SPECIAL REPORT ; ಮೇ 21 ರಂದು ಬೆಳ್ಳೂರು ಗ್ರಾಮದಲ್ಲಿ ಡಿಸಿ ಗ್ರಾಮ ವಾಸ್ತವ್ಯ | ಜಿಲ್ಲಾಧಿಕಾರಿಗಳ ಭೇಟಿಯಿಂದ ಬೆಳ್ಳೂರು ಗ್ರಾಮದ ಜನರ ಸಂಕಷ್ಟ ದೂರವಾದೀತೆ ?

0
381

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 15ಕ್ಕೂ ಅಧಿಕ ಮಜರೆ ಹಳ್ಳಿಗಳಲ್ಲಿ 7 ದಶಕಗಳಿಂದ ಮೂಲ ಸೌಕರ್ಯಗಳಿಲ್ಲದೆ ಇಲ್ಲಿಯ ಕುಟುಂಬಗಳು ಇಂದಿಗೂ ಈ ಕುಗ್ರಾಮದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಈ ಗ್ರಾಮಕ್ಕೆ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ ಇಲ್ಲ. ಸಾರಿಗೆ ವ್ಯವಸ್ಥೆ ಅಂತೂ ಮೊದಲೇ ಇಲ್ಲ. ಇಲ್ಲಿನ ಜನರು ಕಾಲ್ನಡಿಗೆಯಲ್ಲಿ ಹಳ್ಳ-ಕೊಳ್ಳವನ್ನು ದಾಟಿ ಸಾಗಬೇಕಾದ ಅನಿವಾರ್ಯತೆ ಇದೆ. ಮಳೆಗಾಲದ ಪರಿಸ್ಥಿತಿ ಹೇಳತೀರದು. ಮರದ ದಿಮ್ಮಿಗಳಿಂದ ನಿರ್ಮಿಸಿದ ಕಾಲುಸಂಕಗಳೆ ಇವರಿಗೆ ರಾಜ ಕಾಲುವೆ. ಕಾನನದ ನಡುವೆ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವ ಇವರಿಗೆ ಕಾಡು ಪ್ರಾಣಿಗಳ ಉಪಠಳವೂ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1ರಿಂದ 10 ನೇ ತರಗತಿವರೆಗೆ ಮಾತ್ರ ಇದ್ದು ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲ. ಇನ್ನು ವ್ಯಾಪಾರ ವಹಿವಾಟಕೆಂದು ಪಟ್ಟಣಕ್ಕೆ ಬರಬೇಕೆಂದರೆ ಸುಮಾರು 20 ಕಿ.ಮೀ ದೂರದಲ್ಲಿರುವ ರಿಪ್ಪನ್‌ಪೇಟೆ ಪಟ್ಟಣಕ್ಕೆ ಬರಬೇಕು.

ಕಾಡಿನ ಮಧ್ಯೆ ಕಾಲ್ನಡಿಗೆಯಲ್ಲೇ ಸುಮಾರು 10 ರಿಂದ12 ಕಿ.ಮೀ ಸಂಚರಿಸಿ ಮುಖ್ಯ ರಸ್ತೆಗೆ ಬಂದರೆ ಮಾರ್ಗ ಮಧ್ಯೆ ಬರುವ ಯಾವುದಾದರು ವಾಹನ ಏರಿ ಪಟ್ಟಣ ಸೇರಬೇಕು.

ಇನ್ನೂ ಅನಾರೋಗ್ಯದ ಪರಿಸ್ಥಿತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಅಂತೂ ಹೇಳತೀರದು ಹೆಚ್ಚು ಕಡಿಮೆಯಾದ್ರೆ ದಾರಿ ಮಧ್ಯೆದಲ್ಲಿ ಪ್ರಾಣ ಹೋಗುತ್ತೆ ಅಂತಾರೆ ಇಲ್ಲಿಯ ಸ್ಥಳೀಯರು.

ದಿನೇ ದಿನೇ ಅಭಿವೃದ್ಧಿಯತ್ತ ಸಾಗುತ್ತಿರುವ ನಮ್ಮ ದೇಶದಲ್ಲಿ ಇನ್ನೂ ಇಂತಹ ಕೆಲವು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳು ಸಿಗದೇ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂಬುದು ಜನರ ಆಗ್ರಹವಾಗಿದೆ.

ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 5 ಗ್ರಾಮದಲ್ಲಿ 15 ಕ್ಕೂ ಅಧಿಕ ಮಜರೆ ಹಳ್ಳಿಗಳಿವೆ. ಮತ್ತಿಕೊಪ್ಪ–ಹೊರಬೈಲ್‌, ಬುರುಡೆಮಕ್ಕಿ, ಕಾಳನಕೆರೆ, ಮಸ್ಕಾನಿ, ದೊಂಬೆಕೊಪ್ಪ, ಹಿರೇಸಾನಿ, ವಾಟೆಸರ, ಹಳ್ಳಿಗಳಲ್ಲಿ ಇಂದಿಗೂ ಹೆದ್ದಾರಿ ಎಂದರೆ ಮಣ್ಣಿನ ಹಾದಿಯೇ ಆಗಿದೆ.

ನಾಡಿಗೆ ಬೆಳಕು ನೀಡುವ ಸಲುವಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಹೊತ್ತಿನಲ್ಲಿ ತಮ್ಮ ಮನೆ ಮಠಗಳನ್ನು ತೊರೆದು ಊರು ಬಿಟ್ಟು ಬಂದು ಈ ಭಾಗದಲ್ಲಿ ನೆಲೆ ಕಂಡ ಶರಾವತಿ ಮುಳುಗಡೆ ಸಂತ್ರಸ್ತ ಬಹು ಸಂಖ್ಯಾತ ಈಡಿಗ ಸಮುದಾಯದ ಕುಟುಂಬಗಳು ಇಲ್ಲಿವೆ. ಜೀವನ ನಿರ್ವಹಣೆಗಾಗಿ ಬಗರ್ ಹುಕುಂ ಕೃಷಿ ಸಾಗುವಳಿ ಮತ್ತು ಕೂಲಿ ಕೆಲಸ ಇವರ ಕಾಯಕವಾಗಿದೆ. ಆದರೆ ಇಂದಿಗೂ ತಮ್ಮ ಜಮೀನಿನ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ.

ಮೂಲ ಸೌಕರ್ಯಗಳಲ್ಲಿ ಅತ್ಯಮೂಲ್ಯವಾದ ಡಾಂಬರು ರಸ್ತೆ ಈ ಗ್ರಾಮದ ಕನಸಾಗೇ ಉಳಿದಿದೆ. ಪ್ರತಿ ಮನೆಯ ಸಂಪರ್ಕ ಮಳೆಗಾಲದಲ್ಲಿ ಹರ ಸಾಹಸವಾಗಿದೆ.

ಈ ಭಾಗದ ಕಳಸೆ, ಗುಬ್ಬಿಗಾ, ಹೊರಬೈಲ್‌ – ಮತ್ತಿಕೊಪ್ಪ, ಅಡ್ಡೇರಿ, ಮಸ್ಕಾನಿ, ದೋಬೈಲ್‌, ಹೆಬ್ಬಳ್ಳಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಬೆಳ್ಳೂರು, ಕಲ್ಲುಹಳ್ಳದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಇದೆ. ಕಾಲೇಜು ಕಲಿಕೆಗೆ ವಿದ್ಯಾರ್ಥಿಗಳು 15–20 ಕಿ.ಮೀ. ಅಂತರದ ರಿಪ್ಪನ್‌ಪೇಟೆ, ಕೋಣಂದೂರು ಹಾಗೂ 30–40 ಕಿ.ಮೀ ಅಂತರದ ಶಿವಮೊಗ್ಗ, ಸಾಗರಗಳಿಗೆ ಎಡತಾಕಬೇಕು.

ಈ ಹಳ್ಳಿಯ ದುರ್ಗಮ ಮಾರ್ಗವು, ಶಾಲಾ ಮಕ್ಕಳ ಬೈಸಿಕಲ್‌ ಸಹ ಒಂದೇ ವಾರಕ್ಕೆ ಅಟ್ಟ ಸೇರಿವೆ. ಕಾಲು ಈ ಭಾಗದ ಮಜರೆ ಹಳ್ಳಿಗಳಿಗೆ ಇನ್ನೂ 20ಕ್ಕೂ ಅಧಿಕ ಕಾಲು ಸಂಕಗಳ ಬೇಡಿಕೆ ಇದೆ. ಕಾರ್ಯ ರೂಪಕ್ಕೆ ಬಂದಿಲ್ಲ.

ಅವಿಭಕ್ತ ಕುಟುಂಬಗಳಿಂದ ನೆಲೆಸಿದ್ದ ಪಟೇಲ್‌ ಮನೆತನ, ಬರುವೆ ಮನೆತನ ಫಲಾನುಭವಿಗಳ ಬೇಡಿಕೆಗೆ ಅನುಗುಣವಾದ ಶೌಚಾಲಯಗಳು ನಿರ್ಮಾಣವಾಗಿಲ್ಲ. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಬಯಲು ಶೌಚ ಕಿರಿಕಿರಿಯನ್ನುಂಟು ಮಾಡುತ್ತಿದೆ.

ಆಶ್ರಯ ಯೋಜನೆ ಮನೆಗೆ ಹೆಚ್ಚಿದ ಬೇಡಿಕೆ:

ಈ ಭಾಗದ ನಿವಾಸಿಗಳಿಗೆ ಆಶ್ರಯ ಯೋಜನೆ ಮನೆಗಳ ಅಗತ್ಯ ಇದೆ. ಗ್ರಾಮ ಪಂಚಾಯಿತಿಯಲ್ಲಿ ಬೇಡಿಕೆಗೆ ಅನುಗುಣವಾದ ಮನೆಗಳು ಮಂಜೂರಾಗುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದು. ಬಹುತೇಕ ಮನೆಗಳು ಉದುರಿ ಹೋಗುವ ಭೀತಿಯಲ್ಲಿವೆ. ಮಳೆ, ಗಾಳಿ ಸಮಯದಲ್ಲಿ ಆತಂಕಕ್ಕೆ ಕಾರಣವಾಗುತ್ತದೆ.

ವೃದ್ದಾಪ್ಯ ವೇತನ, ವಿಧವಾ ವೇತನ ಆದೇಶ ಪ್ರತಿ ಸಿಕ್ಕಿ ವರ್ಷಗಳೇ ಕಳೆದಿದ್ದರೂ ಹಣ ಮಾತ್ರ ಬರುತ್ತಿಲ್ಲ ಎಂಬುದು ಈ ಭಾಗದ ಫಲಾನುಭವಿಗಳ ಆರೋಪ. ಗ್ರಾಮದಲ್ಲಿ 4 ತೆರೆದ ಬಾವಿಗಳಿವೆ, ಆದರೆ ಮನೆಗಳು ಸಾಕಷ್ಟು ಅಂತರದಲ್ಲಿರುವುದರಿಂದ ನೀರಿಗಾಗಿ ಕಿ.ಮೀ. ಕ್ರಮಿಸಬೇಕಿದೆ. ಇಲ್ಲಿನ ಜನರು ಕೆರೆ,ಗುಮ್ಮಿ ಬಾವಿಯ ನೀರನ್ನೆ ಇಂದಿಗೂ ಆಶ್ರಯಿಸಿದ್ದಾರೆ. ಮನೆ ಮನೆಗೆ ಗಂಗೆ ಪ್ರತಿ ಮನೆಯ ಕುಡಿಯುವ ನೀರಿನ ಬೇಡಿಕೆ ಈಡೇರಿಸುವ ಯೋಜನೆ ಇದಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ, ಹಾಗೂ ಇನ್ನೆಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ಗ್ರಾಮಸ್ಥರದು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7-8 ಕಿ.ಮೀ. ದೂರದಲ್ಲಿರುವ ಮಳಲಿಮಕ್ಕಿಗೆ ಬರಬೇಕು. ಈ ಭಾಗದಲ್ಲಿ ಸಂಪರ್ಕಕ್ಕೆ ಯಾವುದೇ ಮೊಬೈಲ್ ನೆಟ್‌ವರ್ಕ್‌ಗಳಿಲ್ಲ. ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಗುಡ್ಡದ ತುದಿ, ಮರದ ಮೇಲೆ ಅಟ್ಟಣಿಗೆ ನಿರ್ಮಿಸಿಕೊಂಡಿರುವುದು ಸಹ ನಡೆದಿದೆ. ಅದರಲ್ಲಿಯೂ ಮಳೆಗಾಲದಲ್ಲಿ ಸಂಪರ್ಕ ಹಾಗೂ ವಿದ್ಯಚ್ಛಕ್ತಿ ನಿಷ್ಕ್ರೀಯಗೊಂಡಿರುತ್ತದೆ.

ಪಕ್ಕಾ ಬುಡಕಟ್ಟು ಜನಾಂಗದಂತೆ ಬದುಕು ಸಾಗಿಸುತ್ತಿರುವ ಈ ಭಾಗದ ವಾಸಿಗಳು ಭೂಮಿ ಹಕ್ಕಿಗಾಗಿ ಸತತ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರ ಬದುಕಿಗೆ ಯಾವುದೇ ಆಶಾಭಾವ ಮೂಡಿಲ್ಲ. ಅರಣ್ಯ ಇಲಾಖೆಯ ಕಾಯಿದೆಗಳಿಂದಾಗಿ ಭೂಮಿ ಹಕ್ಕು ಗಗನ ಕುಸುಮವಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಬಗರ್ ಹುಕುಂ ಪರ ಧ್ವನಿ ಎತ್ತುವ, ಆಶ್ವಾಸನೆ ಕೊಡುವ ಜನಪ್ರತಿನಿಧಿಗಳು ಚುನಾವಣೆ ನಂತರ ಇತ್ತ ಮುಖ ಮಾಡುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮದ ಸುರೇಶ್.

ಹೊಸದಾಗಿ ಒಂದು ಕೊಳವೆ ಬಾವಿ ಕೊರೆಸಿದ್ದು, ನೀರಿನ ಭವಣೆಯನ್ನು ಎಷ್ಟರ ಮಟ್ಟಿಗೆ ತೀರಿಸುತ್ತದೆ ಎಂದು ಕಾದು ನೋಡಬೇಕು.

‘ಕೆಸಿನಮನೆ ಗ್ರಾಮ ಅತ್ಯಂತ ಹಿಂದುಳಿದ ಗ್ರಾಮವಾಗಿದೆ. ಇಲ್ಲಿನ ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಕುಡಿಯುವ ನೀರು, ಸಮರ್ಪಕ ರಸ್ತೆ ಇಂದಿಗೂ ಈಡೇರಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಕೊಡುತ್ತಿರುವ ಅನುದಾನಗಳು ಸಾಕಾಗುತ್ತಿಲ್ಲ. ಆಶ್ರಯ ಮನೆಗಳ ಬೇಡಿಕೆ ಹೆಚ್ಚಿದೆ. ಬೇಡಿಕೆಗನುಗುಣವಾಗಿ ಆಶ್ರಯ ಮನೆಗಳು ಮಂಜೂರಾಗುತ್ತಿಲ್ಲ. ಗ್ರಾಮ ಪಂಚಾಯಿತಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ಗ್ರಾಮಗಳ ಅಭಿವೃದ್ಧಿ ಮಾಡಬಹುದು’

– ದಾಕ್ಷಾಯಿಣಿ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಬೆಳ್ಳೂರು.

‘ನಮ್ಮೂರು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಯುವಕರು ಹಳ್ಳಿಗಳನ್ನು ತೊರೆದು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು’

– ಶಶಾಂಕ್‌ ಸ್ಥಳೀಯ ನಿವಾಸಿ.

‘ಕೆಸಿನಮನೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಹೊರತು ಪಡಿಸಿದರೆ ದೊಡ್ಡ ಮೊತ್ತದ ಯಾವುದೇ ಕಾಮಗಾರಿಗಳು ಆಗಿಲ್ಲ. ಆಶ್ರಯ ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಪಂಚಾಯಿತಿಗೆ ಬರುವ ಕಡಿಮೆ ಪ್ರಮಾಣದ ಮನೆಗಳಲ್ಲಿ ಆದ್ಯತೆಯ ಮೇರೆಗೆ ಫಲಾನುಭವಿಗಳಿಗೆ ಕೊಡಲಾಗುತ್ತಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಜಿ.ಪಿ.ಎಸ್. ಹರಸಾಹಸ ಪಡಬೇಕಿದೆ.’

ಗ್ರಾಮಗಳ ಜೀರ್ಣೋದ್ಧಾರಕ್ಕಾಗಿ ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳು ಬಿಡುಗಡೆ ಮಾಡಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಆದ್ರೆ ಇಲ್ಲೊಂದು ಗ್ರಾಮ ಸುಮಾರು 70 ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಇಷ್ಟೆಲ್ಲಾ ಸಂಕಷ್ಟ ಅನುಭವಿಸುತ್ತಿರುವ ಈ ಕುಗ್ರಾಮದ ಜನರ ಅಳಲು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವದಿಂದ ಕೊನೆಗೊಳ್ಳಬಹುದೆ ?

ಜಾಹಿರಾತು

LEAVE A REPLY

Please enter your comment!
Please enter your name here