ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಕಾಫಿತೋಟ ನಿರ್ಮಾಣಕ್ಕೆ ವಿರೋಧ

0
697

ಚಿಕ್ಕಮಗಳೂರು: ಸೂಕ್ಷ್ಮ ಪ್ರದೇಶವಾದ ಮುಳ್ಳಯ್ಯನಗಿರಿಯ ಶೋಲಾಕಾಡಿನಲ್ಲಿ ಹೊಸದಾಗಿ ಕಾಫಿತೋಟ ನಿರ್ಮಿಸುತ್ತಿರುವುದನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ.

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಬರುವ ಅಗಳಖಾನ್‍ ರುದ್ರೇಶ್ವರ, ಸರ್ಪನದಾರಿ, ಕವಿಕಲ್‍ಗಂಡಿ ಹಾಗೂ ಸೀತಾಳಯ್ಯನಗಿರಿ ಪ್ರದೇಶ ಅತಿಸೂಕ್ಷ್ಮ ಪ್ರದೇಶಗಳಾಗಿವೆ. ಇಲ್ಲಿ ವೇದನದಿಯ ಮೂಲವಿದ್ದು, ಅನೇಕ ಚಿಕ್ಕ, ಪುಟ್ಟ ಝರಿಗಳಿವೆ. ಇಂದಿರಾನಗರ, ತಿಪ್ಪನಹಳ್ಳಿ, ಕಲ್ಲೇದೇವರಪುರ, ಅರಳುಗುಪ್ಪೆ, ಅಲ್ಲಂಪುರ, ಹೆದರಳ್ಳಿ ಮತ್ತು ಬ್ಯಾಗದಹಳ್ಳಿಗಳಿಗೆ ಕುಡಿಯುವ ನೀರಿನ ಮೂಲಗಳಾಗಿವೆ ಎಂದು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

ಗಿರಿ ಪ್ರದೇಶದಲ್ಲಿ ಬೆಟ್ಟದ ನೆಲ್ಲಿ, ನೇರಳೆ ಪ್ರಬೇಧವಿದೆ. ಹಲವು ಕಾಡುಪ್ರಾಣಿಗಳು ವಾಸಿಸುತ್ತಿವೆ. ಈ ಪ್ರದೇಶದ ರಸ್ತೆಯ ಕೆಳಭಾಗದಲ್ಲಿ ನೂರಾರು ವರ್ಷಗಳಿಂದ ಕಾಫಿ ತೋಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲವೆಂದು ಗ್ರಾಮಗಳ ಮುಖಂಡರು ಹೇಳಿದ್ದಾರೆ.

ಈ ರಸ್ತೆಯ ಮೇಲ್ಭಾಗದಲ್ಲಿ ಹೊಸದಾಗಿ ಕಾಫಿ ಗಿಡಗಳನ್ನು ನೆಡಲಾಗುತ್ತಿದೆ. ಬೆಟ್ಟದ ಮೇಲಿನ ಭಾಗವನ್ನು ಅಗೆಯುವುದರಿಂದ ಭೂ ಕುಸಿತ ಸಂಭವಿಸುವ ಸಾಧ್ಯತೆಗಳಿವೆ. 10-12 ವರ್ಷಗಳ ಹಿಂದೆ ದೊಡ್ಡಗಾತ್ರದ ಬಂಡೆಯೊಂದು ಜಾರಿ ಅಗಳಖಾನ್ ರಸ್ತೆಗೆ ಬಿದ್ದಿತ್ತು. ಇದರಿಂದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಮುಂದಿನ ದಿನಗಳಲ್ಲಿ ಇಂತಹ ಬಂಡೆಗಳ ಉರುಳದಂತೆ ಎಚ್ಚರವಹಿಸಬೇಕಾಗಿದೆ. ಸೂಕ್ಷ್ಮ ಪ್ರದೇಶವಾಗಿರುವ ಗಿರಿಭಾಗವನ್ನು ರಕ್ಷಿಸಿಕೊಂಡು ಬರಬೇಕಾಗಿದೆ. ಹಾಗಾಗಿ ಹೊಸದಾಗಿ ತೋಟವನ್ನು ಅವಕಾಶ ನೀಡಬಾರದೆಂದು ಗ್ರಾಮಸ್ಥರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here