಲ್ಲಿರುವುದು ಎಂದು ಸಭೆಯ ಗಮನಕ್ಕೆ ತರಲಾಯಿತು.
ಮಾಹಿತಿ ಸಭೆಯಲ್ಲಿ ವರ್ತಕರ ಸಂಘದ ಎನ್. ವಿಜಯೇಂದ್ರ ಶೇಟ್, ಕೆ.ಎಸ್ ಕನಕರಾಜ, ವಾದಿರಾಜ್, ಹರೀಶ್, ಕೃಷ್ಣಮೂರ್ತಿ, ಕೃಷ್ಣಮೂರ್ತಿ ಆರ್, ಬೋಜರಾಜ್, ಶ್ರೀನಿಧಿ, ಗೋಪಾಲ್, ಎಸ್.ಎಂ ಸಲೀಂ, ಶಹಾಬುದ್ದೀನ್, ರಮೇಶ್ ಆಚಾರ್ಯ, ಜಯಮ್ಮ ಮೊದಲಾದವರು ಪಾಲ್ಗೊಂಡಿದ್ದರು.