ರಿಪ್ಪನ್ಪೇಟೆ : ಇದೇ ಜನವರಿ 13 ರಂದು ನಿಮ್ಮ ‘ಮಲ್ನಾಡ್ ಟೈಮ್ಸ್’ನಲ್ಲಿ “ಖಾಸಗಿಯವರ ಪಾಲಾಗುತ್ತಿರುವ ಸರ್ಕಾರಿ ಆಸ್ಪತ್ರೆಯ ಜಾಗ” ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ವರದಿಗೆ ಇಂದು ತಹಶೀಲ್ದಾರ್ ಎಸ್.ವಿ.ರಾಜೀವ್ ಮತ್ತು ನಾಡಕಛೇರಿಯ ಉಪತಹಶೀಲ್ದಾರ್ ಹಾಗೂ ಸಿಬ್ಬಂದಿ ವರ್ಗ ಒತ್ತುವರಿಯನ್ನು ತೆರವುಗೊಳಿಸಿ ಜೆಸಿಬಿ ಯಂತ್ರದ ಮೂಲಕ ಟ್ರಂಚ್ ನಿರ್ಮಿಸಿ ಆಸ್ಪತ್ರೆಗೆ ಜಾಗವನ್ನು ಉಳಿಸುವತ್ತ ಮುಂದಾದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ರಾಜ್ಯದ ಕಂದಾಯ ಸಚಿವರು ಆಗಿದ್ದ ಕಾಗೋಡು ತಿಮ್ಮಪ್ಪನವರು ಸಾರ್ವಜನಿಕರ ಬೇಡಿಕೆಯಂತೆ ಗವಟೂರು ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿಯನ್ನು ಸಮುದಾಯ ಆಸ್ಪತ್ರೆಗಾಗಿ ಮಂಜೂರು ಮಾಡಿಸಲಾಗಿದ್ದು ಆ ಜಾಗವನ್ನು ಪೋಡಿ ದುರಸ್ಥಿಗೊಳಿಸುವ ಮುನ್ನವೇ ಇಲ್ಲಿನ ಕೆಲವು ಪ್ರತಿಷ್ಟಿತ ವ್ಯಕ್ತಿಯೊಬ್ಬರು ಆ ಜಾಗವನ್ನು ಒತ್ತುವರಿ ಮಾಡಿ ಬೇಲಿ ಹಾಕುವ ಹುನ್ನಾರದಲ್ಲಿ ತೊಡಗಿಕೊಂಡಿದ್ದು ಗ್ರಾಮಾಡಳಿತ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಆಸ್ಪತ್ರೆಯ ನೌಕರವರ್ಗ ಭೇಟಿ ನೀಡಿ ಅಕ್ರಮ ಬೇಲಿ ಹಾಕಿದ ಖಾಸಗಿ ವ್ಯಕ್ತಿಗೆ ಎಚ್ಚರಿಕೆ ನೀಡಲಾದರೂ ಕೂಡಾ ಯಾವುದನ್ನು ಲೆಕ್ಕಿಸದೆ ಏಕಾಏಕಿ ಅಕ್ರಮ ಬೇಲಿ ಹಾಕಿ ಜಾಗವನ್ನು ಕಬಳಿಸುವ ಪ್ರಯತ್ನ ನಡೆಸಲಾಗಿ ಇತ್ತೀಚೆಗೆ ಮ.ಟೈ. ನಲ್ಲಿ ವರದಿ ಪ್ರಕಟಗೊಂಡ ಹಿನ್ನೇಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಇಂದು ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಅಸ್ಪತ್ರೆಗೆ ಮಂಜೂರಾಗಿರುವ ಐದು ಎಕರೆ ಜಾಗದ ಸುತ್ತ ಟ್ರಂಚ್ ಹೊಡೆದು ಯಾರು ಪ್ರವೇಶ ಮಾಡದಂತೆ ಈ ಜಾಗವನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯ್ದಿರಿಸಲಾಗಿದೆ ಎಂದು ನಾಮಫಲಕವನ್ನು ಅಳವಡಿಸಿದರು.