ಮ್ಯಾನ್ಯುಯಲ್ ಸ್ಕಾವೆಂಜರ್ಸ್‍’ಗಳ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚನೆ : ಡಾ||ಆರ್.ಸೆಲ್ವಮಣಿ

0
138

ಶಿವಮೊಗ್ಗ : ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮ್ಯಾನ್ಯುಯಲ್ ಸ್ಕಾವೆಂಜರ್‍ ಗಳ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಈವರೆಗೆ ಸಮೀಕ್ಷೆ ನಡೆಸದಿರುವ ಹಾಗೂ ಬಾಕಿ ಉಳಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಜೂನ್ ಮಾಸಾಂತ್ಯದೊಳಗಾಗಿ ಸಮೀಕ್ಷೆ ನಡೆಸಿ, ಕ್ರೋಡೀಕೃತ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕಾವೆಂಜರ್ ವೃತ್ತಿ ನಿಷೇಧ ಮತ್ತು ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಅಥವಾ ಇತರೆ ಸ್ಥಳಗಳಲ್ಲಿ ನೇರಪಾವತಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಗುತ್ತಿಗೆದಾರರು ಹಾಗೂ ಅಂಗೀಕೃತ ಸಂಸ್ಥೆಯ ಸಹಯೋಗದಲ್ಲಿ ಗುರುತಿನ ಪತ್ರವನ್ನು ನೀಡಲು ಸೂಚಿಸಲಾಗಿದೆ ಎಂದರು.

ಸ್ವಚ್ಚತಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂಧಿಗಳು ತಮ್ಮ ಸುರಕ್ಷತೆಗಾಗಿ ನೀಡಲಾಗಿರುವ ಸುರಕ್ಷತಾ ಪರಿಕರಗಳನ್ನು ಬಳಸದಿರುವುದು ಗಮನಕ್ಕೆ ಬಂದಿದೆ. ಸ್ವಚ್ಚತಾ ಕಾರ್ಮಿಕರು ಈ ಪರಿಕರಗಳನ್ನು ಬಳಸಿಕೊಂಡು ತಮ್ಮ ಆರೋಗ್ಯ ಸುರಕ್ಷತೆಗೆ ಗಮನಹರಿಸುವಂತೆ ಸೂಚಿಸಿದ ಅವರು, ಕಾರ್ಮಿಕರಿಗೆ ನೀಡಿರುವ ಸುರಕ್ಷತಾ ಪರಿಕರಗಳ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಚ್ಚತಾ ಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆಯೆ?, ಅವರಿಗೆ ದೊರೆಯಬೇಕಾದ ಸೇವಾ ಸೌಲಭ್ಯಗಳನ್ನು ಒದಗಿಸಲಾಗಿದೆಯೇ?, ಉಪಹಾರ, ವಸತಿ, ವಿಶ್ರಾಂತಿಗೃಹ ಮುಂತಾದ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈವರೆಗೆ ಆರೋಗ್ಯ ತಪಾಸಣೆ ನಡೆಸದಿರುವ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮುಂದಿನ ಸಭೆಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸ್ವಚ್ಚತಾ ಕಾರ್ಮಿಕರು ನಿವೃತ್ತಿಗೊಂಡಿದ್ದಲ್ಲಿ ಅಂತಹ ಕಾರ್ಮಿಕರ ಕುಟುಂಬದ ಅವಲಂಬಿತರಿಗೆ ಉದ್ಯೋಗಾವಕಾಶ/ನೇಮಕಾತಿಯಲ್ಲಿ ಆದ್ಯತೆ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಉದ್ಯಾನವನಗಳಲ್ಲಿ ಸ್ವಚ್ಚತಾ ಕಾರ್ಮಿಕರ ಅನುಕೂಲಕ್ಕಾಗಿ ಅವಕಾಶವಿರುವೆಡೆಯಲ್ಲಿ ವಿಶ್ರಾಂತಿಗೃಹಗಳನ್ನು ನಿರ್ಮಿಸುವಂತೆ ಸೂಚಿಸಿದ ಅವರು, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಲೋಡರ್ಸ್ ಮತ್ತು ಡ್ರೈವರ್‍ಗಳ ನೇರಪಾವತಿ ವೇತನದಲ್ಲಿದ್ದು, ಇವರಿಗೆ ಕನಿಷ್ಟ ವೇತನ ಮತ್ತು ಇ.ಎಸ್.ಐ./ಪಿ.ಎಫ್. ಜಮೆಯಾಗದಿರುವ ಬಗ್ಗೆ ಅಹವಾಲುಗಳಿದ್ದು, ಕೂಡಲೇ ಈ ಸಂಬಂಧ ಗಮನಹರಿಸುವಂತೆ ಅವರು ಸೂಚಿಸಿದರು.

ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆಯಲ್ಲಿ ಮ್ಯಾನ್ಯುಯಲ್ ಸ್ಕಾವೆಂಜರ್‍ ಗಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಅಹವಾಲುಗಳ ಕೇಳಿ ಬರುತ್ತಿದ್ದು, ಕೂಡಲೇ ಇದನ್ನು ಸರಿಪಡಿಸಿಕೊಳ್ಳುವಂತೆ ಹಾಗೂ ಕಾರ್ಖಾನೆಗಾಗಿ ಪ್ರತ್ಯೇಕವಾದ ಸಕ್ಕಿಂಗ್ ಯಂತ್ರವನ್ನು ಕೊಂಡುಕೊಂಡು ಬಳಸಿಕೊಳ್ಳುವಂತೆ ಸೂಚಿಸಿದ ಅವರು ಇದೇ ಪುನರಾವರ್ತನೆಯಾದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ನಗರ ಯೋಜನಾ ಘಟಕದ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ಜಯಲಕ್ಷ್ಮಮ್ಮ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಸೇರಿದಂತೆ ಜಿಲ್ಲಾ ಜಾಗೃತ ಸಮಿತಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here