ಯಡಿಯೂರಪ್ಪ, ಈಶ್ವರಪ್ಪ ರಾಜೀನಾಮೆ ನೀಡುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹ

0
312

ಶಿವಮೊಗ್ಗ: ಬಿಜೆಪಿ ಪಕ್ಷದಲ್ಲಿ ಭಿನ್ನಮತದಂತಹ ಘಟನೆಗಳು ನಡೆದಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಈ ಇಬ್ಬರು ರಾಜೀನಾಮೆ ಕೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆ.ಎಸ್.ಈಶ್ವರಪ್ಪನವರು ಮುಖ್ಯಮಂತ್ರಿಗಳ ವಿರುದ್ಧವೇ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಪಕ್ಷದಲ್ಲಿ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕಾದ ವಿಷಯವೊಂದನ್ನು ಸಾರ್ವಜನಿಕವಾಗಿ ಮತ್ತು ಸರ್ಕಾರದ ಪ್ರತಿನಿಧಿಯಾಗಿರುವ ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದು ಸರ್ಕಾರದ ವಿರುದ್ಧವೇ ಸಲ್ಲಿಸಿದಂತಾಗಿದೆ. ಮುಖ್ಯಮಂತ್ರಿಗಳ ಹಸ್ತಕ್ಷೇಪವಿದ್ದರೆ ಅಥವಾ ದೂರು ಕೊಡುವುದಿದ್ದರೆ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನಂತರ ದೂರು ಕೊಡಬೇಕಿತ್ತು. ಹೀಗೆ ಮಾಡದೆ ನೇರವಾಗಿ ದೂರು ಕೊಟ್ಟುವುದರಿಂದ ಈಶ್ವರಪ್ಪ ತಕ್ಷಣವೇ ರಾಜೀನಾಮೆ ಕೊಡಬೇಕಾಗುತ್ತದೆ ಎಂದರು.

ಹಾಗೆಯೇ ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟರು ಕೂಡ ಮುಖ್ಯಮಂತ್ರಿಗಳು ಯಾವ ಕ್ರಮವನ್ನು ತೆಗೆದುಕೊಳ್ಳುವುದೇ ಸುಮ್ಮನಿರುವುದು ನೋಡಿದರೆ ಆಶ್ವರ್ಯವಾಗುತ್ತದೆ. ಕೇವಲ ಈಶ್ವರಪ್ಪ ಮಾತ್ರವಲ್ಲ ಅವರದೆ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿದಿನ ಪ್ರತಿಕ್ಷಣ ಅವರ ವಿರುದ್ಧವೇ ಆರೋಪ ಮಾಡುತ್ತಲೇ ಇದ್ದಾರೆ. ಹಗರಣಗಳ ಬಗ್ಗೆ ದೂರು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಕುಟುಂಬದ ಹಸ್ತಕ್ಷೇಪದ ಬಗ್ಗೆ ನೇರವಾಗಿ ಮಾತನಾಡುತ್ತಿದ್ದಾರೆ. ಇಷ್ಟಾದರೂ ಕೂಡ ಯಡಿಯೂರಪ್ಪ ಸುಮ್ಮನಿದ್ದಾರೆ. ಅದರ ಬದಲು ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ಕೊಡುವುದು ರಾಜ್ಯದ ಹಿತದ ದೃಷ್ಟಿಯಿಂದ ಒಳ್ಳೆಯದು ಎಂದರು.

ಈಶ್ವರಪ್ಪ ಮತ್ತು ಯಡಿಯೂರಪ್ಪನವರ ಕಚ್ಚಾಟದ ನಡುವೆ ರಾಜ್ಯದ ಅಭಿವೃದ್ಧಿಯೇ ನಡೆಯುತ್ತಿಲ್ಲ. ಶಿವಮೊಗ್ಗದ ಅಭಿವೃದ್ಧಿಯಂತೂ ಕುಂಟಿತವಾಗಿದೆ. ಅವೇ ಕಳಪೆ ಕಾಮಗಾರಿಗಳು ಯಾವ ಅಭಿವೃದ್ಧಿಯೂ ಇಲ್ಲ. ಗೋವಿಂದಪುರದಲ್ಲಿ ಆಶ್ರಯ ಮನೆ ಕಟ್ಟಿಸಿಕೊಡುತ್ತೇನೆ ಎಂದು ಹೇಳುವ ಈಶ್ವರಪ್ಪನವರು ಮೊದಲು 5 ಲಕ್ಷ ನಿಗದಿಪಡಿಸಿದ್ದ ಹಣವನ್ನು ಈಗ 7 ಲಕ್ಷಕ್ಕೆ ಹೆಚ್ಚಿಸಿ ಬಡವರಿಗೆ 2 ಲಕ್ಷ ಹೊರೆಯನ್ನಾಗಿ ಮಾಡಿದ್ದಾರೆ. ಅಷ್ಟಕ್ಕೂ ಈ ಆಶ್ರಯ ಮನೆ ಯೋಜನೆ ಕಾಂಗ್ರೆಸ್ ಕಾಲದಲ್ಲಿ ರೂಪಿಸಿದ್ದು, ಇದು ಈಶ್ವರಪ್ಪನವರ ಕನಸಂತು ಅಲ್ಲವೇ ಅಲ್ಲ ಎಂದರು.

ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಸಕ್ಕಿಂತ ಕಡೆ ಎಂದು ಹೇಳಿದ್ದಾರೆ. ಪಾಪ ಅವರಿಗೆ ಗೊತ್ತಿರಕ್ಕಿಲ್ಲ ಈಶ್ವರಪ್ಪನವರನ್ನು ಅವರ ಪಕ್ಷದವರೆ ಕಸಕ್ಕಿಂತ ಕಡೆಯನ್ನಾಗಿ ಮೂಲೆಗುಂಪನ್ನಾಗಿಸಿದ್ದಾರೆ. ಅವರ ಯಾವ ಮಾತಿಗೂ ಬೆಲೆ ಕೊಡುವುದಿಲ್ಲ. ಸುಮ್ಮನೆ ಕೂಗಾಡುತ್ತಾರೆ. ಸಿದ್ದರಾಮಯ್ಯ ನವರಿಗಿರುವ ಸ್ಥಾನಮಾನ ಈಶ್ವರಪ್ಪನವರಿಗೆ ಯಾವ ಕಾಲಕ್ಕೂ ಸಿಗುವುದಿಲ್ಲ. ಅವರ ಪಕ್ಷದ ಶಾಸಕರೆ ಈಶ್ವರಪ್ಪನವರ ಹೇಳಿಕೆಗೆ ಈಗಾಗಲೇ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ನಿಜಕ್ಕೂ ಹತಾಶರಾಗಿದ್ದಾರೆ ಎಂದು ಟೀಕಿಸಿದರು.

ರೆಫೆಲ್ ಯುದ್ದ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೆ ತಿರುವುಗಳು ಪಡೆದಿದ್ದು, ರಾಹುಲ್ ಗಾಂಧಿಯವರ ಆರೋಪಗಳು ಸತ್ಯವಾಗುತ್ತಿವೆ. ದೆಹಲಿಯ ಕೆಲವು ಪತ್ರಿಕೆಗಳು ಈ ಬಗ್ಗೆ ಪ್ರಕಟಿಸಿವೆ. ಪ್ರಧಾನಿ ಈ ಬಗ್ಗೆ ಮೌನ ಮುರಿದು ಹೇಳಿಕೆ ಕೊಡಬೇಕು. ಇಲ್ಲದಿದ್ದರೆ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಪ್ರವೀಣ್, ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಆರ್.ಸಿ.ನಾಯ್ಕ ಸೇರಿದಂತೆ ಹಲವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here