ಯಾವುದೇ ರೈತ ದಲ್ಲಾಳಿಗಳ ಮೇಲೆ ಅವಲಂಬಿತ ಆಗಿರಬಾರದು: ಕುಂಟುವಳ್ಳಿ ವಿಶ್ವನಾಥ್

0
275

ಶಿವಮೊಗ್ಗ: ಯಾವುದೇ ರೈತ ದಲ್ಲಾಳಿಗಳ ಮೇಲೆ ಅವಲಂಬಿತ ಆಗಿರಬಾರದು ಎಂದು ಯುವ ಸಂಶೋಧಕ ಹಾಗೂ ವಿ ಟೆಕ್ ಮೋಟಾರ್ಸ್ ಸಂಸ್ಥಾಪಕರೂ ಆಗಿರುವ ತೀರ್ಥಹಳ್ಳಿಯ ಕುಂಟುವಳ್ಳಿ ವಿಶ್ವನಾಥ್ ಹೇಳಿದರು.

ಮಹಾನಗರ ಪಾಲಿಕೆಯಿಂದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 2007 ರಿಂದ ಕೃಷಿ ಕ್ಷೇತ್ರಕ್ಕೆ, ಅದರಲ್ಲೂ ಅಡಿಕೆ ಬೆಳೆಗಾರರಿಗೆ ಏನಾದರೂ ಸಹಾಯ ಮಾಡಬೇಕೆಂಬ ಕಲ್ಪನೆ ಇರಿಸಿಕೊಂಡು ಸಂಶೋಧನೆ ಮಾಡುತ್ತಾ ಬಂದಿದ್ದೇನೆ. ಅದರ ನಂತರ ಅಡಿಕೆ ಸುಲಿಯುವ ಯಂತ್ರ ಸಂಶೋಧನೆ ಮಾಡಲು ಸಾಧ್ಯವಾಯಿತು. ಡಿಪ್ಲೋಮಾ ಶಿಕ್ಷಣ ಮುಗಿಸಿದ ತಕ್ಷಣ ಹತ್ತಾರು ಕಂಪನಿಗಳು ಉದ್ಯೋಗ ನೀಡುವ‌ ಬಗ್ಗೆ ಆಹ್ವಾನ ನೀಡಿದ್ದವು. ಆದರು ಸ್ವತಃ ಸಂಶೋಧನೆ ಮಾಡಬೇಕೆಂಬ ಆಲೋಚನೆಯಿಂದ ಹೋಗಲಿಲ್ಲ ಎಂದರು.

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ರೈತರು ಸಾಕಷ್ಟು ಸಂಕಟ ಅನುಭವಿಸಿದ್ದಾರೆ. ಎಲ್ಲ ರೈತರೂ ಸ್ವಾವಲಂಬಿ ಬದುಕು ಸಾಗಿಸಬೇಕು ಎಂಬ ಆಶಯ ಹೊಂದಿದ್ದೇನೆ. ನನ್ನನ್ನು ಬೆಳೆಸಿದ ರೈತರು ಕಷ್ಟ ಪಡಬಾರದು. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ, ದೇಶದಲ್ಲಿ ಬೇಕಾದಷ್ಟು ವಿಶ್ವವಿದ್ಯಾಲಯಗಳು, ಸಾವಿರಾರು ಮಂದಿ ವಿಜ್ಞಾನಿಗಳು ಇದ್ದಾರೆ. ಸಂಶೋಧನೆಗೆಂದೇ ಕೋಟ್ಯಂತರ ರೂ. ಬಿಡುಗಡೆ ಆಗುತ್ತಿದೆ. ಆದರೆ ಎಲ್ಲಾ ಸೌಲಭ್ಯ ಇದ್ದರೂ ಅವರುಗಳಿಂದ ಸಾಧ್ಯವಾಗದ ಸಾಧನೆಯನ್ನು ಕುಂಟುವಳ್ಳಿ ವಿಶ್ವನಾಥ್ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಹಿಂದೆ ರೈತರು ಯಾರ ಮೇಲೂ ಅವಲಂಬಿತ ಆಗಿರಲಿಲ್ಲ. ಯಂತ್ರಗಳೂ ಇರಲಿಲ್ಲ. ಸಾಲ ಮಾಡಿಕೊಂಡಿರಲಿಲ್ಲ. ಕೊಟ್ಟಿಗೆ ಗೊಬ್ಬರ ಇತ್ತು. ಮನೆಯಲ್ಲೇ ಎಲ್ಲಾ ಧಾನ್ಯಗಳು ಬೀಜ ಸಂಗ್ರಹ ಇತ್ತು. ಈಗ ಅದೆಲ್ಲವೂ ಮರೆಯಾಗಿದೆ. ಎತ್ತಿನಗಾಡಿ, ನೇಗಿಲು, ಕುಂಟೆ ಯಾವುದೂ ಕಾಣುತ್ತಿಲ್ಲ. ಮುಂದೊಂದು ದಿನ ಇವನ್ನೆಲ್ಲಾ ಮಕ್ಕಳಿಗೆ ಮ್ಯೂಸಿಯಂನಲ್ಲಿ ತೋರಿಸಬೇಕಾದ ಸ್ಥಿತಿ ಬಂದಿದೆ ಎಂದರು.

ರೈತ ದಸರಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಚೆನ್ನಬಸಪ್ಪ, ಸುರೇಖಾ ಮುರುಳೀಧರ, ಸುವರ್ಣ ಶಂಕರ್, ನಾಗರಾಜ ಕಂಕಾರಿ, ಯಮುನಾ ರಂಗೇಗೌಡ, ವಿಶ್ವನಾಥ, ಹೆಚ್.ಸಿ. ಯೋಗೀಶ್ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here