ರಕ್ತದಾನದ ಮೂಲಕ ಕ್ರಿಯಾಶೀಲ ಸಮಾಜ ನಿರ್ಮಾಣ ಸಾಧ್ಯ ; ನಾಗರಾಜ್ ಶೆಟ್ಟಿ

0
487

ಹೊಸನಗರ: ರಕ್ತದಾನದಿಂದ ಕ್ರಿಯಾಶೀಲ ಸಮಾಜದ ನಿರ್ಮಾಣ ಸಾಧ್ಯ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ನಾಗರಾಜ್ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಬಟ್ಟೆಮಲ್ಲಪ್ಪದ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹರಿದ್ರಾವತಿ ಹಾಗೂ ಮೆಗ್ಗಾನ್ ಆಸ್ಪತ್ರೆ ರಕ್ತನಿಧಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಕೇವಲ ಜೀವದಾನ ಮಾತ್ರ ಮಾಡುವುದಿಲ್ಲ. ಬದಲಿಗೆ ಜನಸಾಮಾನ್ಯರ ಮನಸ್ಸುಗಳನ್ನು ಬೆಸೆಯುವ ಕೆಲಸ ಕೂಡ ಮಾಡುತ್ತದೆ. ಹೀಗಾಗಿ ಇಂತಹ ಶಿಬಿರಗಳು ಹಳ್ಳಿಗಳಲ್ಲಿ ಇನ್ನಷ್ಟು ಹೆಚ್ಚಬೇಕು ಎಂದು ಹೇಳಿದರು.

ಇಂದಿನ ಸಾಮಾಜಿಕ ವಾತಾವರಣ ತುಂಬಾ ಹದಗೆಡುತ್ತಿದೆ. ಸಾಮಾಜಿಕ ಬದುಕು ಕೂಡ ಅನಾರೋಗ್ಯಕ್ಕೆ ಒಳಗಾಗುತ್ತಿದೆ. ಹೀಗಾಗಿ ಸಾಮಾಜಿಕ ಚಟುವಟಿಕೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಉತ್ತಮ ವೇದಿಕೆ ಎಂದ ಅವರು ಸಮಾಜದ ಕ್ರಿಯಾಶೀಲತೆಗೆ ಇಂತಹ ಶಿಬಿರಗಳು ಇನ್ನಷ್ಟು ಉತ್ತೇಜನ ಕೊಡುವಂತಾಗಬೇಕು ಎಂದರು.

ಶ್ರೀ ವ್ಯಾಸ ಮಹರ್ಷಿ ಗುರುಕುಲ ನಿಸ್ವಾರ್ಥದಿಂದ ಇಂತಹ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬರುತ್ತಿದೆ. ಯಾವತ್ತಿಗೂ ಹೆಸರು, ಪ್ರಚಾರ ಭಯಸದೆ, ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿದ ಹಿರಿಮೆ ಗುರುಕುಲಕ್ಕೆ ಸಲ್ಲಬೇಕು ಎಂದು ಗುರುಕುಲದ ಪೋಷಕರ ಸಮಿತಿ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ ಹೇಳಿದರು.

ಶ್ರೀ ವ್ಯಾಸ ಮಹರ್ಷಿ ಗುರುಕುಲ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶಿಬಿರಗಳು ಹತ್ತಾರು. ಇವುಗಳಿಂದಾಗಿ ಊರಿನ ಹಿರಿಮೆ ಕೂಡಾ ಹೆಚ್ಚಿದೆ. ಆದರೆ, ಗುರುಕುಲಕ್ಕೆ ಸ್ಥಳೀಯರ ಸಹಕಾರ, ಸಹಭಾಗಿತ್ವ ಇನ್ನಷ್ಟು ಹೆಚ್ಚಬೇಕಿದೆ ಎಂದು ಅವರು ಹೇಳಿದರು.

ಕೇವಲ ಸರಕಾರಿ ಸೇವೆಗಳಿಂದ ಮಾತ್ರ ಜನರ ಬಳಿಗೆ ತಲುಪುವುದು ಕಷ್ಟ. ಸರಕಾರಿ ಸೇವೆಗಳಿಗೆ ಸ್ಥಳೀಯ ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಮಾತ್ರ ಜನರ ಬಳಿಗೆ ಯಶಸ್ವಿಯಾಗಿ ಕೊಂಡೊಯ್ಯಲು ಸಾಧ್ಯ ಎಂದು ಹರಿದ್ರಾವತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅರೋಗ್ಯ ಮೇಲ್ವಿಚಾರಕ ಪ್ರಭಾಕರ್ ಹೇಳಿದರು.

ಶಿಬಿರದ ಮೇಲ್ವಿಚಾರಣೆ ವಹಿಸಿದ್ದ ಅವರು, ಬಟ್ಟೆಮಲ್ಲಪ್ಪದಂತಹ ಗ್ರಾಮದಲ್ಲಿ ನಿರಂತರವಾದ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುವುದು ಊರಿನ ಜೀವಂತಿಕೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಶಿಬಿರದಲ್ಲಿ ಮೆಗ್ಗಾನ್ ರಕ್ತ ನಿಧಿ ವ್ಯವಸ್ಥಾಪಕ ಹನುಮಂತಪ್ಪ, ಜೆಸಿಐ ಹೊಸನಗರ ಕೊಡಚಾದ್ರಿ ಅಧ್ಯಕ್ಷೆ ಸಿಮಾ ಕಿರಣ್, ಹರಿದ್ರಾವತಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ, ರಕ್ತನಿಧಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಶ್ರೀ ವ್ಯಾಸ ಮಹರ್ಷಿ ಗುರುಕುಲದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಗುರುಕುಲದ ಮುಖ್ಯಸ್ಥ ಮಂಜುನಾಥ್ ಎಸ್. ಬ್ಯಾಣದ ಸ್ವಾಗತಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here