ತೀರ್ಥಹಳ್ಳಿ: ರಕ್ತದಾನ ಮಾಡುವ ಜನರು ಹೃದಯಾಘಾತ ಮತ್ತು ಕ್ಯಾನ್ಸರ್ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಕೆಪಿಸಿಸಿ ಶಿವಮೊಗ್ಗ ಜಿಲ್ಲಾ ವೈದ್ಯರ ಘಟಕದ ಅಧ್ಯಕ್ಷ ಡಾ.ಪ್ರದೀಪ್ ಡಿಮೆಲ್ಲೊ ಅಭಿಪ್ರಾಯಪಟ್ಟರು.
ತೀರ್ಥಹಳ್ಳಿಯಲ್ಲಿ ಪ್ರಶಾಂತಿ ಚಿಕಿತ್ಸಾಲಯ, ಜೆಸಿಐ ತೀರ್ಥಹಳ್ಳಿ ಹಾಗೂ ರೋಟರಿ ಐಎಂಎ ರಕ್ತನಿಧಿ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ನಂತರ ಅವರು ಮಾತನಾಡಿದರು.
ರಕ್ತದಾನ ಮಾಡುವ ಜನರು ನಾಲ್ಕು ವರ್ಷಗಳವರೆಗೆ ಹೆಚ್ಚು ಕಾಲ ಬದುಕುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ. ಕಾಲಕಾಲಕ್ಕೆ ರಕ್ತದಾನ ಮಾಡುವುದರಿಂದ ರಕ್ತವು ರಕ್ತನಾಳಗಳ ಒಳಪದರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ಸಂಶೋಧನೆಯ ಪ್ರಕಾರ ಆಸ್ಪತ್ರೆಗೆ ದಾಖಲಾಗುವ ಪ್ರತಿ 7 ರೋಗಿಗಳಲ್ಲಿ ಒಬ್ಬರಿಗೆ ರಕ್ತದ ಅಗತ್ಯವಿರುತ್ತದೆ. ಅಪಘಾತದ ನಂತರದ ಆಘಾತಗಳು, ಶಸ್ತ್ರಚಿಕಿತ್ಸೆಗಳು, ರಕ್ತಹೀನತೆ, ಕ್ಯಾನ್ಸರ್ ಮತ್ತು ಗರ್ಭಾವಸ್ಥೆಯನ್ನು ಒಳಗೊಂಡ ಸಂದರ್ಭಗಳಲ್ಲಿ ರಕ್ತದ ಅಗತ್ಯವು ಸಾಕಷ್ಟು ಉದ್ಭವಿಸುತ್ತದೆ. ಹಾಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವುದು ಅವಶ್ಯಕ ಎಂದು ಹೇಳಿದರು.
ಕೊರೊನಾ ಬಂದ ಮೇಲಂತೂ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಅದೆಷ್ಟೋ ರೋಗಿಗಳೂ ಸಾವನ್ನಪ್ಪಿದ ಘಟನೆ ನಾವು ದಿನನಿತ್ಯ ಕೇಳಿದ್ದೇವೆ. ಸರ್ಕಾರಗಳು, ಸಂಘ ಸಂಸ್ಥೆಗಳು ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಲೇ ಇದೆ. ಆದರೂ ಅನೇಕರು ರಕ್ತದಾನಕ್ಕೆ ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ ಎಂದರು.
ಜಗತ್ತಿನ ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ತಿಳಿದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೀವ ಉಳಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ಏಕೆಂದರೆ, ರಕ್ತದಾನ ಶ್ರೇಷ್ಠದಾನ. ಪ್ರತಿಯೊಬ್ಬ ಆರೋಗ್ಯವಂತ ಜನರು ರಕ್ತ ನೀಡುವ ಮೂಲಕ ಜೀವ ಉಳಿಸುವ ನಿಟ್ಟಿನಲ್ಲಿ ಶಪಥ ಮಾಡಬೇಕಿದೆ ಎಂದು ಅವರು ಹೇಳಿದರು.
Related