ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಳಪೆ ಗೃಹಮಂತ್ರಿ ಆರಗ ಜ್ಞಾನೇಂದ್ರ : ಬಿ ಕೆ ಹರಿಪ್ರಸಾದ್ ವಾಗ್ದಾಳಿ

0
255

ತೀರ್ಥಹಳ್ಳಿ : ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಸಂಪೂರ್ಣ ಬದಲಾಗಿದೆ. ರಾಜ್ಯದ ಇತಿಹಾಸದಲ್ಲಿ ಇಂತಹ ಕಳಪೆ ಗೃಹಮಂತ್ರಿಯನ್ನು ನೋಡಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರತಿ ಗೃಹಸಚಿವರು ಸಹ ಅವರದ್ದೇ ಶೈಲಿಯಿಂದ ಕಾರ್ಯನಿರ್ವಹಣೆ ಮಾಡಿದ್ದಾರೆ. ಆದರೆ, ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ ಅವರು ಮೊದಲ ದಿನದಿಂದಲೇ ವೈಫಲ್ಯ ಅನುಭವಿಸಿದ್ದಾರೆ. ಮೈಸೂರಿನ ಅತ್ಯಾಚಾರ ಪ್ರಕರಣ, ಶಿವಮೊಗ್ಗ ಕೊಲೆ ಪ್ರಕರಣ ಯಾವುದೇ ಇರಲಿ. ಗೃಹಸಚಿವರು ಜವಾಬ್ದಾರಿಯುತವಾಗಿ ಮಾತನಾಡುವ ಕೆಲಸ ಸಹ ಮಾಡಲಿಲ್ಲ. ಗೃಹ ಸಚಿವರಾದವರು ರಾಜ್ಯ ವ್ಯಾಪಿ ಕೆಲಸ ಮಾಡಬೇಕು. ಆದರೆ ಆರಗ ಜ್ಞಾನೇಂದ್ರ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಗೆ ಸೀಮಿತರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇನ್ನು ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಯಲ್ಲೂ ಅದೇ ಪರಿಸ್ಥಿತಿ ಇದೆ. ರಾಜ್ಯದಲ್ಲಿ ನಡೆದ ಪಿಎಸ್ಐ ಹಗರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ಅವರನ್ನು ಕೂಡ ವಿಚಾರಣೆ ಮಾಡುತ್ತಿದ್ದಾರೆ. ಇಷ್ಟಾದರೂ ಗೃಹ ಸಚಿವರು ರಾಜೀನಾಮೆ ಕೊಡುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಹಗರಣವಾದರೂ ಗೃಹಸಚಿವರ ತಲೆದಂಡವಾಗಿಲ್ಲ. ತಕ್ಷಣವೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು. ಸಿಎಂ ಬೊಮ್ಮಾಯಿ ಗೃಹಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ವರದಿ : ಅಕ್ಷಯ್ ಕುಮಾರ್
ಜಾಹಿರಾತು

LEAVE A REPLY

Please enter your comment!
Please enter your name here