ಮುರುಘಾ ಶ್ರೀ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ !

0
427

ಶಿವಮೊಗ್ಗ: ಪೋಕ್ಸೊ ಪ್ರಕರಣದಲ್ಲಿ ಬಂಧನವಾಗಿರುವ ಮುರುಘಾ ಶ್ರೀಗಳಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದರಿಂದ ಕೊರೊನರಿ ಆಂಜಿಯೋಗ್ರಾಮ್‌ ನಡೆಸಲು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸೂಚನೆ ಮೇರೆಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ.

ಮಾರ್ಗಬಂಧಿ ಪ್ರಕ್ರಿಯೆ ನಡೆಸಿ ಶಿವಮೊಗ್ಗ ಕೇಂದ್ರ ಕಾರಾಗೃಹ ಸಿಬ್ಬಂದಿಗೆ ಶ್ರೀಗಳನ್ನು ಚಿತ್ರದುರ್ಗ ಕಾರಾಗೃಹ ಸಿಬ್ಬಂದಿ ಒಪ್ಪಿಸಿದರು. ಬಳಿಕ ಶರಣರನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಎರಡು ದಿನಗಳ ಕಾಲ ಮುರುಘಾಶ್ರೀಗಳಿಗೆ ಆಂಜಿಯೋಗ್ರಾಂ, ಇಕೋ ಪರೀಕ್ಷೆ ನಡೆಸಿದ ಬಳಿಕ ಶಿವಮೊಗ್ಗ ಜೈಲು ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಶ್ರೀಗಳಿಗೆ ಚಿಕಿತ್ಸೆ ನೀಡಲು ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಮುರುಘಾ ಮಠದ ಕಾನೂನು ಸಲಹೆಗಾರ, ವಕೀಲ ಉಮೇಶ್ ಮಾತನಾಡಿ, ಶ್ರೀಗಳನ್ನು ಕೊರೊನರಿ ಆಂಜಿಯೋಗ್ರಾಂ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ. ಹೀಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದೇವೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್ ಮಾತನಾಡಿ, ಚಿತ್ರದುರ್ಗಕ್ಕೆ ಮೆಗ್ಗಾನ್ ಆಸ್ಪತ್ರೆ ಹತ್ತಿರ ಇರುವುದರಿಂದ ಶ್ರೀಗಳ ತಪಾಸಣೆಗೆ ಕೋರ್ಟ್‌ ಸೂಚಿಸಿದೆ. ಕೋರ್ಟ್ ಆದೇಶದಂತೆ ಶ್ರೀಗಳ ದೈಹಿಕ ಕ್ಷಮತೆ ಪರೀಕ್ಷೆ ನಂತರ ಆಂಜಿಯೋಗ್ರಾಂ ಮಾಡಲಾಗುವುದು. ಬಳಿಕ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದರು.

ಮೆಗ್ಗಾನ್ ಆಸ್ಪತ್ರೆ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಮಾತನಾಡಿ, ಮುರುಘಾ ಶ್ರೀಗಳಿಗೆ ಆಂಜಿಯೋಗ್ರಾಂ ಮಾಡಬೇಕು ಎಂಬ ಬಗ್ಗೆ ನ್ಯಾಯಾಲಯದಿಂದ ಸಂದೇಶ ಬಂದಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಆಂಜಿಯೋಗ್ರಾಂ ಮಾಡಿದ ನಂತರ ಮುಂದಿನ‌ ಚಿಕಿತ್ಸೆ ಅಗತ್ಯದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ವೈದ್ಯರ ನಾಲ್ಕು ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here