ಮೂಲೆಗದ್ದೆ ಮಠದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಲೋಕಾರ್ಪಣಾ ಸಮಾರಂಭ | ಮನುಕುಲಕ್ಕೆ ಸಮಾನತೆಯ ಪರಿಕಲ್ಪನೆ ನೀಡಿದ ದಾರ್ಶನಿಕ ಬಸವೇಶ್ವರರು ; ಬೆಕ್ಕಿನಕಲ್ಮಠ ಶ್ರೀಗಳು

0
502

ರಿಪ್ಪನ್‌ಪೇಟೆ : ಜಗಜ್ಯೋತಿ ಬಸವಣ್ಣನವರು ಅಂದು-ಇಂದು-ಮುಂದು ಎಲ್ಲ ಕಾಲಕ್ಕೂ ಮಾನವ ಸಮಾಜಕ್ಕೆ ಸಮಾನತೆ ಪರಿಕಲ್ಪನೆ ತೋರಿಸಿಕೊಟ್ಟ ಮಹಾನ್ ಆದರ್ಶ ವ್ಯಕ್ತಿ. ಅವರು 12ವೇ ಶತಮಾನದ ಸಮಾಜ ಸುಧಾರಕರು ಅಷ್ಟೇ ಅಲ್ಲ ಕವಿ ಮತ್ತು ತತ್ವಜ್ಞಾನಿ ಅವರು ಜಗತ್ತಿಗೆ ಕೊಟ್ಟ ಅನುಭವ ಮಂಟಪ ಎನ್ನುವ ಅದ್ಭುತ ಪರಿಕಲ್ಪನೆ ಎಂದಿಗೂ ಮಾದರಿ ಎಂದು ಆನಂದಪುರ ಮುರುಘಾರಾಜೇಂದ್ರಮಠದ ಡಾ.ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೆಂದ್ರ ಮಹಾಸ್ವಾಮಿಜಿ ಹೇಳಿದರು.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಸ್ಥಾಪಿಸಲಾಗಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀ ಬಸವೇಶ್ವರರ ಪ್ರತಿಮೆ ಲೋಕಾರ್ಪಣೆಗೊಳಿಸಿ ಈಶೀರ್ವಚನ ನೀಡಿ, ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರಣಗಳಿಂದಲೇ ಪ್ರಸಿದ್ಧಿಯಾದವರು. ಸಮಾಜ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು ಎಂದು ಬಯಸಿದ ಅವರು ಅದಕ್ಕಾಗಿಯೇ ತಮ್ಮ ಪ್ರಾಣಾರ್ಪಣೆ ಮಾಡಿದ ಧೀರಪುರುಷರಾಗಿದ್ದರು. ಅಲ್ಲದೆ ಮನುಕುಲಕ್ಕೆ ಸಮಾನತೆಯ ಪರಿಕಲ್ಪನೆ ನೀಡಿದ ದಾರ್ಶನಿಕ ಬಸವಣ್ಣ ಅವರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪೂರಕವಾಗಲಿ ಎಂದರು.

“ವಿಶ್ವದಾದ್ಯಂತ ಕಾರುಣ್ಯದ ಬೆಳಕನ್ನು ಬೆಳಗಿಸಿದ ಮೂರ್ತಿಯಾಗಿದ್ದರು. ಸಮಾಜದಲ್ಲಿ ವೈದಿಕ ಪರಂಪರೆಯನ್ನು ಮುರಿದು ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ ಕೀರ್ತಿ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ. ಇಂತಹ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗ ಮಂದಿರಲ್ಲಿ ಬಸವೇಶ್ವರರ ಪುತ್ಥಳಿ ಲೋಕಾರ್ಪಣೆ ಮಾಡುವ ಮೂಲಕ ಮುಂದಿನ ಯುವಪೀಳಿಗೆಯಲ್ಲಿ ಬಸವೇಶ್ವರರ ಆದರ್ಶಗಳು ಶಾಶ್ವತವಾಗಿ ಉಳಿಯುವಂತಾಗಲಿ” ಎಂದರು.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ. ಅಭಿನವ ಚನ್ನ ಬಸವ ಮಹಾಸ್ವಾಮಿಗಳು ಸಂದೇಶಮೃತ ನೀಡಿ ಮಾನವೀಯತೆಗೆ ಅಡ್ಡಗೋಡೆಗಳಂತಿದ್ದ ವರ್ಣ-ವರ್ಗಗಳನ್ನು ಬಸವಣ್ಣ ಧಿಕ್ಕರಿಸಿ ಹೊರಬರಲೇಬೇಕಾಯಿತು. ಶ್ರೇಷ್ಟ ಜಾತಿ ಮತ್ತು ಆರ್ಥಿಕ ಸುಭದ್ರತೆಗಳ ಸುರಕ್ಷಿತ ಗೂಡಿನಲ್ಲಿರಲು ಬಸವಣ್ಣನ ಮನಸ್ಸು ಒಪ್ಪಲಿಲ್ಲ. ವ್ಯವಸ್ಥೆಯ ನಿರ್ಬಂಧಗಳನ್ನು ಹರಿದೊಗೆದು ಹೊರಬಂದು ಹೊಸವ್ಯವಸ್ಥೆಯ ನಿರ್ಮಾಣಕ್ಕೆ ಸನ್ನದ್ದನಾದ ತನ್ನ ನಯ-ವಿನಯ ಸೌಜನ್ಯದ ನಡೆ ನುಡಿಗಳಿಂದ ಜನಸಾಮಾನ್ಯರಿಗೆ ಹತ್ತಿರದವನಾದ ಅವರ ಸರಳತೆ ಸಜ್ಜನಿಕೆ ವಚನ ಸಾಹಿತ್ಯಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನವಾಗಿವೆ ಎಂದರು.

ಮೂಲೆಗದ್ದೆ ಮಠ ಜಾತಿ ಬೇದಭಾವನೆ ತೊರದೆ ಸರ್ವಜನಾಂಗದ ಶಾಂತಿಯ ತೋಟ ಎಂಬ ನಾಣ್ನುಡಿಗೆ ಹೆಸರಾಗಿದೆ ಎಂದರು.

ಗುತ್ತಲಕಲ್ಮಠದ ಮ.ನಿ.ಪ್ರ.ಪ್ರಭುಮಹಾಸ್ವಾಮೀಜಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಜಿಲ್ಲಾ ಅಖಿಲಭಾರತ ವೀರಶೈವ ಮಹಾಸಭಾದ ನಿರ್ದೇಶಕ ಬಿ.ಯುವರಾಜ್‌ಗೌಡರು, ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಜೆ.ಚಂದ್ರಮೌಳಿಗೌಡ, ಜಯಶೀಲಪ್ಪಗೌಡರು ಹರತಾಳು, ಹಿಂದುಳಿದ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ, ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಶಿಕ್ಷಕ ಗಂಗಾಧರಯ್ಯ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here