ಮುಂದಿನ ತಿಂಗಳಿಂದ ಎಂ.ಜಿ. ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ: ಪೌರಾಯುಕ್ತ ಬಸವರಾಜ್

0
166

ಚಿಕ್ಕಮಗಳೂರು: ನಗರದ ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ನವೆಂಬರ್ ಒಂದರಿಂದ ಪಾರ್ಕಿಂಗ್ ಮಾಡುವ ವಾಹನಗಳಿಗೆ ಶುಲ್ಕ ಅನ್ವಯವಾಗಲಿದ್ದು ವಾಹನಗಳ ಸುಲಭ ಸಂಚಾರ, ದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಗರಸಭೆಯಿಂದ ಈ ನಿರ್ಧಾರ ಕೈಗೊಂಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಬಸವರಾಜ ತಿಳಿಸಿದ್ದಾರೆ.

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ನಿರ್ಮಲ ಭಾರತಿ ಟ್ರಸ್ಟ್ ಟೆಂಡರ್ ಅನ್ನು ಪಡೆದುಕೊಂಡಿದೆ.

ವಾಹನ ನಿಲುಗಡೆ ಶುಲ್ಕ ವಸೂಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಂಭತ್ತು ಟೆಂಡರ್ ದಾರರು ಭಾಗಿಯಾಗಿದ್ದರು ಅದರ ಪೈಕಿ ನಿರ್ಮಲ ಭಾರತಿ ಟ್ರಸ್ಟ್ 16 ಲಕ್ಷ ರೂ.ಗೆ ಟೆಂಡರ್ ವಹಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಹೊರತುಪಡಿಸಿ ನಾಲ್ಕು ಚಕ್ರದ ವಾಹನ, ಕಾರು, ಖಾಸಗಿ ವಾಹನಗಳಿಗೆ ಪ್ರತಿ ಗಂಟೆಗೆ 10 ರೂಗಳನ್ನು ನಿಗದಿಪಡಿಸಲಾಗಿದ್ದು 1500 ರೂಗಳ ಮಾಸಿಕ ಪಾಸ್‌ಗಳನ್ನು ವಿತರಿಸಲಾಗುವುದು.

2 ಗಂಟೆಗೂ ಹೆಚ್ಚು ಕಾಲ ವಾಹನ ನಿಲುಗಡೆ ಮಾಡಿದಲ್ಲಿ ಹೆಚ್ಚುವರಿಯಾಗಿ 5 ರೂ.ಗಳನ್ನು ನೀಡಬೇಕಾಗುತ್ತದೆ. ಈ ನಿಯಮ ಸರ್ಕಾರಿ ವಾಹನ ‘ಶಾಲಾ ಬಸ್‌ಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಸಾಧಕ ಬಾದಕಗಳನ್ನು ನೋಡಿ ಮುಂದಿನ ದಿನಗಳಲ್ಲಿ ಐ.ಜಿ.ರಸ್ತೆ, ಮಾರ್ಕೆಟ್ ರಸ್ತೆ, ವಿಜಯಪುರ, ಪ್ರಮುಖ ರಸ್ತೆಗಳಲ್ಲಿ ಶುಲ್ಕ ನಿಯಮ ವಿಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಎಂ.ಜಿ ರಸ್ತೆಯಲ್ಲಿ ಪೊಲೀಸರ ಸಹಕಾರದೊಂದಿಗೆ ವಾಹನ ನಿಲುಗಡೆಗೆ ಮಾರ್ಗಸೂಚಿಗಳನ್ನು ಹಾಕಲಾಗುತ್ತಿದ್ದು ನವೆಂಬರ್ ಒಂದರಿಂದ ಈ ನಿಯಮ ಜಾರಿಗೆ ಬರಲಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ , ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ಇತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here