ಹೊಸನಗರ : ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು ರಕ್ಷಣಾ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಅವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಇಲ್ಲದವರ ಹಾಗೂ ಕಾಟಾಚಾರಕ್ಕೆ ಕರ್ಚಿಫ್ ಕಟ್ಟಿಕೊಂಡವರಿಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ.ಎನ್ ರಾಜೇಂದ್ರ ನಾಯಕ್ ದಂಡ ವಿಧಿಸಿದರು.
ಅವರು ಜನರಿಗೆ ಮಾಹಿತಿ ನೀಡಿ, ಹೆಮ್ಮಾರಿ ಕೊರೊನಾ ಎರಡನೇ ಹಂತ ತಲುಪಿದ್ದು ಈ ಅವಧಿಯಲ್ಲಿ ಮಕ್ಕಳು ಹಾಗೂ ಯುವಕರು ಈ ಸೋಂಕಿಗೆ ಬಲಿಯಾಗುತ್ತಿದ್ದು ಈ ಸೋಂಕಿನ ವಿರುದ್ಧ ಹೋರಾಡಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಸಾಮಾಜಿಕ ಅಂತರ ಕಾಪಾಡಬೇಕೆಂದು ಮಾಹಿತಿ ನೀಡಿದರು.
ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಬಸ್ ನಿಲ್ದಾಣದ ಬಸ್ಸುಗಳನ್ನು ಏರಿ ಬಸ್ಸಿನಲ್ಲಿ ಮಾಸ್ಕ್ ಹಾಕದೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ದಂಡವಿಧಿಸಿದ ಘಟನೆ ಸಂಭವಿಸಿತು.
ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಹಾಗೂ ಗ್ರಾಮೀಣ ಜನರಿಗೆ ಈ ಬಗ್ಗೆ ಮಾಹಿತಿ ನೀಡಬೇಕೆಂದು ಕರೆ ನೀಡಿ, ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ದಾರಿ ದೀಪವಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯಧಿಕಾರಿ ಪ್ರಶಾಂತ್, ಸಿಬ್ಬಂದಿ ಅಣ್ಣಪ್ಪ, ಹೆಡ್ ಕಾನ್ಸ್ಟೇಬಲ್ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.