“ಮುಂಗಾರು ಮಳೆ ಮತ್ತು ಮಂಡೂಕಗಳ ಪ್ರಣಯ”

0
507

ಮಳೆ ಅದೆಷ್ಟೋ ಕಾಡಿನ ಜೀವಗಳ ಸಂಜೀವಿನಿ, ಮಳೆಗಾಲ ಶುರುವಾಗುತ್ತಿದ್ದಂತೆ ನರ ಮನುಷ್ಯ ಬೆಚ್ಚನೆಯ ಗೂಡು ಸೇರಿದರೆ, ವನ್ಯಜೀವಿಗಳಿಗೆ ಮಳೆಯಲ್ಲಿ ಮಿಂದೇಳುವ ತವಕ, ಬಹಳಷ್ಟು ಜೀವಿಗಳ ಜೀವನ ಚಕ್ರ ಗರಿಗೆದರುವ ಕಾಲವದು.

ನೀವು ಮಲೆನಾಡಿನವರಾಗಿದ್ದರೆ ಮಳೆಗಾಲ ಶುರುವಾಗುತ್ತಿದ್ದಂತೆ ವಟವಟ ಶಬ್ದದೊಂದಿಗೆ ಮಳೆಗಾಲದ ಅನುಭವ ನೀಡುವ ಜೀವಿಗಳೆಂದರೆ ಕಪ್ಪೆಗಳು. ಶೀತ ರಕ್ತ ಜೀವಿಗಳಾದ ಇವುಗಳ ಒಂದೊಂದು ಜಾತಿಯ ಜೀವನ ಶೈಲಿಯೂ ವಿಭಿನ್ನ ಸಂತಾನೋತ್ಪತ್ತಿ ಪ್ರಕ್ರಿಯೆಯೂ ವೈವಿಧ್ಯಮಯ.

ಬಹುತೇಕ ಕಪ್ಪೆಗಳಿಗೆ ಕನ್ನಡದ ಹೆಸರುಗಳಿಲ್ಲ ಹಾಗಾಗಿ ಬರೆಯುವಾಗ ಇಂಗ್ಲೀಷ್ ಹೆಸರನ್ನೇ ಬಳಸುತ್ತೇನೆ.

ಮಳೆಗಾಲದಲ್ಲಿ ಕಿವಿ ಚಿಟ್ಟು ಹಿಡಿಯುವಂತೆ ಅರಚುವ ಕಪ್ಪೆಗಳು ಬೇಸಿಗೆಯಲ್ಲಿ ಅವುಗಳ ಕುಲವೇ ಇಲ್ಲವೆನ್ನುವಂತೆ ಮಾಯವಾಗಿ ಬಿಡುತ್ತವೆ,ಹೆಚ್ಚಿನ ಕಪ್ಪೆಗಳು ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ತೇವಾಂಶವಿರುವ ಜಾಗಕ್ಕೆ ತೆರಳಿ ಶಿಶಿರನಿದ್ರೆಗೆ (Hibernation) ಹೋಗಿ ತಮ್ಮ ಜೈವಿಕ ಕ್ರಿಯೆಗಳನ್ನು(Metabolism) ನಿಧಾನಗೊಳಿಸಿ ಶಕ್ತಿಗಾಗಿ ತಮ್ಮ ದೇಹದ ಕೊಬ್ಬನ್ನೇ ಬಳಸಿಕೊಳ್ಳುತ್ತವೆ.

ಮಳೆಗಾಲ ಶುರುವಾಗುತ್ತಿದ್ದಂತೆ ಕಪ್ಪೆಗಳು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುತ್ತವೆ, ತಮ್ಮದೇ ಜಾತಿ ಹೆಣ್ಣು ಗಂಡುಗಳು ವಿಶಿಷ್ಟ ಕೂಗಿನಿಂದ ಮಿಲನಕ್ಕೆ ಆಹ್ವಾನ ಕೊಡುತ್ತವೆ.

ಬಹುತೇಕರು ಮಳೆಗಾಲದಲ್ಲಿ ಕಪ್ಪೆಗಳು ಒಂದರ ಮೇಲೊಂದು ಹತ್ತಿ ಕೂತಿರುವುದನ್ನು ನೋಡಿರಬಹುದು, ಈ ಕ್ರಿಯೆಯನ್ನು ಜನನಾಂಗದಿಂದ ಮಿಲನವಾಗುವ ಪ್ರಕ್ರಿಯೆ ಎಂದು ನಾವು ಬಾಲ್ಯದಲ್ಲಿ ತಿಳಿದ್ಧಿದ್ದೆವು ಆದರೆ ವಾಸ್ತವದಲ್ಲಿ ಇದು ಮೊಟ್ಟೆಯಿಡುವಂತೆ ಗಂಡು ಹೆಣ್ಣನ್ನು ಪ್ರಚೋದಿಸುವ ಕ್ರಿಯೆಯಾಗಿದೆ (amplexus).

ಕಪ್ಪೆಗಳಲ್ಲಿ ಜನನಾಂಗಗಳ ಮೂಲಕ ಮಿಲನ ಕ್ರಿಯೆ ಇಲ್ಲ ಬದಲಿಗೆ ಹೆಣ್ಣು ಮೊಟ್ಟೆ ಇಟ್ಟ ಮೇಲೆ ಗಂಡು ತನ್ನ ವೀರ್ಯ (ರೇತಸ್ಸು or sperm ) ವನ್ನು ಆ ಮೊಟ್ಟೆಗಳ ಮೇಲೆ ಸುರಿಯುತ್ತದೆ, ಹೊರಗಿನಂದಲೇ ಮೊಟ್ಟೆಗಳು ಫಲವತ್ತವಾಗುತ್ತವೆ (Fertility).

ಕಪ್ಪೆಗಳ ಜೀವನ ಚಕ್ರವನ್ನು ಮೊಟ್ಟೆ – ಗೊದಮೊಟ್ಟೆ ಎಂದೆಲ್ಲ ವಿವರಿಸುತ್ತೇವೆ, ಆದರೆ ಕೆಲವು ಜಾತಿಯ ಕಪ್ಪೆಗಳಲ್ಲಿ ಗೊದಮೊಟ್ಟೆಯ ಹಂತವೇ ಇಲ್ಲ ಮೊಟ್ಟೆಗಳಿಂದ ನೇರವಾಗಿ ಮರಿಕಪ್ಪೆಗಳಾಗುತ್ತವೆ. ಅಂಬೋಲಿ ಪೊದೆ ಗಪ್ಪೆ ಇದಕ್ಕೆ ಉದಾಹರಣೆ.

ಮಳೆಗೂ ಕಪ್ಪೆಗಳಿಗೂ ಅವಿನಾಭಾವ ಸಂಬಂದವಿದೆ, ಮಳೆ ಕಪ್ಪೆಗಳ ದೇಹವನ್ನು ಒದ್ದೆ ಮಾಡಿ ನಿರ್ಜಲೀಕರಣ ( Dehydrate) ಆಗದಂತೆ ತಡೆಯುತ್ತದೆ, ಮೊಟ್ಟೆ ಇಡಲು ನೀರಿನ ಮೂಲ ಹುಡುಕಿ ಬಹುದೂರ ಸಾಗಲು ಮಳೆ ಉಂಟು ಮಾಡಿದ ಆರ್ದ್ರತೆ ತುಂಬಿದ ವಾತಾವರಣ ಸಹಕಾರಿ. ಇನ್ನು ಕೆಲವು ಪೊದೆಗಪ್ಪೆಗಳು ತೇವವಿರುವ ಮರದ ತೊಗಟೆ ಗಿಡಗಳ ಎಲೆಗಳಲ್ಲಿ ಮೊಟ್ಟೆ ಇಡುತ್ತವೆ, ಮೊಟ್ಟೆಯ ತೇವ ಆರದಂತೆ ನಿರಂತರ ಮಳೆಯ ಸಿಂಚನದ ಅಗತ್ಯವಿದೆ.

ಇನ್ನು ಮಲಬಾರ್ ಗ್ಲೈಡಿಂಗ್ ಫ್ರಾಗ್ ಎನ್ನುವ ಹಸಿರು ಕಪ್ಪೆ ನೀರು ಎಷ್ಟೇ ದೂರವಿದ್ದರೂ ನಿಂತ ನೀರಿನ ಮೂಲವನ್ನು ಹುಡುಕಿ ಹೋಗುತ್ತದೆ, ಅಲ್ಲಿ ತನ್ನ ದೇಹದಿಂದ ನೊರೆಯನ್ನು ಉತ್ಪಾದಿಸಿ ಮೊಟ್ಟೆ ಇಡುತ್ತದೆ, ನೊರೆಯ ಹೊರಭಾಗ ಗಟ್ಟಿಯಾಗಿ ಗೂಡಿನಂತಾಗುತ್ತದೆ, ಗೂಡಿನ ಒಳಗಿನ ತೇವದಲ್ಲಿ ಬೆಳೆಯುವ ಗೊದ ಮೊಟ್ಟೆಗಳು ಒಂದು ವಾರದ ನಂತರ ಜಾರಿ ನೀರಿಗೆ ಬೀಳುತ್ತವೆ.

ಇನ್ನು ಕೆಲವು ಕಪ್ಪೆಗಳ ಸಂತಾನೋತ್ಪತ್ತಿಗೆ ಮಳೆಯ ಅಗತ್ಯವಿಲ್ಲ, ವರ್ಷಪೂರ್ತಿ ಹರಿವ ಪಶ್ಚಿಮ ಘಟ್ಟಗಳ ತೊರೆಗಳ(stream) ಸಮೀಪದ ಮರದ ಬೇರು ಕಲ್ಲುಗಳ ಮೇಲೆ ಮೊಟ್ಟೆ ಇಡುತ್ತದೆ, ಗೊದಮೊಟ್ಟೆಗಳು ಬೆಳೆದು ಮೊಟ್ಟೆಯ ಒಳಗಿನಿಂದ ಕಂಪಿಸಿ ಮೊಟ್ಟೆಯ ಹೊರ ಪದರವನ್ನು ಒಡೆದು ಹಾಕಿ ತೊರೆಯ ನೀರಿಗೆ ಬಿದ್ದು ಮುಂದಿನ ಜೀವನ ಚಕ್ರ ಶುರು ಮಾಡುತ್ತವೆ.ಕುಂಬಾರ ಕಪ್ಪೆಗಳು ಮಳೆಗಾಲ ಮುಗಿಯುವ ಹೊತ್ತಿಗೆ ಮೊಟ್ಟೆ ಇಡುವುದನ್ನು ನೋಡಬಹುದು, ಮೊಟ್ಟೆಗಳ ತೇವ ಆರದಂತೆ ಗಂಡುಗಳು ಮಣ್ಣನ್ನು ಬಳಿಯುತ್ತವೆ.

ಮೊನ್ನೆಯ ಮಳೆಯಲ್ಲಿ Ramanella marmorata ಜಾತಿ ಕಪ್ಪೆಯ ಜೋಡಿಯ ಹಿಂದೆ ಬಿದ್ದಿದ್ದೆ. ಗಂಡು ಹೆಣ್ಣಿನ ಮೇಲೆ ಏರಿ ಕುಳಿತ್ತಿತ್ತು, ನಮ್ಮ ಹೆಬ್ಬೆರಳು ಗಾತ್ರದ ಕಪ್ಪೆಗಳಾದ ಇವು ಸುಮಾರು ಎರಡೂವರೆ ಗಂಟೆಗಳ ಅವಧಿಯಲ್ಲಿ ನೀರಿನ ಬೇರೆ ಬೇರೆ ಕಡೆ ಚಲಿಸುತ್ತಾ 30 ಕಡೆ ಮೊಟ್ಟೆಗಳನ್ನು ತೇಲಿ ಬಿಟ್ಟದ್ದನ್ನು ನೋಡಿದೆ. ಒಂದು ಬಾರಿ ಸುಮಾರು 50-60 ಮೊಟ್ಟೆಗಳನ್ನು ಹೊರಹಾಕುತ್ತಿತ್ತು!! ಅಲ್ಲಿಗೆ ಲೆಕ್ಕಹಾಕಿ ಮೊಟ್ಟೆಗಳ ಸಂಖ್ಯೆ ? ಒಂದು ಹೆಬ್ಬೆರಳು ಗಾತ್ರದ ಕಪ್ಪೆಗಳ ಜೋಡಿ 1-2 ಸಾವಿರ ಮೊಟ್ಟೆ ಇಡಬಲ್ಲದು! ಆ ಜೋಡಿಗಳ ಮೊಟ್ಟೆ ಇಡುವ ಪ್ರಕ್ರಿಯೆ ಹಾಗೆಯೇ ಮುಂದುವರಿದಿತ್ತು.

ಕೆಲವು ಜಾತಿ ಕಪ್ಪೆಗಳಲ್ಲಿ ಗಂಡುಗಳ ಸಂಖ್ಯೆ ಅಧಿಕವಿದ್ದು 20-30 ಗಂಡುಗಳಿಗೆ ಒಂದು ಹೆಣ್ಣನ್ನು ನೋಡಬಹುದು, ಗಂಡುಗಳು ಸಂಗಾತಿಯನ್ನು ಆಕರ್ಷಿಸಲು ಕೂಗಿನಲ್ಲಿ (call) ತೊಡಗಿದ್ದರೆ ಹೆಣ್ಣುಗಳು ಬಹುತೇಕ ಮೌನವಾಗಿದ್ದು ಗಂಡಿನ ಕರೆಗಳ ಶಬ್ದದ ಏರಿಳಿತ ಗಮನಿಸಿ ಇಷ್ಟ ಬಂದ ಗಂಡಿನ ಹತ್ತಿರ ಮಿಲನಕ್ಕೆ ಹೋಗುತ್ತದೆ. ಇಂತಹ ಲಕ್ಷಣಗಳನ್ನು Malabar gliding frog ಮತ್ತು false hour Glass tree frog ಜಾತಿಗಳಲ್ಲಿ ಹೆಚ್ಚು ಕಾಣಬಹುದು.

ಇನ್ನು ಹೆಣ್ಣಿಗಾಗಿ ಗಂಡು ಕಪ್ಪೆಗಳ ಕುಸ್ತಿಗಳು ಸಹ ನಡೆಯುತ್ತವೆ, ಕೈ ಕೈ ಹಿಡಿದು ತಳ್ಳಾಟದಿಂದ ಹಿಡಿದು ಮಲ್ಲಯುದ್ಧ, ಜಾಡಿಸಿ ಒದೆಯುವುದು ಗುಂಪು ಕುಸ್ತಿಗಳು ಸಾಮಾನ್ಯ.

ಕೆಲವು ಸಲ ಅಚ್ಚರಿ ಎನ್ನುವಂತೆ ಬೇರೆ ಜಾತಿ ಹೆಣ್ಣಿನ ಮೇಲೆ ಬೇರೆ ಜಾತಿ ಗಂಡು ಹತ್ತಿ ಕೂರುವುದನ್ನು (amplexus) ನೋಡಬಹುದು, ಆಗ ಒಂದು ವೇಳೆ ಹೆಣ್ಣು ಮೊಟ್ಟೆ ಇಟ್ಟರೂ ಬೇರೆ ಜಾತಿ ಗಂಡಿನ ವೀರ್ಯದಿಂದ ಮೊಟ್ಟೆಗಳು ಫಲವತ್ತತೆ ಹೊಂದುವುದಿಲ್ಲ.ಕೆಲವು ಸಲ interbreeding ಆಗಿ ಹುಟ್ಟುವ ಮರಿಗಳು ಸಂತಾನೋತ್ಪತ್ತಿ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿರುತ್ತವೆ,ನಮ್ಮಲ್ಲಿ interbreeding ಸಾಧ್ಯತೆ ಇಲ್ಲ.

ಇನ್ನು ಮಳೆಗಾಲ ಶುರುವಾಗುತ್ತಿದ್ದಂತೆ ಕೆರೆಗಳ ದಂಡೆಗಳ ಮೇಲೆ ರಾಶಿ ರಾಶಿ ಕಪ್ಪೆಗಳು ಸಾಗುವುದನ್ನು ನೋಡಬಹುದು, ಈ ಜಾತಿ ಕಪ್ಪೆಗಳ ಗೊದಮೊಟ್ಟೆಗಳು ಆರೆಂಟು ತಿಂಗಳು ನೀರಿನಲ್ಲೇ ಕಳೆದು ಗೊದಮೊಟ್ಟೆ ಹಂತ ಮುಗಿಸಿ ಮಳೆ ಶುರುವಾಗುತ್ತಿದ್ದಂತೆ ಕಾಡಿನ ಕಡೆಗೆ ಸಾಗುತ್ತವೆ.ಈ ಜಾತಿ ಕಪ್ಪೆಗಳು ಬದುಕುಳಿಯಲು ವರ್ಷಪೂರ ನೀರಿರುವ ಜಲಮೂಲ ಇರಲೇಬೇಕು.

ಸಾಮಾನ್ಯವಾಗಿ ಕಪ್ಪೆ ಮೊಟ್ಟೆಗಳ ಫಲೀಕರಣವು ದೇಹದ ಹೊರಗೆ ನಡೆಯುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಇಂಡೋನೇಷ್ಯಾದ ಮಳೆಕಾಡಿನಲ್ಲಿರುವ ಸುಲವೇಶಿ ದ್ವೀಪದಲ್ಲಿ ಕಂಡುಬರುವ fanged frog ಜಾತಿಯ ಹೆಣ್ಣುಗಳು ನೇರವಾಗಿ ಜೀವಂತ ಗೊದಮೊಟ್ಟೆಗಳನ್ನು ಹಡೆಯುತ್ತವೆ !!! ಗಂಡಿನ ದೇಹದ ತುದಿಯಲ್ಲಿರುವ ಬಾಲದಂತಹ ಅಂಗವು ವೀರ್ಯವನ್ನು ಹೆಣ್ಣಿಗೆ ವರ್ಗಾಯಿಸುತ್ತದೆ. ಸಸ್ತನಿಗಳಂತೆ ತಾಯಿಯ ದೇಹದ ಒಳಗೆ ಮರಿಗಳು (tadpole) ಬೆಳೆಯುತ್ತವೆ.

ಕಪ್ಪೆಗಳು ನಮ್ಮ ಸುತ್ತಲಿನ ಪರಿಸರದ ಆರೋಗ್ಯ ಸೂಚಕಗಳಾಗಿವೆ, ಆಹಾರದ ಸರಪಳಿಯ ಕೊಂಡಿಗಳಾದ ಇವುಗಳ ನಾಶದಿಂದ ಕೃಷಿಗೆ ನೇರ ಪರಿಣಾಮ ಬೀರುತ್ತದೆ. ಭತ್ತದ ಗದ್ದೆಗಳಲ್ಲಿ ಕಪ್ಪೆಗಳು ಇದ್ದರಂತೂ ಬಹುತೇಕ ಕೀಟಗಳ ನಿಯಂತ್ರಕಗಳಾಗಿ ಕೆಲಸ ಮಾಡುತ್ತವೆ. ಜಾಗತಿಕ ಹವಾಮಾನ ವೈಪರಿತ್ಯ, ಅತಿಯಾದ ರಸಾಯನಿಕ ಬಳಕೆ, ಮಲಿನಗೊಳ್ಳುತ್ತಿರುವ ಜಲಮೂಲಗಳು ಇವುಗಳಿಗೆ ಕಂಟಕವಾಗುತ್ತಿವೆ.

ಲೇಖನ ; ನಾಗರಾಜ್ ಬೆಳ್ಳೂರು, ರಿಪ್ಪನ್‌ಪೇಟೆ, ನಿಸರ್ಗ ಕನ್ಜರ್ವೇಶನ್ ಟ್ರಸ್ಟ್.
ಜಾಹಿರಾತು

LEAVE A REPLY

Please enter your comment!
Please enter your name here