ರಾಜಾರೋಷವಾಗಿ ಹತ್ಯೆ ಮಾಡುವವರಿಗೆ ಬಂದೂಕಿನ ಮೂಲಕವೇ ಉತ್ತರ ಕೊಡಬೇಕು ; ಶಾಸಕ ಹರತಾಳು ಹಾಲಪ್ಪ

0
343

ಸಾಗರ : ರಾಜಾರೋಷವಾಗಿ ಹತ್ಯೆ ಮಾಡುವವರಿಗೆ ಬಂದೂಕಿನ ಮೂಲಕವೇ ಉತ್ತರ ಕೊಡಬೇಕು. ಪೊಲೀಸರ ಕೈಗೆ ಕೋಲು ಕೊಟ್ಟು ಉಪಯೋಗಿಸಲು ಹೇಳಿದರೆ ಸಾಲದು, ಸಂದರ್ಭ ಬಂದಾಗ ಬರ್ಬರವಾಗಿ ಹತ್ಯೆ ಮಾಡುವವರನ್ನು ಸ್ಥಳದಲ್ಲಿಯೇ ಶಿಕ್ಷಿಸಲು ಪೊಲೀಸರಿಗೆ ಕೋವಿ ಚಲಾಯಿಸಲು ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಸರ್ಕಾರದ ಜೊತೆ ಸಹ ಮಾತುಕತೆ ನಡೆಸಲಾಗುತ್ತದೆ ಎಂದು ಶಾಸಕ ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ಚಾಮರಾಜಪೇಟೆಯಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಗುರುವಾರ ಅಧಿವೇಶನವನ್ನು ಹಾಳು ಮಾಡಿದ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಕಾಂಗ್ರೇಸ್ ವರ್ತನೆ ಖಂಡಿಸಿ, ಹಿಂದೂ ಹರ್ಷ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಹಿಂದೂ ಹರ್ಷ ಕೊಲೆಯಾಗಿಲ್ಲ. ಅವರು ಹುತಾತ್ಮರಾಗಿದ್ದಾರೆ. ಅವರ ಸಾವು ವ್ಯರ್ಥವಾಗಲು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬಿಡುವುದಿಲ್ಲ. ಕೊಲೆ ಮಾಡಿದವರಿಗೆ ಸರ್ಕಾರ ಕ್ಯಾಪಿಟಲ್ ಫನಿಶ್‌ಮೆಂಟ್ ಕೊಡಬೇಕು. ನಿರ್ಧಾಕ್ಷಿಣ್ಯವಾಗಿ ಹತ್ಯೆ ಮಾಡುವ ಇಂತಹವರಿಗೆ ಕೋವಿಯಿಂದಲೆ ಉತ್ತರ ನೀಡಬೇಕು. ಪೊಲೀಸರು 24ಗಂಟೆಯೊಳಗೆ ಆರೋಪಿಗಳನ್ನು ಹಿಡಿದಿದ್ದಾರೆ. ಇದಕ್ಕಿಂತಲೂ ಮೊದಲು ಆರೋಪಿಗಳ ಹೆಡೆಮುರಿ ಕಟ್ಟಬೇಕಾಗಿತ್ತು ಎಂದು ಆಕ್ರೋಶದಿಂದ ಹೇಳಿದರು.

ಕುಮಾರಸ್ವಾಮಿ ಬಾಂಬ್‌ನಿಂದ ಬಚಾವಾಗಲು ತಂತ್ರ :

ಕಾಂಗ್ರೆಸ್ ಪಕ್ಷದವರು ಕುಮಾರ ಸ್ವಾಮಿ ಬಾಂಬ್‌ನಿಂದ ಬಚಾವಾಗಲು ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎನ್ನುವ ಪ್ರಹಸನ ಸೃಷ್ಟಿ ಮಾಡಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುವುದಕ್ಕಿಂತ ಒಂದೆರಡು ದಿನ ಮೊದಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿ ಅಧಿವೇಶನದಲ್ಲಿ ತಾವು ಪ್ರಧಾನ ಭಾಷಣ ಮಾಡುತ್ತೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ ಬಿಚ್ಚಿಡುತ್ತೇನೆ. ಜೊತೆಗೆ ಮೇಕೆದಾಟು ಪಾದಯಾತ್ರೆ ಬಗ್ಗೆ ಸಹ ಹೇಳುತ್ತೇನೆ ಎಂದು ಹೇಳಿಕೆ ನೀಡಿದ್ದರು. ಸ್ವತಃ ತಮ್ಮ ಪಕ್ಷದ ಭಾಗವಾಗಿ ಸರ್ಕಾರ ನಡೆಸಿದ ಕುಮಾರಸ್ವಾಮಿಯವರು ನೀಡಿದ ಹೇಳಿಕೆಯಿಂದ ಕಾಂಗ್ರೆಸ್ಸಿಗರು ಕಂಗಾಲಾಗಿದ್ದಾರೆ. ಎಲ್ಲಿ ತಮ್ಮ ಬಣ್ಣ ಬಯಲಾಗುತ್ತದೆಯೋ ಎಂದು ಈಶ್ವರಪ್ಪ ರಾಜೀನಾಮೆ ತಂತ್ರವನ್ನು ಮುಂದಿರಿಸಿಕೊಂಡು ಸದನದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ ಎಂದರು.

ಸದನ ಆರಂಭವಾಗಿ ಮೂರು ದಿನಗಳ ಕಾಲ ಚೆನ್ನಾಗಿ ನಡೆದಿದೆ. ರಾಜ್ಯಪಾಲರ ಭಾಷಣದ ಮೇಲೆ ಕುಡುಜಿ ಶಾಸಕ ಪಿ.ರಾಜೀವ್ ವಿಸ್ತೃತವಾಗಿ ಮಾತನಾಡಿದ್ದಾರೆ. ಇದೆಲ್ಲವನ್ನೂ ಕೇಳಿದ ವಿಪಕ್ಷ ಕಾಂಗ್ರೆಸ್ ಸದನ ಇನ್ನು ನಡೆದು ಕುಮಾರಸ್ವಾಮಿ ಭಾಷಣ ಮಾಡಿ ತಮ್ಮ ಬಂಡವಾಳ ಬಯಲು ಮಾಡುತ್ತಾರೆ ಎಂದು ಹೆದರಿದ್ದರು. ಇದರಿಂದಾಗಿ ಈಶ್ವರಪ್ಪ ಅವರು ಲೋಕಾಭಿರಾಮವಾಗಿ ಮಾತನಾಡಿದ ವಿಷಯವನ್ನು ಮುಂದಿಟ್ಟು ಕೊಂಡು ಸದನದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಇಂತಹದ್ದಕ್ಕೆಲ್ಲ ಈಶ್ವರಪ್ಪ ಹೆದರುವುದಿಲ್ಲ. ಈಶ್ವರಪ್ಪ ಅವರಿಗೆ ಅತ್ತಿಲ್ಲ… ಇತ್ತಿಲ್ಲ. ಎದುರಿಗೆ ಬಂದವರನ್ನು ಡಿಕ್ಕಿ ಹೊಡೆದುಕೊಂಡು ಹೋಗುವ ಶಕ್ತಿ ಇದೆ. ಅಹೋರಾತ್ರಿ ಧರಣಿ ಕೈಬಿಡಿ ಎಂದು ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳು, ವಿಧಾನಸಭಾಧ್ಯಕ್ಷರು ಕಾಂಗ್ರೆಸ್ಸಿಗರಿಗೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ನಾನು ಸಹ ಅವರ ಜೊತೆಗೆ ಇದ್ದವನು. ಕಾಂಗ್ರೆಸ್ಸಿಗರು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಸದನವನ್ನು ಹಾಳು ಮಾಡುವ ಮೂಲಕ ಬೊಕ್ಕಸ ಹಾನಿ, ಬೌದ್ಧಿಕ ನಷ್ಟಕ್ಕೆ ಕಾರಣವಾಗಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಹಿಂದೆ ದೊಡ್ಡದೊಡ್ಡ ಗ್ಯಾಂಗ್‌ಸ್ಟಾರ್ ಜೊತೆಗೆ ಇದ್ದವರು ಈಗ ಕಾಂಗ್ರೆಸ್ ಜೊತೆ ಸೇರಿ ವಿಧಾನಸಭೆಯಲ್ಲಿದ್ದಾರೆ. ಬಿ.ಕೆ.ಹರಿಪ್ರಸಾದ್‌ರಂತಹವರು ವಿಧಾನ ಪರಿಷತ್‌ನ ಘನತೆಯನ್ನು ಹಾಳು ಮಾಡುವ ಕೆಲಸ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್‌ನವರು ರಾಷ್ಟ್ರಧ್ವಜದ ಬಗ್ಗೆ ಹೇಳುವ ಅಗತ್ಯವಿಲ್ಲ. ಶ್ರೀನಗರದ ಲಾಲ್‌ಚೌಕ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದು ಬಿಜೆಪಿ ಸಾಮಾನ್ಯ ಕಾರ್ಯಕರ್ತರು ಎನ್ನುವುದನ್ನು ಕಾಂಗ್ರೆಸ್ ನೆನಪಿಸಿಕೊಳ್ಳಬೇಕು. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಹರ್ಷ ಕೊಲೆಗೆ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಯೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಪರೋಕ್ಷವಾಗಿ ಕೆಲವರು ಪ್ರೇರಿತರಾಗಿ ಹರ್ಷ ಕೊಲೆ ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯ ಆರ್.ಶ್ರೀನಿವಾಸ್, ಸಂತೋಷ್ ಶೇಟ್, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಇನ್ನಿತರರು ಹಾಜರಿದ್ದರು. ಸುರೇಶ್ ಪ್ರಾರ್ಥಿಸಿದರು. ಗಣೇಶಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪರಶುರಾಮ್ ವಂದಿಸಿದರು. ಸತೀಶ್ ಕೆ. ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here