20.6 C
Shimoga
Friday, December 9, 2022

ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸುವಲ್ಲಿ ಶಾಸಕ ಹಾಲಪ್ಪ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ; ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಗಂಭೀರ ಆರೋಪ

ಹೊಸನಗರ: ಮಲೆನಾಡು ಭಾಗದ ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮತಿ ಅಧ್ಯಕ್ ಬಿ.ಜಿ.ನಾಗರಾಜ ಆರೋಪಿಸಿದ್ದಾರೆ.


ಅವರು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡಸಿ ಮಾತನಾಡಿ, ಶಾಸಕ ಹರತಾಳು ಹಾಲಪ್ಪನವರು ಅವರು ಕಳೆದ 5 ವರ್ಷಗಳಲ್ಲಿ ಎಷ್ಟು ಜನರಿಗೆ ಬಗರ್‌ಹಕುಂ ಹಕ್ಕುಪತ್ರ, 94ಸಿ ಹಕ್ಕುಪತ್ರ ನೀಡಿದ್ದಾರೆ ಎಂಬ ಅಂಕಿ ಅಂಶ ನೋಡಿದಾಗ ಜನರ ಕುರಿತು ಇವರಿಗೆ ಇರುವ ಕಾಳಜಿ ಅರ್ಥವಾಗುತ್ತದೆ. ಮೂರು ಬಾರಿ ಚುನಾಯಿತರಾದರೂ, ಶರಾವತಿ ಸಂತ್ರಸ್ಥರ ಸಮಸ್ಯೆಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಡಿನೋಟಿಫಿಕೇಶನ್ ಮಾಡಿ ಜನರಿಗೆ ಭೂಮಂಜೂರಾತಿಗೆ ಮುಂದಾಗಿತ್ತು. ಆದರೆ ಈಗ ನ್ಯಾಯಾಲಯದ ಆದೇಶ ಎಂದು ಹಿಂದಿನ ಡಿನೋಟಿಫಿಕೇಶನ್ ಆದೇಶವನ್ನು ಬಿಜೆಪಿ ಸರಕಾರ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬದಲಾಗಿ ರದ್ದು ಮಾಡಿರುವುದು ಮುಳುಗಡೆ ಸಂತ್ರಸ್ಥರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಶಾಸಕ ಹಾಲಪ್ಪ ಅವರೇ ಸ್ವತಃ ಮುಳುಗಡೆ ಸಂತ್ರಸ್ಥರಾಗಿದ್ದು, ಇಂತಹ ಪರಿಸ್ಥಿತಿ ಬಂದಿರುವುದು ವಿಪರ‍್ಯಾಸ ಎಂದರು.


ಸರಕಾರದ ಬೇಜವಾಬ್ದಾರಿಯುತ ಕಾರ್ಯಗಳನ್ನು ವಿರೋಧಿಸುವ ಸಲುವಾಗಿ ಹಾಗೂ ಶರಾವತಿ ಮುಳುಗಡೆ ಸಂತ್ರಸ್ಥರ ಹಾಗೂ ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನ.28ರಂದು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಕೆಪಿಸಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಮಾಡಿರುವವರಿಗೆ ಭೂ ಮಂಜೂರಾತಿ, ಚಕ್ರಾ, ಸಾವೆಹಕ್ಕಲು, ಮಾಣಿ ಜಲಾಶಯಗಳ ಮುಳುಗಡೆ ಸಂತ್ರಸ್ಥರ ಬೇಡಿಕೆ ಈಡೇರಿಸಲು ಕ್ರಮವಹಿಸುವುದು, ಅರಣ್ಯ ಒತ್ತುವರಿ ಪ್ರಕರಣಗಳು, ಅರಣ್ಯ ಹಕ್ಕು ಕಾಯಿದೆ ಅರ್ಜಿ ವಿಲೇ, ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ವಿತರಣೆ, 94ಸಿ ಹಕ್ಕುಪತ್ರ ವಿತರಣೆ ಸೇರಿದಂತೆ ಮಲೆನಾಡು ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಜನಪರ ಕಾಳಜಿಯೊಂದಿಗೆ ಸಮಾವೇಶ ನಡೆಸುತ್ತಿದೆ ಎಂದರು.


ನ.28ರಂದು ಬೆಳಿಗ್ಗೆ 9 ಗಂಟೆಗೆ ಆಯನೂರು ಸಂತೆ ಮಾರುಕಟ್ಟೆಯಿಂದ ಶಿವಮೊಗ್ಗದ ವರೆಗೆ ಪಾದಯಾತ್ರೆ ನಡೆಯಲಿದ್ದು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಶಿವಮೊಗ್ಗದ ಎನ್‌ಇಎಸ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರದಾದ್, ರಣದೀಪ್ ಸಿಂಗ್ ಸುರ್ಜೆವಾಲಾ, ಧ್ರುವನಾರಾಯಣ್, ಮಧುಬಂಗಾರಪ್ಪ, ಕಿಮ್ಮನೆ ರತ್ನಾಕರ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಗುರು ಕೋಲ್ಡ್ ಡ್ರೀಕ್ಸ್ ಮಾಲೀಕರಾದ ಬಿ.ಆರ್.ಪ್ರಭಾಕರ, ಪಟ್ಟಣ ಪಂಚಾಯಿತಿ ಮಾಜೀ ಅಧ್ಯಕ್ಷರಾದ ಮಹಾಬಲರಾವ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪ್ರವೀಣ್ ಬ್ರಂದಾವನ, ಇಕ್ಬಾಲ್, ಸಿದ್ದಪ್ಪ, ಕೃಷ್ಣಮೂರ್ತಿ ಮತ್ತಿತರರು ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!