23.2 C
Shimoga
Sunday, November 27, 2022

ಮೊಬೈಲ್‌ಗೆ ಚಾರ್ಜ್ ಮಾಡಿಕೊಡಲು ನಿರಾಕರಿಸಿದ ನೆರೆಮನೆಯವನ ಜೊತೆ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯ !

ಸಾಗರ: ಮೊಬೈಲ್‌ಗೆ ವಿದ್ಯುತ್ ಚಾರ್ಜ್ ಮಾಡಿಕೊಡಲು ನಿರಾಕರಿಸಿದ ನೆರೆಮನೆಯವನ ಜೊತೆ ಆರಂಭಗೊಂಡ ಜಗಳದಿಂದ ನಡೆದ ಹಲ್ಲೆ ವ್ಯಕ್ತಿಯೋರ್ವನ ಸಾವಿನಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಕಾರ್ಗಲ್ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನಿಂದಲೇ ಹೊಡೆತ ತಿಂದ ಮುರಳ್ಳಿ ಮರಾಠಿ ಗ್ರಾಮದ ತಿಮ್ಮಪ್ಪ (52) ಕೊಲೆಯಾಗಿರುವ ದುರ್ದೈವಿ.

ಕಾರ್ಗಲ್ ಪೋಲೀಸ್ ಠಾಣಾ ವ್ಯಾಪ್ತಿಯ ಮುರಳ್ಳಿ ಮರಾಠಿ ಗ್ರಾಮದ ತನ್ನ ಮನೆಯಲ್ಲಿ ವಿದ್ಯುತ್ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ಸಿದ್ದಪ್ಪ (37) ಎಂಬಾತ ಅದೇ ಊರಿನ ಸ್ನೇಹಿತ ತಿಮ್ಮಪ್ಪ ಅವರ ಮನೆಗೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಸೋಮವಾರ ರಾತ್ರಿ ತೆರಳಿದ್ದಾನೆ. ಆದರೆ ತಿಮ್ಮಪ್ಪ ಮೊಬೈಲ್ ಚಾರ್ಜ್ ಮಾಡಿಕೊಡಲು ನಿರಾಕರಿಸಿದ್ದಾನೆ. ಈ ವಿಚಾರದಲ್ಲಿ ಸಿದ್ದಪ್ಪನು ತಿಮ್ಮಪ್ಪ ಮತ್ತು ಆತನ ಹೆಂಡತಿ ಲಕ್ಷ್ಮೀಯೊಂದಿಗೆ ಗಲಾಟೆ ಮಾಡಿ ನಂತರ ಅಲ್ಲೆ ಇದ್ದ ದೊಣ್ಣೆಯನ್ನು ತೆಗೆದುಕೊಂಡು ಮನೆಗೆ ಅಳವಡಿಸಿದ ಡಿಶ್ ಬುಟ್ಟಿಗೆ ಹೊಡೆಯುತ್ತಿದ್ದಾಗ, ಯಾಕೆ ಹೊಡಿತಿಯಾ ? ಎಂದು ಕೇಳಿದ್ದಕ್ಕೆ ತಿಮ್ಮಪ್ಪನಿಗೆ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಎಡಗಣ್ಣಿನ ಹುಬ್ಬಿಗೆ ಹೊಡೆದು ಗಾಯವಾಗಿದೆ.

ಆರೋಪಿ ಸಿದ್ದಪ್ಪ

ಕಣ್ಣಿಗೆ ಬಲವಾದ ಏಟು ಬಿದ್ದರೂ ಸಾರಿಗೆ ವ್ಯವಸ್ಥೆಯ ಕೊರತೆಯ ಹಿನ್ನೆಲೆಯಲ್ಲಿ ಮರುದಿನ ತಿಮ್ಮಪ್ಪ ಅವರನ್ನು ಚಿಕಿತ್ಸೆಗೆ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರ, ಅಲ್ಲಿಂದ ಸಾಗರ ಮತ್ತು ನಂತರದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಪರಿಸ್ಥಿತಿ ಬಿಗಡಾಯಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮಪ್ಪ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಎಎಸ್.ಪಿ ಸಾಗರ ಉಪ ವಿಭಾಗ ರವರ ನೇತೃತ್ವದಲ್ಲಿ ಸಿಪಿಐ ಕಾರ್ಗಲ್ ವೃತ್ತ, ಪಿಐ ಸಾಗರ ಟೌನ್ ಮತ್ತು ಸಿಬ್ಬಂದಿಗಳ ತಂಡವು ಪ್ರಕರಣದ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!